ಬೆಳ್ಮಣ್ ಟೋಲ್ ವಿರುದ್ಧ ಡಿ.20ರಂದು ಬೃಹತ್ ಪ್ರತಿಭಟನೆ

Update: 2018-12-18 15:57 GMT

ಉಡುಪಿ, ಡಿ.18: ಕಾರ್ಕಳ-ಪಡುಬಿದ್ರೆ ರಾಜ್ಯ ಹೆದ್ದಾರಿಗೆ ಬೆಳ್ಮಣ್‌ನಲ್ಲಿ ಟೋಲ್‌ಗೇಟ್ ಅಳವಡಿಸಲು ಮತ್ತೆ ಪ್ರಯತ್ನಗಳು ಪ್ರಾರಂಭಗೊಂಡಿರುವ ವಿರುದ್ಧ ಡಿ.20ರಂದು ಮತ್ತೊಮ್ಮೆ ಬೃಹತ್ ಪ್ರತಿಭಟನೆಯನ್ನು ಹಮ್ಮಿ ಕೊಳ್ಳಲಾಗಿದೆ ಎಂದು ಬೆಳ್ಮಣ್ ಟೋಲ್‌ಗೇಟ್-ಸುಂಕ ವಸೂಲಾತಿ ಕೇಂದ್ರ ವಿರೋಧಿ ಹೋರಾಟ ಸಮಿತಿಯ ಅಧ್ಯಕಷ ಎನ್.ಸುಹಾಸ್ ಹೆಗ್ಡೆ ಹೇಳಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟೋಲ್‌ಗೇಟ್ ಪ್ರಸ್ತಾವನೆಯ ವಿರುದ್ಧ ಕಳೆದ ಅಕ್ಟೋಬರ್ ತಿಂಗಳಲ್ಲಿ ಬೆಳ್ಮಣ್ ಆಸುಪಾಸಿನ ಹತ್ತಾರು ಗ್ರಾಮಗಳ ಐದು ಸಾವಿರಕ್ಕೂ ಅಧಿಕ ಮಂದಿ ಗ್ರಾಮಸ್ಥರು, ಸಾರ್ವಜನಿಕರು ಪಕ್ಷಾತೀತವಾಗಿ ಹಾಗೂ ಜಾತ್ಯತೀತವಾಗಿ ಪ್ರತಿಭಟನೆ ನಡೆಸಿ ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿಗೆ ಟೋಲ್‌ಗೇಟ್ ನಿರ್ಮಿಸುವ ಪ್ರಸ್ತಾವನೆ ಕೈಬಿಡುವಂತೆ ಒಕ್ಕೊರಳಿನಿಂದ ಆಗ್ರಹಿಸಿದ್ದರು ಎಂದವರು ವಿವರಿಸಿದರು.

ಆದರೆ ನಮ್ಮ ಶಾಂತಿಯುತ ಹೋರಾಟದಿಂದ ಸರಕಾರದ ಮೇಲೆ ಯಾವುದೇ ಪರಿಣಾಮ ಬೀರಿದಂತಿಲ್ಲ. ಸುಂಕ ವಸೂಲಾತಿ ಕೇಂದ್ರದ ಪ್ರಸ್ತಾವನೆ ಯಿಂದ ಸರಕಾರ ಹಿಂದೆ ಸರಿಯದೇ ಇದೀಗ ಪೊಲೀಸ್ ಸಹಾಯದಿಂದ ಮತ್ತೆ ಟೋಲ್‌ಗೇಟ್ ನಿರ್ಮಿಸಿ ಸಾರ್ವಜನಿಕರ ಲೂಟಿಗೆ ಸರಕಾರ ಮುಂದಾಗಿದೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು.

ಪಡುಬಿದ್ರೆ-ಕಾರ್ಕಳ ರಾಜ್ಯ ಹೆದ್ದಾರಿ ಸುಮಾರು 40ಕ್ಕೂ ಅಧಿಕ ಹಳ್ಳಿಗಳನ್ನು ಸಂಪರ್ಕಿಸುವ ಮುಖ್ಯ ರಸ್ತೆಯಾಗಿದ್ದು, ದಿನನಿತ್ಯ ಹಳ್ಳಿಯ ಜನರು ತಮ್ಮ ದಿನ ನಿತ್ಯದ ಕೆಲಸಗಳಿಗೆ ತೆರಳಲು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಸುಂಕದ ಹೊರೆ ಜನಸಾಮಾನ್ಯರ ಮೇಲೆ ಅತಿ ಹೆಚ್ಚಿನ ಗಂಭೀರ ಪರಿಣಾಮ ಬೀರಲಿದೆ. ನಾವು ಮಂಗಳೂರಿಗೆ ತೆರಳುವಾಗ 37 ಕಿ.ಮೀ. ಅಂತರದಲ್ಲಿ ಮೂರು ಕಡೆ ಟೋಲ್ ಕಟ್ಟಬೇಕಾಗಿದೆ ಎಂದವರು ಕಳವಳ ವ್ಯಕ್ತಪಡಿಸಿದರು.
ಇದಕ್ಕಾಗಿ ಬೆಳ್ಮಣ್ಣು ಹಾಗೂ ಪರಿಸರದ ಸುಮಾರು 40ಕ್ಕೂ ಅಧಿಕ ಗ್ರಾಮಗಳ ಜನರು ಡಿ.20ರಂದು ಮತ್ತೆ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಒಟ್ಟು ಸೇರಿ ಮತ್ತೆ ಬೃಹತ್ ಮಟ್ಟದ ಪ್ರತಿಭಟನೆಗೆ ಸಿದ್ಧರಾಗಿದ್ದಾರೆ. ಅಂದು ಕಾರ್ಕಳ- ಪಡುಬಿದ್ರಿ ರಾಜ್ಯ ಹೆದ್ದಾರಿಯ ಸಂಪೂರ್ಣ ಬಂದ್‌ಗೆ ಕರೆ ನೀಡಲಾಗಿದೆ ಎಂದರು.

ಕಾರ್ಕಳದಿಂದ ಪಡುಬಿದ್ರಿಯವರೆಗೆ ಎಲ್ಲಾ ಅಂಗಡಿ-ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಲು ನಿರ್ಧರಿಸಿದ್ದು, ಪರಿಸರದ ಎಲ್ಲಾ ಶಾಲಾ-ಕಾಲೇಜುಗಳು, ಬ್ಯಾಂಕು ಹಾಗೂ ಇತರ ಕಚೇರಿಗಳನ್ನು ಸಹ ಮುಚ್ಚುವಂತೆ ತಿಳಿಸಲಾಗಿದೆ ಎಂದು ಸುಹಾಸ್ ಹೆಗ್ಡೆ ತಿಳಿಸಿದರು.

ಅಂದು ಬೆಳಗ್ಗೆ 9ಗಂಟೆಗೆ ಬೆಳ್ಮಣ್ ಬಸ್ ನಿಲ್ದಾಣದಲ್ಲಿ ಬೃಹತ್ ಮಟ್ಟ ಪ್ರತಿಭಟನಾ ಮೆರವಣಿಗೆ ಹಾಗೂ ಸಭೆ ನಡೆಯಲಿದೆ. ಈ ಬಂದ್ ಕರೆಗೆ ಎಲ್ಲಾ ಉದ್ಯಮಿಗಳು, ವರ್ತಕರು, ಸಂಘಸಂಸ್ಥೆಗಳು, ಬಸ್ ಮಾಲಕರು, ರಿಕ್ಷಾ, ಟ್ಯಾಕ್ಸಿ ಚಾಲಕರು-ಮಾಲಕರು, ಗಣಿ ಉದ್ಯಮಿಗಳು, ಕೃಷಿಕರು ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ ಎಂದವರು ನುಡಿದರು.

ಪತ್ರಿಕಾಗೋಷ್ಠಿಯಲ್ಲಿ ಹೋರಾಟ ಸಮಿತಿಯ ಶಶಿಧರ ಶೆಟ್ಟಿ, ಸರ್ವಜ್ಞ ತಂತ್ರಿ ಹಾಗ ಹರಿಪ್ರಸಾದ್ ಉಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News