ಆಳ್ವಾಸ್‍ನಲ್ಲಿ ದತ್ತು ಶಿಕ್ಷಣಕ್ಕೆ ಒಪ್ಪಿದ ಸುಳ್ವಾಡಿ ದುರಂತದಲ್ಲಿ ಹೆತ್ತವರನ್ನು ಕಳಕೊಂಡರು ಮಕ್ಕಳು

Update: 2018-12-18 17:09 GMT

ಮೂಡುಬಿದಿರೆ, ಡಿ. 18: ಮೈಸೂರಿನ ಸುಳ್ವಾಡಿ ಮಾರಮ್ಮ ದೇವಿ ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವನೆಯಿಂದ ಮೃತಪಟ್ಟವರ ಪೈಕಿ  ಕೃಷ್ಣ ನಾಯ್ಕ್-ಮೈಲಿಬಾಯಿ ದಂಪತಿಯ  ಮೂವರು ಮಕ್ಕಳಿಗೆ ವಸತಿ, ಊಟೋಪಚಾರ ಸಹಿತ ಸಂಪೂರ್ಣ ಉಚಿತ ದತ್ತು ಶಿಕ್ಷಣ ನೀಡಲು ಮುಂದಾದ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮಾನವೀಯ ಕೊಡುಗೆಯನ್ನು ಈ ಮಕ್ಕಳು ಒಪ್ಪಿಕೊಂಡಿದ್ದಾರೆ.

ದುರಂತ ನಡೆದ ಚಾಮರಾಜ ನಗರದ ಸುಳ್ವಾಡಿಯ ಕೃಷ್ಣ ನಾಯ್ಕ್ ಮನೆಗೆ ಮಂಗಳವಾರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪರವಾಗಿ  ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ಆಳ್ವಾಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಯತಿಕುಮಾರ ಸ್ವಾಮಿ ಗೌಡ, ಕಾಮರ್ಸ್ ಡೀನ್ ಪ್ರಶಾಂತ್ ಹಾಗೂ ಉಪನ್ಯಾಸಕ ಅಂಬರೀಶ್ ಅವರ ನಿಯೋಗ ಭೇಟಿ ಮಾಡಿದ್ದು  ಮೂವರು ಮಕ್ಕಳು ಹಾಗೂ ಅವರ ಸಂಬಂಧಿಕರಿಗೆ ಸಾಂತ್ವನ ಹೇಳುವುದರ ಜತೆಗೆ ಒಂದು ಲಕ್ಷ ರೂ ಆರ್ಥಿಕ ನೆರವು ಹಸ್ತಾಂತರಿಸಿದೆ.

ಇದೇ ವೇಳೆ ಕೃಷ್ಣ ನಾಯ್ಕ್-ಮೈಲಿಬಾಯಿ ದಂಪತಿಯ  ಹಿರಿಯ ಮಗಳು ರಾಣಿಬಾಯಿ ಅವರ ಬಿಎಸ್‍ಸಿ , ಎರಡನೇ ಮಗಳು ಪ್ರಿಯಾಬಾಯಿ ಅವರ ಬಿಎಸ್‍ಸಿ ನರ್ಸಿಂಗ್ ವ್ಯಾಸಂಗ ಹಾಗೂ ಮಗ ರಾಜೇಶ್ ನಾಯ್ಕ್‍ನ ಪಿಯುಸಿ ವ್ಯಾಸಂಗವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ದತ್ತು ಶಿಕ್ಷಣದಡಿ ಪಡೆಯುವ ಬಗ್ಗೆ ಸಮ್ಮತಿ ದೊರೆತಿದ್ದು ಹೆತ್ತವರ ಕ್ರಿಯಾಕಾರ್ಯಗಳ ಬಳಿಕ ಮೂವರೂ ಮೂಡುಬಿದಿರೆಯ ಆಳ್ವಾಸ್‍ಗೆ  ಶಿಕ್ಷಣಕ್ಕಾಗಿ ಸೇರಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News