ಕಾಶ್ಮೀರ:ಪ್ರತಿಭಟನಾ ಜಾಥಾಕ್ಕೆ ಕರೆ ನೀಡಿದ್ದ ಮಿರ್ವೈಝ್,ಯಾಸಿನ್ ಮಲಿಕ್ ಬಂಧನ

Update: 2018-12-17 14:54 GMT

ಶ್ರೀನಗರ,ಡಿ.17: ಶನಿವಾರ ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಸಿರ್ನೂ ಗ್ರಾಮದಲ್ಲಿ ಎನ್‌ಕೌಂಟರ್ ಸಂದರ್ಭ ಪ್ರತಿಭಟನೆಯಲ್ಲಿ ತೊಡಗಿದ್ದ ಏಳು ನಾಗರಿಕರ ಹತ್ಯೆಯನ್ನು ವಿರೋಧಿಸಿ ಸೋಮವಾರ ಇಲ್ಲಿಯ ಬದಾಮಿ ಬಾಗ್ ಪ್ರದೇಶದಲ್ಲಿರುವ ಸೇನೆಯ ಚಿನಾರ್ ಕಾರ್ಪ್ಸ್‌ನ ಕೇಂದ್ರಕಚೇರಿಗೆ ಪ್ರತಿಭಟನಾ ಜಾಥಾವನ್ನು ಹೊರಡಿಸಲು ಪ್ರಯತ್ನಿಸಿದ್ದ ಪ್ರತ್ಯೇಕತಾವಾದಿ ನಾಯಕರಾದ ಮಿರ್ವೈಝ್ ಉಮರ್ ಫಾರೂಕ್ ಮತ್ತು ಮುಹಮ್ಮದ್‌ ಯಾಸಿನ್ ಮಲಿಕ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರತ್ಯೇಕತಾವಾದಿಗಳು ನೀಡಿದ್ದ ಪ್ರತಿಭಟನಾ ಜಾಥಾ ಕರೆಯನ್ನು ವಿಫಲಗೊಳಿಸಲು ನಗರದ ಹೆಚ್ಚಿನ ಭಾಗಗಳಲ್ಲಿ ನಿರ್ಬಂಧಕಾಜ್ಞೆಯನ್ನು ಜಾರಿಗೊಳಿಸಲಾಗಿತ್ತು.

ಮಿರ್ವೈಝ್,ಸೈಯದ್ ಅಲಿ ಶಾ ಗೀಲಾನಿ ಮತ್ತು ಮಲಿಕ್ ಅವರನ್ನೊಳಗೊಂಡ ಜಂಟಿ ಪ್ರತಿರೋಧ ನಾಯಕತ್ವದ ಅಡಿ ಪ್ರತ್ಯೇಕತಾವಾದಿಗಳು ಪ್ರತಿಭಟನಾ ಜಾಥಾಕ್ಕೆ ಕರೆ ನೀಡಿದ್ದರು. ಮಿರ್ವೈಝ್ ಗೃಹಬಂಧನವನ್ನು ಉಲ್ಲಂಘಿಸಿ ಜಾಥಾದಲ್ಲಿ ತೆರಳಲು ಪ್ರಯತ್ನಿಸಿದ್ದರು.

ಪ್ರತ್ಯೇಕತಾವಾದಿಗಳ ಪ್ರತಿಭಟನಾ ಕರೆಯನ್ನು ರಕ್ಷಣಾ ವಕ್ತಾರರು ಖಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News