ಮಾಲ್ದೀವ್ಸ್‌ಗೆ ಭಾರತದಿಂದ 1.4 ಶತಕೋಟಿ ಡಾಲರ್ ಆರ್ಥಿಕ ನೆರವು ಪ್ರಕಟಿಸಿದ ಮೋದಿ

Update: 2018-12-17 15:09 GMT

ಹೊಸದಿಲ್ಲಿ,ಡಿ.17: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಮಾಲ್ದೀವ್ಸ್‌ಗೆ 1.4 ಶತಕೋಟಿ ಡಾ.ಗಳ ಆರ್ಥಿಕ ನೆರವನ್ನು ಪ್ರಕಟಿಸಿದರು. ಇದಕ್ಕೂ ಮುನ್ನ ಅವರು ಮಾಲ್ದೀವ್ಸ್ ಅಧ್ಯಕ್ಷ ಇಬ್ರಾಹೀಂ ಮುಹಮ್ಮದ್ ಸಾಲಿಹ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭದ್ರತಾ ಸಹಕಾರವನ್ನು ಇನ್ನಷ್ಟು ಗಾಢಗೊಳಿಸಲು ಉಭಯ ರಾಷ್ಟ್ರಗಳು ನಿರ್ಧರಿಸಿವೆ. ಈ ಸಂದರ್ಭ ವೀಸಾ ಸರಳಗೊಳಿಸುವಿಕೆ ಸೇರಿದಂತೆ ಭಾರತ ಮತ್ತು ಮಾಲ್ದೀವ್ಸ್ ನಡುವೆ ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.

ಸೌಹಾರ್ದಪೂರ್ಣ ವಾತಾವರಣದಲ್ಲಿ ಯಶಸ್ವಿಯಾಗಿ ಮಾತುಕತೆಗಳನ್ನು ನಡೆಸಿದ್ದೇವೆ. ಉಭಯ ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ಬಲಗೊಳಿಸಲು ನಾವು ಪಣ ತೊಟ್ಟಿದ್ದೇವೆ ಎಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದ ಮೋದಿ, ಎರಡೂ ರಾಷ್ಟ್ರಗಳ ಭದ್ರತಾ ಹಿತಾಸಕ್ತಿಗಳು ಪರಸ್ಪರ ಹೆಣೆದುಕೊಂಡಿವೆ ಮತ್ತು ಹಿಂದು ಮಹಾಸಾಗರ ಪ್ರದೇಶದಲ್ಲಿ ಸಹಕಾರವನ್ನು ಹೆಚ್ಚಿಸಲು ಉಭಯ ರಾಷ್ಟ್ರಗಳು ಶ್ರಮಿಸಲಿವೆ. ಪರಸ್ಪರರ ಹಿತಾಸಕ್ತಿಗಳಿಗೆ ಹಾನಿಯನ್ನುಂಟು ಮಾಡುವ ಚಟುವಟಿಕೆಗಳಿಗೆ ನಮ್ಮ ದೇಶಗಳನ್ನು ಬಳಸಲು ನಾವು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.

ಮಾಲ್ದೀವ್ಸ್‌ನ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ 1.4 ಶತಕೋಟಿ ಡಾ. ನೆರವು ಪ್ರಕಟಿಸಿದ ಅವರು,ಅದರೊಂದಿಗೆ ಹೆಚ್ಚಿನ ವ್ಯಾಪಾರ ಸಂಬಂಧಗಳನ್ನು ನಾವು ಬಯಸಿದ್ದೇವೆ. ಆ ರಾಷ್ಟ್ರದಲ್ಲಿ ಭಾರತೀಯ ಕಂಪನಿಗಳಿಗೆ ಅವಕಾಶಗಳು ಹೆಚ್ಚುತ್ತಿವೆ ಎಂದರು.

ಸಂಘಟಿತ ಗಸ್ತು ಮತ್ತು ವೈಮಾನಿಕ ಸರ್ವೇಕ್ಷಣೆಯ ಮೂಲಕ ಹಿಂದು ಮಹಾಸಾಗರ ಪ್ರದೇಶದಲ್ಲಿ ಭದ್ರತಾ ಸಹಕಾರವನ್ನು ಹೆಚ್ಚಿಸಲು ಉಭಯ ರಾಷ್ಟ್ರಗಳು ಒಪ್ಪಿಕೊಂಡಿವೆ ಎಂದು ಸೋಲಿಹ್ ತಿಳಿಸಿದರು.

ಸೋಲಿಹ್ ಮೂರು ದಿನಗಳ ಭೇಟಿಗಾಗಿ ರವಿವಾರ ಭಾರತಕ್ಕೆ ಆಗಮಿಸಿದ್ದು,ಕಳೆದ ತಿಂಗಳು ಮಾಲ್ದೀವ್ಸ್‌ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದು ಅವರ ಮೊದಲ ವಿದೇಶ ಪ್ರವಾಸವಾಗಿದೆ.

ಬೆಳಿಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಸೋಲಿಹ್‌ರನ್ನು ಭೇಟಿಯಾಗಿ ಪರಸ್ಪರ ಹಿತಾಸಕ್ತಿಯ ದ್ವಿಪಕ್ಷೀಯ ಮತ್ತು ಪ್ರಾದೇಶಿಕ ವಿಷಯಗಳನ್ನು ಚರ್ಚಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News