ಹವಾಮಾನ ಕುರಿತು ಪೋಲಂಡ್ ಮಾತುಕತೆಗಳ ಫಲಿತಾಂಶ ಸಕಾರಾತ್ಮಕ: ಭಾರತ

Update: 2018-12-16 16:42 GMT

ಹೊಸದಿಲ್ಲಿ, ಡಿ.16: ಪೋಲಂಡ್‌ನ ಕಾಟೊವೈಸ್‌ನಲ್ಲಿ ನಡೆದ ಹವಾಮಾನ ಕುರಿತ ಮಾತುಕತೆಗಳ ಫಲಿತಾಂಶ ಸಕಾರಾತ್ಮಕವಾಗಿದೆ ಮತ್ತು ಅದು ವಿಶ್ವದ ದೇಶಗಳು ಐತಿಹಾಸಿಕ ಪ್ಯಾರಿಸ್ ಒಪ್ಪಂದವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಮಾರ್ಗವನ್ನು ನಿಗದಿಗೊಳಿಸಿದೆ ಎಂದು ಭಾರತವು ರವಿವಾರ ಬಣ್ಣಿಸಿದೆ. ದೇಶದ ಪ್ರಮುಖ ಹಿತಾಸಕ್ತಿಗಳನ್ನು ರಕ್ಷಿಸುವುದರೊಂದಿಗೆ ಮಾತುಕತೆಗಳಲ್ಲಿ ತಾನು ರಚನಾತ್ಮಕವಾಗಿ ತೊಡಗಿಕೊಂಡಿದ್ದೆ ಎಂದು ಅದು ಒತ್ತಿ ಹೇಳಿದೆ.

ಎರಡು ವಾರಗಳ ಶೃಂಗಸಭೆಯ ಬಳಿಕ ರವಿವಾರ ಸುಮಾರು 200 ದೇಶಗಳ ಸಂಧಾನಕಾರರು ಜಾಗತಿಕ ತಾಪಮಾನವನ್ನು ನಿಯಂತ್ರಿಸಲು 2015ರ ಪ್ಯಾರಿಸ್ ಒಪ್ಪಂದವನ್ನು 2020ರಲ್ಲಿ ಅನುಷ್ಠಾನಗೊಳಿಸಲು ನಿಯಮಗಳನ್ನು ಅಂತಿಮಗೊಳಿಸಿದರು. ಜಾಗತಿಕ ತಾಪಮಾನ ಏರಿಕೆಯನ್ನು 2 ಸೆಂಟಿಗ್ರೇಡ್‌ಗಳಿಗೂ ಕಡಿಮೆ ಪ್ರಮಾಣಕ್ಕೆ ಸೀಮಿತಗೊಳಿಸಲು ಮಾತುಕತೆಯ ವೇಳೆ ನಿರ್ಧರಿಸಲಾಗಿದೆ.

 ಪ್ಯಾರಿಸ್ ಒಪ್ಪಂದದ ಅನುಷ್ಠಾನಕ್ಕಾಗಿ ಮಾರ್ಗಸೂಚಿಗಳು, ವಿಧಿವಿಧಾನಗಳು ಮತ್ತು ನಿಯಮಗಳ ಅಂತಿಮಗೊಳಿಸುವಿಕೆ, 2018ರ ತಲನೋವಾ ಮಾತುಕತೆಗಳ ಸೇರ್ಪಡೆ ಮತ್ತು 2020ಕ್ಕೆ ಅನುಷ್ಠಾನಕ್ಕೆ ಮುನ್ನ ಪುನರ್‌ಪರಿಶೀಲನೆ ಈ ಮೂರು ಪ್ರಮುಖ ಅಂಶಗಳ ಮೇಲೆ ಗಮನವನ್ನು ಕೇಂದ್ರೀಕರಿಸಿದ್ದರಿಂದ ಪೋಲಂಡ್ ಶೃಂಗಸಭೆ ಅಥವಾ ಸಿಒಪಿ-24 ಮಹತ್ವವನ್ನು ಪಡೆದುಕೊಂಡಿತ್ತು.

 ಆದರೆ ಶೃಂಗಸಭೆಯಲ್ಲಿ ಭಾಗವಹಿಸಿದ್ದ, ಭಾರತದ ಪ್ರಮಖ ವಾತಾವರಣ ಸಮರ್ಥಕ ಸಂಸ್ಥೆಯಾಗಿರುವ ಸೆಂಟರ್ ಫಾರ್ ಸೈನ್ಸ್ ಆ್ಯಂಡ್ ಎನ್ವಿರಾನ್ಮೆಂಟ್‌ನ ಉಪ ಮಹಾ ನಿರ್ದೇಶಕ ಚಂದ್ರಭೂಷಣ್ ಅವರು,ಸಿಒಪಿ-24 ರೂಪಿಸಿರುವ ನಿಯಮಗಳು ದುರ್ಬಲವಾಗಿವೆ ಮತ್ತು ಇವು ಏತಕ್ಕೂ ಸಾಲದು. ವಾತಾವರಣ ಬದಲಾವಣೆ ಕುರಿತ ಅಂತರ್‌ ಸರಕಾರೀ ಸಮಿತಿಯ ವರದಿಯನ್ನು ಪರಿಗಣಿಸಲು ಸಿಒಪಿ ನಿರಾಕರಿಸಿರುವುದು ಪ್ಯಾರಿಸ್ ಒಪ್ಪಂದದ ಆಶಯಗಳನ್ನು ಗಂಭೀರವಾಗಿ ಕಡೆಗಣಿಸಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News