ಫೆಲೆಸ್ತೀನ್ ‌ನಲ್ಲಿ ಮಾನವೀಯ ನೆರವಿಗಾಗಿ ದೇಣಿಗೆಗೆ ವಿಶ್ವಸಂಸ್ಥೆ ಮನವಿ

Update: 2018-12-17 15:59 GMT

ಜೆರುಸಲೇಮ್, ಡಿ. 17: ಫೆಲೆಸ್ತೀನಿಯರಿಗೆ ಮಾನವೀಯ ನೆರವಾಗಿ ಮುಂದಿನ ವರ್ಷ 350 ಮಿಲಿಯ ಡಾಲರ್ (ಸುಮಾರು 2,505 ಕೋಟಿ ರೂ. ಸಂಗ್ರಹದ ಗುರಿ) ದೇಣಿಗೆ ನೀಡುವಂತೆ ವಿಶ್ವಸಂಸ್ಥೆ ಮತ್ತು ಫೆಲೆಸ್ತೀನ್ ಪ್ರಾಧಿಕಾರಗಳು ಸೋಮವಾರ ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿವೆ.

ಫೆಲೆಸ್ತೀನಿಯರಿಗೆ ಇದಕ್ಕಿಂತಲೂ ಹೆಚ್ಚಿನ ನೆರವು ಬೇಕಾಗಿದೆ, ಆದರೆ ‘ದಾಖಲೆಯ ಕಡಿಮೆ’ ನಿಧಿ ಸಂಗ್ರಹದ ಹಿನ್ನೆಲೆಯಲ್ಲಿ, ವಾಸ್ತವಿಕ ಗುರಿಯನ್ನು ಹಾಕಿಕೊಳ್ಳಬೇಕಾಗಿದೆ ಎಂದು ಗಾಝಾ ಪಟ್ಟಿ, ಪಶ್ಚಿಮ ದಂಡೆ ಮತ್ತು ಪೂರ್ವ ಜೆರುಸಲೇಮ್‌ನಲ್ಲಿ ವಿಶ್ವಸಂಸ್ಥೆಯ ಮಾನವೀಯ ಸಮನ್ವಯಕಾರ ಜೇಮೀ ಮೆಕ್‌ಗೋಲ್ಡ್‌ರಿಕ್ ಹೇಳಿದ್ದಾರೆ.

2019ರ ಮಾನವೀಯ ಸ್ಪಂದನೆ ಯೋಜನೆಯಡಿ, ವಿಶ್ವಸಂಸ್ಥೆಯ ಘಟಕಗಳು ಮತ್ತು ಸರಕಾರೇತರ ಸಂಘಟನೆಗಳು ಸೇರಿದಂತೆ 88 ಗುಂಪುಗಳು 203 ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ಅವರು ತಿಳಿಸಿದರು.

ಆಹಾರ, ಆರೋಗ್ಯ ರಕ್ಷಣೆ, ಆಶ್ರಯ, ನೀರು ಮತ್ತು ಶೌಚದ ಅತಿ ಹೆಚ್ಚು ಅಗತ್ಯವಿರುವ 14 ಲಕ್ಷ ಫೆಲೆಸ್ತೀನಿಯರಿಗೆ ಈ ಕಾರ್ಯಕ್ರಮಗಳಲ್ಲಿ ಮೊದಲ ಆದ್ಯತೆ ನೀಡಲಾಗಿದೆ.

‘‘ಮಾನವೀಯ ನೆರವು ಅಧಿಕಾರಿಗಳು ಅಭೂತಪೂರ್ವ ಸವಾಲುಗಳನ್ನು ಎದುರಿಸುತ್ತಿದ್ದಾರೆ. ದಾಖಲೆಯ ಕಡಿಮೆ ನಿಧಿ ಸಂಗ್ರಹ ಹಾಗೂ ಮಾನವೀಯ ಉಪಕ್ರಮಗಳನ್ನು ಕಾನುನುಬಾಹಿರವೆಂಬಂತೆ ಬಿಂಬಿಸುವುದಕ್ಕಾಗಿ ನಡೆಸಲಾಗುತ್ತಿರುವ ದಾಳಿಗಳಲ್ಲಿನ ಹೆಚ್ಚಳ- ಅವುಗಳಲ್ಲಿ ಪ್ರಮುಖವಾದವುಗಳು’’ ಎಂದು ಸೋಮವಾರ ಬಿಡುಗಡೆಗೊಳಿಸಲಾದ ಜಂಟಿ ಹೇಳಿಕೆಯೊಂದರಲ್ಲಿ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News