ವರದಕ್ಷಿಣಿ ಕಿರುಕುಳ ಪ್ರಕರಣ: ಆರೋಪಿಗಳಿಗೆ ಜೈಲುಶಿಕ್ಷೆ

Update: 2018-12-18 17:01 GMT

ಉಡುಪಿ, ಡಿ.18: ವರದಕ್ಷಿಣೆ ಕಿರುಕುಳ ಪ್ರಕರಣದ ಆರೋಪಿ ಪತಿ ಹಾಗೂ ಆತನ ಸಹೋದರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಉಡುಪಿ ಮೂರನೇ ಹೆಚ್ಚುವರಿ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ಡಿ.17ರಂದು ತೀರ್ಪು ನೀಡಿದೆ.

ಶಿರ್ವ ಕೋಡಿಹಿತ್ಲು ನಿವಾಸಿ ರವಿ ರೋಶನ್ ನಜ್ರೇತ್ ಹಾಗೂ ಆತನ ಸಹೋದರಿ ಲೀನಾ ನಜ್ರೆತ್ ಶಿಕ್ಷೆಗೆ ಗುರಿಯಾದ ಆರೋಪಿಗಳು. ರವಿ ರೋಶನ್ ನಜ್ರೇತ್ ಹಾಗೂ ಅನಿತಾ ಜುಸ್ತಿನ್ ಮೆಂಡೋನ್ಸಾ 2013ರ ಜ.14 ರಂದು ಶಿರ್ವದ ಚರ್ಚ್‌ನಲ್ಲಿ ವಿವಾಹವಾಗಿದ್ದು, ಈ ವೇಳೆ ಅನಿತಾ ಕುಟುಂಬ ದಿಂದ ಒತ್ತಾಯಪೂರ್ವಕವಾಗಿ ವರದಕ್ಷಿಣೆ ರೂಪದಲ್ಲಿ 20 ಪವನ್ ಚಿನ್ನವನ್ನು ಪಡೆದುಕೊಂಡಿದ್ದರು.

ಮದುವೆ ಬಳಿಕ ರೋಶನ್ ತನ್ನ ಪತ್ನಿ ಅನಿತಾ ಜೊತೆ ಅನೋನ್ಯತೆಯಿಂದ ವೈವಾಹಿಕ ಜೀವನ ನಡೆಸದೆ, ಆತನ ಸಹೋದರಿ ಲೀನಾ ನಜ್ರೆತ್‌ರೊಂದಿಗೆ ಸೇರಿಕೊಂಡು ಅವಾಚ್ಯವಾಗಿ ಬೈದು ಮಾನಸಿಕ ಮತ್ತು ದೈಹಿಕ ಹಿಂಸೆಯನ್ನು ನೀಡಿ ಜೀವ ಬೆದರಿಕೆ ಹಾಕಿದ್ದರು. ಅಲ್ಲದೆ ವರದಕ್ಷಿಣೆಯ ರೂಪದಲ್ಲಿ ಮತ್ತೆ 3,00,000ರೂ. ಹಣವನ್ನು ತವರು ಮನೆಯಿಂದ ತರುವಂತೆ ಒತ್ತಾಯ ಹೇರಿ ಹಿಂಸಿಸಿರುವುದಾಗಿ ಅನಿತಾ ನ್ಯಾಯಾಲಯದಲ್ಲಿ ಖಾಸಗಿ ದೂರು ನೀಡಿದ್ದರು.

ನ್ಯಾಯಾಲಯದ ಆದೇಶದಂತೆ ಆಗಿನ ಶಿರ್ವ ಠಾಣೆ ಉಪನಿರೀಕ್ಷಕ ಅಶೋಕ್ ಪಿ. ತನಿಖೆ ನಡೆಸಿ ಆರೋಪಿಗಳ ವಿರುದ್ಧ ಭಾ.ದಂ.ಸಂ ಕಲಂ.498 (ಎ), 504, 506 ಮತ್ತು ವರದಕ್ಷಿಣೆ ನಿಷೇಧ ಕಾಯ್ದೆ ಕಲಂ 3 ಮತ್ತು 4ರಡಿ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಪ್ರಕರಣದ ಬಗ್ಗೆ ಉಡುಪಿ ಮೂರನೇ ಹೆಚ್ಚುವರಿ ಸಿ.ಜೆ. ಮತ್ತು ಜೆಎಂಎಫ್‌ಸಿ ನ್ಯಾಯಾ ಲಯದಲ್ಲಿ ವಿಚಾರಣೆ ನಡೆದಿತ್ತು.

ಪ್ರಕರಣದ ಸಾಕ್ಷ್ಯ ಹಾಗೂ ಪೂರಕ ಸಾಕ್ಷ್ಯವನ್ನು ಹಾಗೂ ವಾದ-ವಿವಾದವನ್ನು ಆಲಿಸಿದ ನ್ಯಾಯಾಧೀಶ ರಾಮ್ ಪ್ರಶಾಂತ್ ಆರೋಪಿತರ ವಿರುದ್ಧ ಮೇಲಿನ ಪ್ರಕರಣವು ಸಾಬೀತಾಗಿದೆ ಎಂದು ತೀರ್ಮಾನಿಸಿ, ಕಲಂ.498(ಎ)ರಡಿ 2 ವರ್ಷ ಶಿಕ್ಷೆ ಮತ್ತು 5,000ರೂ. ದಂಡ, ಕಲಂ 504ರಡಿ 6 ತಿಂಗಳ ಶಿಕ್ಷೆ ಮತ್ತು 5,000ರೂ. ದಂಡ, ಕಲಂ 506ರಡಿ 6 ತಿಂಗಳ ಶಿಕ್ಷೆ ಮತ್ತು 5,000 ರೂ. ದಂಡ, ವರದಕ್ಷಿಣೆ ನಿಷೇಧ ಕಾಯ್ದೆಯಡಿಯಲ್ಲಿ 3ವರ್ಷ ಶಿಕ್ಷೆ ಮತ್ತು 10,000ರೂ. ದಂಡ ವಿಧಿಸಿದ್ದಲ್ಲದೆ ದಂಡ ಪಾವತಿಸಲು ತಪ್ಪಿದ್ದಲ್ಲಿ 1 ತಿಂಗಳ ಸಾದಾರಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಅಭಿಯೋಜನೆ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಜಯಂತಿ ಕೆ. ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News