ಪಿಲಿಕುಳ ಮೃಗಾಲಯಕ್ಕೆ ಅಪರೂಪದ ಧೋಲ್ ಆಗಮನ
ಮಂಗಳೂರು, ಡಿ.17: ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಎರಡು ಗಂಡು ಮತ್ತು ಎರಡು ಹೆಣ್ಣು ಧೋಲ್, ಐದು ಪೈಂಟೆಡ್ ಕೊಕ್ಕರೆ, ದೊಡ್ಡ ಜಾತಿಯ ಐದು ಅಲೆಕ್ಸ್‌ಜಾಡ್ರಿಯನ್ ಗಿಳಿಗಳನ್ನು ತರಿಸಲಾಗಿದೆ.
ಪ್ರಾಣಿಗಳ ವಿನಿಮಯ ಯೋಜನೆಯನ್ವಯ ಪಿಲಿಕುಳದಲ್ಲಿ ಅಧಿಕ ಸಂಖ್ಯೆಯಲ್ಲಿರುವ ಎರಡು ಗಂಡು ಹುಲಿಗಳು, ನಾಲ್ಕು ಕಾಡು ಕೋಳಿಗಳು ಮತ್ತು ಒಂದು ಮೊಸಳೆಯನ್ನು ವಿಶಾಖಪಟ್ಟಣಂಗೆ ನೀಡಲಾಗಿದೆ.
ಧೋಲ್‌ನ್ನು ಕಾಡುನಾಯಿ/ಚೆನ್ನೆ ನಾಯಿ ಎಂದು ಕರೆಯುತ್ತಾರೆ. ಇವುಗಳು ಹಿಂಡುಗಳಲ್ಲಿ ವಾಸಿಸುತ್ತವೆ. ಹಿಂದೆ ಅರಣ್ಯಗಳಲ್ಲಿ ಸಾಮಾನ್ಯವಾಗಿ ಕಾಣಿಸುತ್ತಿತು. ಇವು ಈಗ ನಾಶದ ಅಂಚಿನಲ್ಲಿದೆ. ಇವುಗಳು ಜಿಂಕೆ, ಕಡವೆಯಂತಹ ಪ್ರಾಣಿಗಳನ್ನು ಸುಲಭವಾಗಿ ಬೇಟೆಯಾಡುತ್ತವೆ. ಧೋಲ್‌ಗಳು ಗುಂಪಾಗಿ ಬೇಟೆಯ ಸುತ್ತುವರಿದು ಹಾರಿ ಕೊಂದು ಅವುಗಳನ್ನು ಭಕ್ಷಿಸುತ್ತವೆ. ಒಂಟಿಯಾಗಿ ಸಿಕ್ಕಿದ ಹುಲಿಯನ್ನೂ ಸುತ್ತುವರಿದು ಕೊಂದ ಉದಾಹರಣೆಗಳಿವೆ.
ಸಂದರ್ಶಕರಿಗೆ ಒಂದು ವಾರದ ನಂತರ ವೀಕ್ಷಣೆಗೆ ಬಿಡಲಾಗುವುದು. ಆತನಕ ಅವುಗಳಿಗೆ ಇಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕರ ಪ್ರಕಟನೆ ತಿಳಿಸಿದೆ.