ಪುತ್ತೂರು: 'ಸಾಹಿತ್ಯ ಸೌರಭ' ಬೋಳಂತಕೋಡಿ ಪ್ರಶಸ್ತಿ ಪ್ರಧಾನ ಸಮಾರಂಭ

Update: 2018-12-16 16:25 GMT

ಪುತ್ತೂರು, ಡಿ. 16: ವೃತ್ತಿಯಲ್ಲಿ ವಕೀಲರಾಗಿದ್ದು, ಪತ್ರಕರ್ತ, ಸಾಹಿತಿ ಜೊತೆಗೆ ಸಂಸಾರಿಯೂ ಆಗಿದ್ದ ಬೋಳಂತಕೋಡಿಯವರು ವೈಶಿಷ್ಟ್ಯಪೂರ್ಣ ವ್ಯಕ್ತಿತ್ವದವರಾಗಿದ್ದರು ಎಂದು ನ್ಯಾಯವಾದಿ ಕೆ.ಆರ್.ಆಚಾರ್ಯ ಹೇಳಿದರು.

ಅವರು ಬೋಳಂತಕೋಡಿ ಅಭಿಮಾನಿ ಬಳಗದ ವತಿಯಿಂದ ಟೌನ್‍ಬ್ಯಾಂಕ್ ಸಭಾಂಗಣದಲ್ಲಿ ಶನಿವಾರ ಸಂಜೆ ನಡೆದ ಬೋಳಂತಕೋಡಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬೋಳಂತಕೋಡಿ ಸಂಸ್ಮರಣೆ ಮಾಡಿದರು.

ಡಾ.ಶಿವರಾಮ ಕಾರಂತರ ಹುಟ್ಟುಹಾಕಿದ ಪುತ್ತೂರು ದಸರಾ ನಾಡಹಬ್ಬದ ರೂವಾರಿಯಾಗಿದ್ದ ಅವರು, ನೇರ, ನಡೆ-ನುಡಿಯ ಆದರ್ಶಪರ ವಕೀಲರೂ ಆಗಿದ್ದರು. ಸಮಾನ ಮನಸ್ಕರ ಜತೆ ಒಡನಾಟ ಹೊಂದಿದ್ದ ಅವರು ಹಣದ ಗಳಿಕೆಗೆ ಆಸೆ ಪಟ್ಟವರಲ್ಲ. ಹಣವೇ ಅವರನ್ನು ಹುಡುಕಿಕೊಂಡು ಬರುತ್ತಿತ್ತು ಎಂದರು.

ಈ ಸಂದರ್ಭದಲ್ಲಿ ಮಕ್ಕಳಲ್ಲಿ ಅಕ್ಷರಕಲಿಕೆಯನ್ನು ಬಿತ್ತಿದ ಮಂಗಳೂರಿನ ಶ್ರೀನಿವಾಸ ರಾವ್ ಮತ್ತು ಸಾವಿತ್ರಿ ರಾವ್ ದಂಪತಿಗೆ `ಬೋಳಂತಕೋಡಿ ಪ್ರಶಸ್ತಿ' ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಾವಿತ್ರಿ ರಾವ್, ಕೇವಲ ಪ್ರಶಸ್ತಿಗಾಗಿ ಕೆಲಸ ಮಾಡಬಾರದು. ಎಲೆಮರೆ ಕಾಯಿಯಂತೆ ಇದ್ದು ನಮ್ಮ ಆತ್ಮತೃಪ್ತಿಗಾಗಿ ಕೆಲಸ ಮಾಡುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇದೀಗ ದೊರೆತ ಪ್ರಶಸ್ತಿಗೆ ಋಣಿಯಾಗಿದ್ದೇನೆ ಎಂದರು.

ನಿವೃತ್ತ ಪ್ರಾಧ್ಯಾಪಕ ಮಹಾಲಿಂಗ ಭಟ್ ಅಡ್ಯನಡ್ಕ ಅಭಿನಂದನಾ ಭಾಷಣ ಮಾಡುತ್ತಾ ಸಮಾಜದಲ್ಲಿ ಸ್ವಾರ್ಥಿ-ನಿಸ್ವಾರ್ಥಿ ಎಂಬ ಎರಡು ವಿಧದ ವ್ಯಕ್ತಿಗಳಿದ್ದು, ಬೋಳಂತಕೋಡಿಯವರು ಎರಡನೇ ಸಾಲಿಗೆ ಸೇರಿದವರು. ಇಂದು ಪ್ರಶಸ್ತಿ ಪುರಸ್ಕøತರಾದ ಶ್ರೀನಿವಾಸ ರಾವ್ ದಂಪತಿ ಮಕ್ಕಳ ಸಾಹಿತ್ಯ ಸಂಗಮ ಸಂಸ್ಥೆಯನ್ನು ಹುಟ್ಟುಹಾಕಿ 24 ವರ್ಷಗಳಿಂದ ಶಾಲೆಗಳಲ್ಲಿ ಸಾಹಿತ್ಯ ಪ್ರೀತಿ ಬೆಳೆಸುವುದು, ಸಾಹಿತ್ಯ ಕಮ್ಮಟ ಮಾಡುವುದು, ಮಕ್ಕಳು ರಚಿಸಿದ ಕಥೆಗಳನ್ನು ಪ್ರಕಟಣೆ ಮೂಲಕ ತರುವುದು ಒಟ್ಟಾರೆಯಾಗಿ ಮಕ್ಕಳಲ್ಲಿ ಸಾಹಿತ್ಯಾಸಕ್ತಿಯನ್ನು ಬೆಳೆಸುವಲ್ಲಿ ಅವಿರತ ಶ್ರಮ ವಹಿಸಿದವರು. ಅವರಿಗೆ ಬೋಳಂತಕೋಡಿ ಪ್ರಶಸ್ತಿ ನಿಜವಾಗಿ ಸಲ್ಲುವಂತದ್ದು ಎಂದರು.

ವಿವೇಕಾನಂದ ಕಾಲೇಜು ಪ್ರಿನ್ಸಿಪಾಲ್ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ಜೀವನ ಎಂದರೆ ಅವಕಾಶ. ಅದರ ಸದುಪಯೋಗ ಯಾವಾಗ ಆಗುತ್ತದೆ ಆಗಲೇ ಜೀವನಕ್ಕೆ ಅರ್ಥ ತರಬಹುದು. ಈ ನಿಟ್ಟಿನಲ್ಲಿ ತನ್ನ ಜೀವನದ ದೀರ್ಘ ಕಾಲಿಕ ಶ್ರಮಕ್ಕೆ ಶ್ರೀನಿವಾಸ್ ರಾವ್ ದಂಪತಿಗೆ ಪ್ರಶಸ್ತಿ ನೀಡಿರುವುದು ಶ್ಲಾಘನೀಯ ಎಂದರು.

ರಾಜೇಶ್ ಪವರ್ ಪ್ರೆಸ್ ಮಾಲಕ ಎಂ.ಎಸ್.ರಘುನಾಥ ರಾವ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಐತ್ತಪ್ಪ ನಾಯ್ಕ್ ಉಪಸ್ಥಿತರಿದ್ದರು. 

ಜ್ಞಾನಗಂಗಾ ಪುಸ್ತಕ ಪ್ರಕಾಶನದ ಪ್ರಕಾಶ್ ಕೊಡಂಕಿರಿ ಸ್ವಾಗತಿಸಿದರು. ನಿವೃತ್ತ ಶಿಕ್ಷಕ ಸುರೇಶ್ ಶೆಟ್ಟಿ ಅತಿಥಿಗಳಿಗೆ ಸ್ಮರಣಿಕೆ ನೀಡಿದರು. ಪದ್ಮ ಕೆ.ಆರ್.ಆಚಾರ್ಯ ವಂದಿಸಿದರು. ಅವಿನಾಶ್ ಕೊಡೆಂಕಿರಿ ಕಾರ್ಯಕ್ರಮ ನಿರೂಪಿಸಿದರು. ನಾ ಕಾರಂತ ಪೆರಾಜೆ ಸಹಕರಿಸಿದರು. ಬಳಿಕ ಧೀಶಕ್ತಿ ಮಹಿಳಾ ಯಕ್ಷಗಾನ ತಂಡದವರಿಂದ ತಾಳಮದ್ದಳೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News