​ಮಲ್ಪೆ: ಮೀನುಗಾರಿಕಾ ಬೋಟಿನಲ್ಲಿ ಒರಿಸ್ಸಾ ಯುವಕನ ಕೊಲೆ

Update: 2018-12-17 15:37 GMT

ಮಲ್ಪೆ, ಡಿ.17: ಮಲ್ಪೆ ಬಂದರಿನ ಬಾಪುತೋಟ ದಕ್ಕೆಯಲ್ಲಿ ಲಂಗರು ಹಾಕಿದ್ದ ಬೋಟಿನಲ್ಲಿ ಡಿ.16ರಂದು ರಾತ್ರಿ ಮಲಗಿದ್ದ ಇಬ್ಬರು ಕಾರ್ಮಿಕರ ಮಧ್ಯೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ ಕಂಡಿರುವ ಬಗ್ಗೆ ವರದಿಯಾಗಿದೆ.

ಕೊಲೆಯಾದವರನ್ನು ಒರಿಸ್ಸಾದ ಪ್ರೀತಮ್ (24) ಎಂದು ಗುರುತಿಸಲಾಗಿದ್ದು, ಕೊಲೆ ಆರೋಪಿ ಕೊಪ್ಪಳದ ಮಾರುತಿ (40) ಎಂಬಾತ ಪರಾರಿಯಾಗಿದ್ದಾನೆ. ಇವರಿಬ್ಬರು ಕಟಪಾಡಿ ಕೋಟೆ ಗ್ರಾಮದ ದತ್ತರಾಜ್ ಎಂಬವರ ಬೋಟಿನಲ್ಲಿ ಕಲಾಸಿಗಳಾಗಿ ದುಡಿಯುತ್ತಿದ್ದರು.

ಇವರಿಬ್ಬರು ಡಿ.10ರಂದು ರಾತ್ರಿ ಮಲ್ಪೆ ಬಂದರಿನಿಂದ ಇತರರೊಂದಿಗೆ ಬೋಟಿನಲ್ಲಿ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದು, ಮೀನುಗಾರಿಕೆ ಮುಗಿಸಿ ಡಿ.16ರಂದು ಮಲ್ಪೆಬಂದರಿಗೆ ಬಂದಿದ್ದರು. ಅಲ್ಲಿ ಮೀನುಗಳನ್ನು ಖಾಲಿ ಮಾಡಿದ ಬಳಿಕ ಬೋಟನ್ನು ಬಾಪುತೋಟದ ದಕ್ಕೆಯಲ್ಲಿ ಲಂಗರು ಹಾಕ ಲಾಗಿತ್ತು. ಉಳಿದವರು ಮನೆಗೆ ಹೋಗಿದ್ದು, ಪ್ರೀತಮ್ ಮತ್ತು ಮಾರುತಿ ರಾತ್ರಿ ಬೋಟಿನಲ್ಲಿಯೇ ಮಲಗಿದ್ದರೆನ್ನಲಾಗಿದೆ.

ಡಿ.17ರಂದು ಬೆಳಗಿನ ಜಾವ 5:45ರ ಸುಮಾರಿಗೆ ದತ್ತರಾಜ್ ಹಾಗೂ ತಾಂಡೇಲರು ಬೋಟನ್ನು ರಿಪೇರಿ ಮಾಡಲು ಮಲ್ಪೆಬಂದರಿಗೆ ಎಳೆದು ತಂದಿದ್ದರು. ಅಲ್ಲಿ ಬೋಟಿನಲ್ಲಿದ್ದ ರಕ್ತದ ಕಲೆಯನ್ನು ಕಂಡ ದತ್ತರಾಜ್, ಬೋಟಿನ ಸುಮಾರು 10 ಅಡಿ ಆಳದ ಇಂಜಿನ್ ರೂಂ ಇಣುಕಿ ನೋಡಿದಾಗ ಪ್ರೀತಮ್ ಮೃತದೇಹ ಬಿದ್ದಿರುವುದು ಕಂಡುಬಂತು.

ರಾತ್ರಿ ವೇಳೆ ಮದ್ಯ ಸೇವಿಸಿದ್ದ ಮಾರುತಿ ಹಾಗೂ ಪ್ರೀತಮ್ ಮಧ್ಯೆ ಜಗಳ ನಡೆದಿದ್ದು, ಈ ಸಂದರ್ಭ ಮಾರುತಿ ಯಾವುದೋ ಆಯುಧದಿಂದ ಪ್ರೀತಮ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಇಂಜಿನ್ ರೂಂನ ಒಳಗೆ ದೂಡಿ ಹಾಕಿ ಕೊಲೆ ಮಾಡಿದ್ದಾನೆಂದು ದೂರಲಾಗಿದೆ. ಆರೋಪಿ ಮಾರುತಿ ಪರಾರಿಯಾಗಿದ್ದು, ಆತ ನಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News