×
Ad

ಶಕ್ತಿನಗರ : ಕ್ರಿಸ್ಮಸ್ ಸಂಭ್ರಮ

Update: 2018-12-17 20:58 IST

ಮಂಗಳೂರು, ಡಿ.17: ಕುಲಶೇಖರ ಚರ್ಚ್‌ನ ಸಂತ ರೀತಾ ವಾಳೆ, ಮಾಂಡ್ ಸೊಭಾಣ್ ಹಾಗೂ ತ್ರಿವೇಣಿ ಆಯುರ್ವೇದದ ವತಿಯಿಂದ ಕ್ರಿಸ್ಮಸ್ ಸಂಭ್ರಮವು ಮಕಾಳೆಯಲ್ಲಿ ರವಿವಾರ ನಡೆಯಿತು.

ಕ್ರಿಸ್ಮಸ್ ಮರದ ದೀಪಗಳನ್ನು ಪ್ರಜ್ವಲಿಸಿ ಮಾತನಾಡಿದ ಮಾಜಿ ಮೇಯರ್ ಅಬ್ದುಲ್ ಅಝೀಝ್ ಇಂದಿನ ಕಾಲದಲ್ಲಿ ಸರ್ವ ಧರ್ಮೀಯರನ್ನೂ ಒಗ್ಗೂಡಿಸಿ ನಡೆಸುವ ಇಂತಹ ಸಂಭ್ರಮಗಳ ಅಗತ್ಯವಿದೆ. ಇದರಿಂದ ಸೌಹಾರ್ದ ಬೆಳೆಯಲಿದೆ ಎಂದರು.

ಕುಸ್ವಾರ್ ತಿಂಡಿಗಳನ್ನು ತೆರೆದು ಹಂಚುವ ಪ್ರಕ್ರಿಯೆಗೆ ಚಾಲನೆ ನೀಡಿದ ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ ಯೇಸು ಬಡವರಿಗೋಸ್ಕರ, ನ್ಯಾಯ ವಂಚಿತರಿಗೋಸ್ಕರ ಶ್ರಮಿಸಿದರು. ಕ್ರಿಸ್ಮಸ್ ಹಬ್ಬದ ನೈಜ ಸಂದೇಶವನ್ನು ಜೀವನದಲ್ಲಿ ಅಳವಡಿಸಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭ ಸ್ಥಳೀಯ ಪರಿಸರದ ಲೈನ್‌ಮ್ಯಾನ್ ನರೇಶ, ಪೋಸ್ಟ್ ಮ್ಯಾನ್ ಯತೀಶ, ಟೆಲಿಫೊನ್‌ನ ಕುಂಞಿಕಣ್ಣ, ಬೀಟ್ ಪೋಲಿಸ್ ಮದನ್ ಹಾಗೂ ಆ್ಯಂಟನಿ ವೇಸ್ಟ್ ಪರವಾಗಿ ಭೂಷಣ್ ಮತ್ತು ವಾಳೆಯ ಹಿರಿಯ ವ್ಯಕ್ತಿ ಹಿಲ್ಡಾ ಕ್ಯಾಸ್ತೆಲಿನೊ ಅವರನ್ನು ಗೌರಸಲಾಯಿತು. ವೇದಿಕೆಯಲ್ಲಿ ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ. ಪಿಂಟೊ, ತ್ರಿವೇಣಿ ಆಯುರ್ವೇದದ ಡಾ. ಎಲ್ಡೊ ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸುಮೇಳ ತಂಡದಿಂದ ಕ್ರಿಸ್ಮಸ್ ಕ್ಯಾರಲ್ಸ್, ಕಲಾಕುಲ್ ತಂಡದಿಂದ ಆಮ್ಚೆಂ ನತಾಲ್ ಕಿರು ಪ್ರಹಸನ, ನಾಚ್ ಸೊಭಾಣ್ ಹಾಗೂ ವಾಳೆಯ ಮಕ್ಕಳಿಂದ ನೃತ್ಯಗಳು ಪ್ರಸ್ತುತವಾದವು. ಐಕ್ಯ ಕೇರಳ ಕಳರಿ ಸಂಘಂ ವತಿಯಿಂದ ತೈಯಂ ಹಾಗೂ ಕಳರಿಪಯಟ್ಟು ಮತ್ತು ಸ್ವರೂಪ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ ನಡೆಯಿತು.

ವಾಳೆಯ ಗುರಿಕಾರ ವಿನ್ನಿ ಡಿಸೋಜ ಸ್ವಾಗತಿಸಿದರು. ರೊಯ್ ಕ್ಯಾಸ್ತೆಲಿನೊ ಪ್ರಾಸ್ತಾವಿಸಿದರು. ಸುನೀಲ್ ಮೊಂತೇರೊ ವಂದಿಸಿದರು. ವಿಕ್ಟರ್ ಮಥಾಯಸ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News