'ಕುಡಿಯುವ ನೀರಿನ ಸಮಸ್ಯೆ, ಬೀದಿ ನಾಯಿಗಳ ಹಾವಳಿ'

Update: 2018-12-17 12:31 GMT

ಶಿರ್ವ, ಡಿ.17: ಕುಡಿಯುವ ನೀರಿನ ಸಮಸ್ಯೆ, ಬೀದಿ ನಾಯಿಗಳ ಹಾವಳಿ, ಕೋಳಿತ್ಯಾಜ್ಯಗಳ ದುರ್ವಾಸನೆ ಸೇರಿದಂತೆ ಹಲವು ಸಮಸ್ಯೆಗಳ ಮಹಾಪೂರವೇ ಶನಿವಾರ ಶಿರ್ವ ಗ್ರಾಪಂ ಸಭಾಭವನದಲ್ಲಿ ನಡೆದ 2018-19ನೆ ಸಾಲಿನ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆಯಲ್ಲಿ ಕೇಳಿಬಂದವು.

ಶಿರ್ವ ಹಿಂದೂ ಪದವಿ ಪೂರ್ವ ಕಾಲೇಜಿನ ಸಂತೋಷ್ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಶಿರ್ವ ಪರಿಸರದ 8 ಶಾಲೆಗಳ ಸುಮಾರು 250ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮಟ್ಟಾರು ಯುಬಿಎಂಸಿ ಶಾಲೆಯಲ್ಲಿ ಜನವರಿ ತಿಂಗಳ ನಂತರ ಕುಡಿಯುವ ನೀರಿನ ಸಮಸ್ಯೆಯಿದ್ದು ಕುಡಿಯಲು ಮತ್ತು ಅಕ್ಷರ ದಾಸೋಹಕ್ಕಾಗಿ ತೊಂದರೆ ಆಗುತ್ತಿದೆ. ಗ್ರಾಪಂ ಪೂರೈಸುವ ನಳ್ಳಿ ನೀರು ಕಲುಷಿತವಾಗಿದ್ದು ಕುಡಿಯಲು ಅಸಾಧ್ಯವಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಅಲ್ಲದೆ ರಾಜ್ಯ ಹೆದ್ದಾರಿಯ ಬದಿಯಲ್ಲಿರುವ ಶಾಲೆಯ ಬಳಿ ಸೂಚನಾ ಫಲಕ ಅಳವಡಿಸಬೇಕು ಎಂದು ಶಾಲಾ ಮಕ್ಕಳು ಶಿರ್ವ ಗ್ರಾಪಂನ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮುಂದೆ ತಮ್ಮ ಅಳಲು ತೋಡಿಕೊಂಡರು.

ಶಿರ್ವ ಡಾನ್‌ಬೊಸ್ಕೊ ಹಿ.ಪ್ರಾ ಶಾಲೆಯ ಮೈದಾನ ಮತ್ತು ವಠಾರದಲ್ಲಿ ಬೀದಿ ನಾಯಿ ಹಾವಳಿ ವಿಪರೀತವಾಗಿದೆ. ಶಾಲಾ ಕಸದ ವಿಲೇವಾರಿ ಸಮಸ್ಯೆ, ರಸ್ತೆ ಸುರಕ್ಷತೆ ಬಗ್ಗೆ, ಹಿಂದೂ ಶಾಲೆಯ ಓಣಿಯಲ್ಲಿರುವ ವಿದ್ಯುತ್ ಕಂಬ, ಕೋಳಿ ತ್ಯಾಜ್ಯದ ವಾಸನೆ, ಮಳೆ ನೀರಿನ ಸಮಸ್ಯೆ, ರಸ್ತೆ ದಾಟಲು ಝೀಬ್ರಾ ಕ್ರಾಸಿಂಗ್ ಕುರಿತ ಸಮಸ್ಯೆಗಳನು್ನ ಮಕ್ಕಳು ಸಭೆಯ ಮುಂದಿಟ್ಟರು.

ಇದಕ್ಕೆ ಪ್ರತಿಕ್ರಿಯಿಸಿದ ಪಂಚಾಯತ್ ಅಭಿವೃದ್ದಿ ಅಧಿಕಾರಿ ಅನಂತಪದ್ಮನಾಭ ನಾಯಕ್, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಉಡುಪಿಯ ನ್ಯಾಯವಾದಿ ನಾಗರತ್ನಾ ಕೆ.ನಾಯಕ್ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು.

ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶೈನಿ ಮಕ್ಕಳ ಆರೋಗ್ಯ, ಪರಿಸರ ನೈರ್ಮಲ್ಯ, ಆಹಾರ ಸೇವನೆಯ ಬಗ್ಗೆ ಮಾಹಿತಿ ನೀಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಭಿವೃದ್ಧಿ ಅಧಿಕಾರಿ ಮೋಹಿನಿ ಗೌಡ ಮಹಿಳೆ ಮತ್ತು ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಅಗತ್ಯವಾದ ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ನೀಡಿದರು.

ಶಿಕ್ಷಣ ಇಲಾಖೆಯ ಶಂಕರ್ ಸುವರ್ಣ ನೋಡಲ್ ಅಧಿಕಾರಿಯಾಗಿ ಭಾಗ ವಹಿಸಿದ್ದರು. ಶಿಕ್ಷಕರ ಪರವಾಗಿ ಹಿಂದೂ ಹಿರಿಯ ಪ್ರಾಥಮಿಕ ಶಾಲಾ ಗೌರವ ಮುಖ್ಯಶಿಕ್ಷಕ ವಾಸು ಆಚಾರ್ ಮಾತನಾಡಿದರು.

ಮಹಿಳಾ ಗ್ರಾಮಸಭೆ

ಗ್ರಾಪಂ 2018-19ನೇ ಸಾಲಿನ ಮಹಿಳಾ ಗ್ರಾಮಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪ್ರೇಮಾನಂದ ಕಲ್ಮಾಡಿ, ಕೌಟುಂಬಿಕ ದೌರ್ಜನ್ಯ ಕಾಯಿದೆ ಹಾಗೂ ಹೆಣ್ಣು ಮಕ್ಕಳ ದೌರ್ಜನ್ಯ ತಡೆ ಮುಂತಾದ ಮಹಿಳಾ ಕಾನೂನಿನ ಬಗ್ಗೆ ಮಾಹಿತಿ ನೀಡಿದರು.

ಶಿರ್ವ ಗ್ರಾಪಂ ಅಧ್ಯಕ್ಷೆ ವಾರಿಜ ಪೂಜಾರ್ತಿ ಮತ್ತು ಉಪಾಧ್ಯಕ್ಷ ದೇವದಾಸ್ ನಾಯಕ್ ಮಾತನಾಡಿದರು. ಪಂ. ಅಭಿವೃದ್ಧಿ ಅಧಿಕಾರಿ ಅನಂತ ಪದ್ಮನಾಭ ನಾಯಕ್ ಸ್ವಾಗತಿಸಿದರು. ಲೆಕ್ಕ ಸಹಾಯಕ ಆನಂದ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News