ಉಡುಪಿ: ಭಾರತ್ ಸ್ಕೌಟ್ಸ್-ಗೈಡ್ಸ್‌ಗಳಿಗೆ ಕರ್ನಾಟಕ ದರ್ಶನ
ಉಡುಪಿ, ಡಿ.17: ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಕರ್ನಾಟಕದ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಹಯೋಗದೊಂದಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಕರ್ನಾಟಕ ದರ್ಶನ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಿದೆ.
ಉಡುಪಿ ಜಿಲ್ಲೆಗೆ ನಿಗದಿಪಡಿಸಿದ ಕೋಟಾದಂತೆ 10 ಬಸ್ಸುಗಳಲ್ಲಿ 250 ಸ್ಕೌಟ್ಸ್, 250 ಗೈಡ್ಸ್ ಹಾಗೂ 60 ಶಿಕ್ಷಕರಿಗೆ ಅವಕಾಶ ನೀಡಲಾಗಿದೆ. ಕನಿಷ್ಟ ದ್ವಿತೀಯ ಸೋಪಾನ ಪರೀಕ್ಷೆ ಪೂರೈಸಿದ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳಿಗೆ ಈ ಪ್ರಾಸದಲ್ಲಿ ಭಾಗವಹಿಸಲು ಅವಕಾಶವಿದೆ.
ಈ ನಿಟ್ಟಿನಲ್ಲಿ ಡಿ.17ರಿಂದ 21ರವರೆಗೆ ಮೊದಲ ತಂಡ ಪ್ರವಾಸಕ್ಕೆ ತೆರಳಿದ್ದು, 5 ಬಸ್ಸುಗಳಲ್ಲಿ 250 ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ತಂಡ ಮುರುಡೇಶ್ವರ, ಶಿರಸಿ, ಬನವಾಸಿ, ಸಿದ್ದರೂಡಮಠ, ಹುಬ್ಬಳ್ಳಿ, ಪಟ್ಟದ ಕಲ್ಲು, ಬಾದಾಮಿ, ಐಹೊಳೆ, ಕೂಡಲಸಂಗಮ, ಗೋಲ್‌ಗುಂಬಜ್, ಹಂಪಿ, ಚಿತ್ರದುರ್ಗ ಮುಂತಾದ ಸ್ಥಳಗಳಿಗೆ ಭೇಟಿ ನೀಡಲಿದೆ.
ಶಿಕ್ಷಣ ಇಲಾಖೆಯ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಮಧುಕರ್ ಉಡುಪಿಯಲ್ಲಿ ಪ್ರವಾಸಕ್ಕೆ ಚಾಲನೆ ನೀಡಿದರು. ಜಿಲ್ಲಾ ಸೌಟ್ಸ್ ಆಯುಕ್ತ ವಿಜಯೇಂದ್ರ ವಸಂತ್ ಸ್ಕೌಟ್ಸ್ ಗೈಡ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಜಿಲ್ಲಾ ಗೈಡ್ಸ್ ಆಯುಕ್ತೆ ಜ್ಯೋತಿ ಜೆ. ಪೈ, ಜಿಲ್ಲಾ ಕಾರ್ಯದರ್ಶಿ ಐ.ಕೆ. ಜಯಚಂದ್ರ, ಜಿಲ್ಲಾ ತರಬೇತಿ ಆಯುಕ್ತೆ ಸಾವಿತ್ರಿ ಮನೋಹರ್, ಜಿಲ್ಲಾ ಸಂಘಟಕರಾದ ಸುಮನ್ ನಿತಿನ್ ಅಮಿನ್ ಉಪಸ್ಥಿತರಿದ್ದರು.