ರೈಲು, ಕ್ಲಾಸ್ ರೂಂನಿಂದಲೇ ರೈಲ್ವೇ ಪರಂಪರೆ: ನಿವೇಶನಗಳಿಗೆ ವರ್ಚುವಲ್ ಪ್ರವಾಸ

Update: 2018-12-16 17:03 GMT

ಹೊಸದಿಲ್ಲಿ, ಡಿ. 16: ದೂರದಲ್ಲಿರುವ ವಿದ್ಯಾರ್ಥಿಗಳು ಹಾಗೂ ರೈಲಿನಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರು ತಮ್ಮ ಸ್ಥಾನದಿಂದ ಕದಲದೆ ನ್ಯಾಶನಲ್ ರೈಲು ಮ್ಯೂಸಿಯಂ ಪ್ರವಾಸ ಮಾಡುವುದು ಅಥವಾ ಕಲ್ಕಾ-ಸಿಮ್ಲಾ ರೈಲು ಮಾರ್ಗ ವೀಕ್ಷಿಸುವುದು ಶೀಘ್ರದಲ್ಲಿ ಸಾಧ್ಯವಾಗಲಿದೆ.

ತನ್ನ ಪರಂಪರೆ ಸಂರಕ್ಷಿಸಲು ಹಾಗೂ ಪ್ರಚಾರ ಮಾಡಲು ಡಿಜಿಟಲ್ ಉಪಕ್ರಮಗಳಿಗೆ ಮೊರೆ ಹೋಗಿರುವ ರೈಲ್ವೆ, ತನ್ನ ಪ್ರಮುಖ ಪಾರಂಪರಿಕ ಸ್ಥಳಗಳಿಗೆ ವರ್ಚುವಲ್ ಪ್ರವಾಸ ಹಾಗೂ ತ್ರಿಡಿ ಇಮೇಜ್‌ಗಳನ್ನು ಬಳಸಿ ವರ್ಚುವಲ್ ಶೈಕ್ಷಣಿಕ ಪ್ರವಾಸ ನಡೆಸಲು, ಅದನ್ನು ಪೂರೈಸಲು ಗೂಗಲ್ ಎಜುಕೇಶನ್ ಇನೀಷಿಯೇಟಿವ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಈ ಯೋಜನೆಯ ಒಂದು ಭಾಗವಾಗಿ ರೈಲ್ವೆ ಪ್ರಯಾಣಿಕರಿಗೆ ಬಾಡಿಗೆಗೆ ವರ್ಚುವಲ್ ರಿಯಾಲಿಟ್ ಕನ್ನಡಕಗಳನ್ನು ರೈಲ್ವೆ ಪೂರೈಸಲಿದೆ. ಇದರಿಂದ ಭೌತಿಕವಾಗಿ ಆ ಸ್ಥಳದಲ್ಲಿ ಇಲ್ಲದೆಯೂ ರೈಲ್ವೆ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಬಹುದು. ಕನ್ನಡಕಗಳನ್ನು ತರಗತಿ ಕೊಠಡಿಗೆ ಕೊಂಡೊಯ್ಯಲು ಶಾಲೆ ಹಾಗೂ ಸರಕಾರೇತರ ಸಂಸ್ಥೆಗಳೊಂದಿಗೆ ಸಹಯೋಗಕ್ಕೆ ಯೋಜನೆ ರೂಪಿಸಲಾಗುತ್ತಿದೆ.

‘‘ರೈಲ್ವೆ ಪರಂಪರೆಯ ಅನುಭವ ಪಡೆಯಲು ಬಯಸುವ ದೇಶಾದ್ಯಂತದ ವಿದ್ಯಾರ್ಥಿಗಳಿಗೆ ನಾವು ಈ ಅವಕಾಶ ಕಲ್ಪಿಸುತ್ತಿದ್ದೇವೆ. ಅವರು ವೈಯುಕ್ತಿಕವಾಗಿ ಇಲ್ಲಿಗೆ ಬರಲು ಸಾಧ್ಯವಿಲ್ಲ. ಆದರೆ, ಇದ್ದಲ್ಲಿಂದಲೇ ಈ ಅನುಭವ ಪಡೆಯ ಬಹುದು. ಈ ಉದ್ದೇಶಕ್ಕಾಗಿ ಶಾಲೆಗಳು ಹಾಗೂ ಸರಕಾರೇತರ ಸಂಸ್ಥೆ ಳೊಂದಿಗೆ ಕೈಜೋಡಿಸಲು ನಾವು ಬಯಸುತ್ತಿದ್ದೇವೆ’’ ಎಂದು ಅವರು ಹೇಳಿದ್ದಾರೆ.

ರೈಲು ಸಿಬ್ಬಂದಿಗೆ ಅಂತಹ ಕನ್ನಡಕಗಳನ್ನು ಪೂರೈಸುವ ಬಗ್ಗೆ ರೈಲ್ವೆ ಸಚಿವರು ನಮ್ಮನ್ನು ಕೇಳಿದ್ದಾರೆ. ಆದುದರಿಂದ ಇದನ್ನು ಪ್ರಯಾಣಿಕರು ಕೂಡ ಬಳಸಬಹುದು ಎಂದು ಕಾರ್ಯಕಾರಿ ನಿರ್ದೇಶಕ (ಪರಂಪರೆ) ಸುಬ್ರತಾ ನಾಥ್ ತಿಳಿಸಿದ್ದಾರೆ.

ಈ ಕನ್ನಡಕದ ಗೂಗಲ್ ವರ್ಶನ್ ಅನ್ನು ಗೂಗಲ್ ಕಾರ್ಡ್‌ಬೋರ್ಡ್ ವಿ.ಆರ್. (ವರ್ಚುವಲ್ ರಿಯಾಲಿಟಿ) ಎಂದು ಕರೆಯಲಾಗುತ್ತದೆ. ಇದು 200 ರೂ.ಗಿಂತ ಕಡಿಮೆ ಬೆಲೆಗೆ ಲಭ್ಯವಿದೆ. ಗೂಗಲ್ ಅನ್ವೇಷಣಾ ಆ್ಯಪ್ ಬಳಸಿ ಅಥವಾ ಗೂಗಲ್ ಆರ್ಟ್ಸ್ ಆಂಡ್ ಕಲ್ಚರ್ ವೆಬ್‌ಸೈಟ್ ಓಪನ್ ಮಾಡಿ ರೈಲ್ವೆ ಪಾರಂಪರಿಕ ಸ್ಥಳಗಳನ್ನು ಈ ಕನ್ನಡಕ ಬಳಸಿ ನೋಡಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News