ರಫೇಲ್ ಒಪ್ಪಂದ: ಪ್ರಧಾನಿ ಮೋದಿಗೆ ಕಾಂಗ್ರೆಸ್‌ನ 11 ಪ್ರಶ್ನೆಗಳು

Update: 2018-12-18 16:59 GMT

ಹೊಸದಿಲ್ಲಿ,ಡಿ.18: ರಫೇಲ್ ಯುದ್ಧವಿಮಾನಗಳ ಖರೀದಿ ಒಪ್ಪಂದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿಯವರ ಎದುರು 11 ಪ್ರಶ್ನೆಗಳನ್ನಿಟ್ಟಿರುವ ಕಾಂಗ್ರೆಸ್ ಅವುಗಳಿಗೆ ಉತ್ತರಗಳು ಅಥವಾ ವಿವರಣೆಗಳನ್ನು ಬಯಸಿದೆ.

ಕಾಂಗ್ರೆಸ್‌ನ ರಾಷ್ಟ್ರೀಯ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಟ್ವಿಟರ್ ಮೂಲಕ ಮೋದಿಯವರಿಗೆ ಈ ಪ್ರಶ್ನೆಗಳನ್ನು ಕೇಳಿದ್ದಾರೆ. ಅವರ ಮೊದಲ ಪ್ರಶ್ನೆ ಸಿಎಜಿ ವರದಿಗೆ ಸಂಬಂಧಿಸಿದೆ. ರಫೇಲ್ ಕರಿತು ಸರ್ವೋಚ್ಚ ನ್ಯಾಯಾಲಯದ ತೀರ್ಪು ಸಿಎಜಿ ವರದಿಯನ್ನು ಆಧರಿಸಿದೆ, ಆದರೆ ಸಿಎಜಿ ಯಾವುದೇ ವರದಿಯನ್ನು ನೀಡಿಲ್ಲ. ಸಂಸತ್ತಿನಲ್ಲಿ ಅಥವಾ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯೆದುರು ಅದರ ವರದಿ ಮಂಡನೆಯಾಗಿಲ್ಲ. ಸರ್ವೋಚ್ಚ ನ್ಯಾಯಾಲಯದೊಂದಿಗೆ ಇಂತಹ ದೊಡ್ಡ ವಂಚನೆ ಏಕೆ ಎಂದು ಸುರ್ಜೆವಾಲಾ ಪ್ರಶ್ನಿಸಿದ್ದಾರೆ.

ತನ್ನ ಎರಡನೇ ಪ್ರಶ್ನೆಯಲ್ಲಿ ರಿಲಯನ್ಸ್ ಮತ್ತು ಡಸಾಲ್ಟ್ ಏವಿಯೇಷನ್ ನಡುವಿನ ಒಪ್ಪಂದವನ್ನು ಪ್ರಸ್ತಾಪಿಸಿರುವ ಅವರು,ರಿಲಯನ್ಸ್ 2012ರಲ್ಲೇ ಡಸಾಲ್ಟ್ ಜೊತೆ ಒಪ್ಪಂದ ಮಾಡಿಕೊಂಡಿತ್ತು ಎನ್ನುವುದನ್ನು ಸರ್ವೋಚ್ಚ ನ್ಯಾಯಾಲಯದ ನಿರ್ಧಾರವು ಆಧರಿಸಿದೆ. ಆದರೆ ರಿಲಯನ್ಸ್ ಡಿಫೆನ್ಸ್ ಲಿ.2015,ಮಾ.28ರಂದು ಸ್ಥಾಪನೆಗೊಂಡಿತ್ತು ಎನ್ನುವುದನ್ನು ಬೆಟ್ಟು ಮಾಡಿದ್ದಾರೆ.

 ಸುರ್ಜೆವಾಲಾ ತನ್ನ ಮೂರನೇ ಪ್ರಶ್ನೆಯಲ್ಲಿ,ಮೋದಿ ಸರಕಾರವು ರಿಲಯನ್ಸ್ ಪರ ಒಲವು ತೋರಿಸಿತ್ತು ಎಂಬ ಮಾಜಿ ಫ್ರೆಂಚ್ ಅಧ್ಯಕ್ಷ ಫ್ರಾಂಸ್ವಾ ಒಲಾಂಡೆ ಅವರ ಹೇಳಿಕೆಯನ್ನು ನ್ಯಾಯಾಲಯದ ತೀರ್ಪು ಆಧರಿಸಿದೆ ಎಂದು ಆರೋಪಿಸಿದ್ದಾರೆ. ಒಲಾಂಡೆ ತನ್ನ ಹೇಳಿಕೆಯನ್ನು ಪುನರುಚ್ಚರಿಸಿದ್ದರೆ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಅವರೂ ಈ ಹೇಳಿಕೆಯನ್ನು ತಾನು ತಿರಸ್ಕರಿಸುವುದಿಲ್ಲ ಎಂದು ಹೇಳಿದ್ದನ್ನು ಅವರು ನೆನಪಿಸಿದ್ದಾರೆ.

ಎಚ್‌ಎಎಲ್‌ಗೂ ರಫೇಲ್ ಒಪ್ಪಂದಕ್ಕೂ ಸಂಬಂಧವಿಲ್ಲ ಎಂದು ಸರಕಾರವು ನ್ಯಾಯಾಲಯಕ್ಕೆ ತಿಳಿಸಿತ್ತು ಎಂದಿರುವ ಸುರ್ಜೆವಾಲಾ, ಆದರೆ ಎಚ್‌ಎಎಲ್ ಮತ್ತು ಡಸಾಲ್ಟ್ 2014,ಮಾರ್ಚ್‌ನಲ್ಲಿ ಒಪ್ಪಂದವೊಂದನ್ನು ಮಾಡಿಕೊಂಡಿದ್ದವು ಮತ್ತು ಡಸಾಲ್ಟ್ ಸಿಇಒ ಹಾಗೂ ವಿದೇಶಾಂಗ ಕಾರ್ಯದರ್ಶಿಗಳು ಇದನ್ನು ಪ್ರಮಾಣೀಕರಿಸಿದ್ದರು ಎಂದಿದ್ದಾರೆ.

ಸುರ್ಜೆವಾಲಾರ ಐದನೇ ಪ್ರಶ್ನೆ ಸರಕಾರವು ನ್ಯಾಯಾಲಯದಿಂದ ಮರೆಮಾಚಿದ್ದ ಕಾನೂನು ಸಚಿವಾಲಯವು ಎತ್ತಿತ್ತೆನ್ನಲಾದ ಆಕ್ಷೇಪಗಳಿಗೆ ಸಂಬಂಧಿಸಿದ್ದರೆ,36 ಜೆಟ್ ವಿಮಾನಗಳನ್ನು ಖರೀದಿಸಲು ಸರಕಾರವು ನಿರ್ಧರಿಸಿದ ಬಳಿಕ ಅವುಗಳ ಖರೀದಿಗೆ ರಕ್ಷಣಾ ಖರೀದಿ ಮಂಡಳಿಯು ಒಪ್ಪಿಗೆ ನೀಡಿರುವುದು ಸ್ಥಾಪಿತ ಪದ್ಧತಿಯ ಉಲ್ಲಂಘನೆಯಾಗಿದೆ ಎನ್ನುವುದು ಆರನೇ ಆರೋಪವಾಗಿದೆ.

126 ವಿಮಾನಗಳ ಬದಲು 36 ವಿಮಾನಗಳನ್ನು ಖರೀದಿಸುವ ಸರಕಾರದ ನಿರ್ಧಾರವು ರಾಷ್ಟ್ರದ ಭದ್ರತೆಯೊಂದಿಗೆ ಮಾಡಿಕೊಂಡಿರುವ ಬಹುದೊಡ್ಡ ರಾಜಿಯಾಗಿದೆ ಮತ್ತು ಇದಕ್ಕಾಗಿ ಅದು ಸರ್ವೋಚ್ಚ ನ್ಯಾಯಾಲಯಕ್ಕೆ ಯಾವುದೇ ಕಾರಣವನ್ನು ತಿಳಿಸಿಲ್ಲ ಎನ್ನುವ ಅಂಶವನ್ನು ಒಂಭತ್ತನೇ ಪ್ರಶ್ನೆಯು ಒಳಗೊಂಡಿದೆ.

ಕಾಂಗ್ರೆಸ್ ಸರಕಾರವು ಪ್ರತಿ ವಿಮಾನಕ್ಕೆ 526 ಕೋ.ರೂ.ಬೆಲೆಯನ್ನು ನಿಗದಿಗೊಳಿಸಿತ್ತು,ಆದರೆ ಮೋದಿ ಸರಕಾರವು 1,670 ಕೋ.ರೂ.ಗೆ ಖರೀದಿಸುತ್ತಿದೆ ಮತ್ತು 41,205 ಕೋ.ರೂ.ಗಳ ಸಾರ್ವಜನಿಕ ಹಣವನ್ನು ವಂಚಿಸಿದೆ ಎಂದು ಸುರ್ಜೆವಾಲಾ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News