ಮಹಿಳೆಗೆ ವಂಚನೆ-ಬೆದರಿಕೆ ಆರೋಪ ಸಾಬೀತು: ಬುಧವಾರ ಶಿಕ್ಷೆ ಪ್ರಕಟ

Update: 2018-12-18 17:26 GMT

ಮಂಗಳೂರು, ಡಿ.18: ಮದುವೆಯಾಗುವುದಾಗಿ ನಂಬಿಸಿ ಮಹಿಳೆಯ ಮೇಲೆ ಅತ್ಯಾಚಾರಗೈದ ಮತ್ತು ವಂಚನೆ, ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ  6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮಂಗಳವಾರ ಸಾಬೀತಾಗಿದೆ. ಬುಧವಾರ ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ.

ಮುಲ್ಕಿಯ ಕೆ.ಎಸ್.ರಾವ್ ನಗರದ ದುರ್ಗಾದಯ ನಿವಾಸಿ ಮನೋಜ್ ಕುಮಾರ್ (36) ಅಪರಾಧಿ. ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದ ಈತನನ್ನು ಅಪರಾಧ ಸಾಬೀತಾದ ಕಾರಣ ಪೊಲೀಸರು ಮತ್ತೆ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಪ್ರಕರಣದ ವಿವರ: ನಂದಿಕೂರು ಗ್ರಾಮದ ಮಹಿಳೆಯೊಬ್ಬರು ಮಹಾರಾಷ್ಟ್ರದ ದೊಂಬಿವಿಲಿಯಲ್ಲಿ ವಾಸವಿದ್ದು, ದೆಹಲಿಯಲ್ಲಿ ವೀಸಾ ಕ್ಲಿಯರೆನ್ಸ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರ ಪತಿ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ್ದರು. ಇವರು ಮಗನೊಂದಿಗೆ ವಾಸವಿದ್ದರು. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಊರಿಗೆ ಹೋಗುತ್ತಿದ್ದಾಗ ಕುಮಾರ್ ಅಸೋಸಿಯೇಟ್ಸ್ ಜಾಹೀರಾತು ಫಲಕ ನೋಡಿದ್ದರು. ಅದರಲ್ಲಿದ್ದ ದೂರವಾಣಿ ಸಂಖ್ಯೆಯನ್ನು ದಾಖಲಿಸಿಕೊಂಡ ಮಹಿಳೆ ತನ್ನ ಊರಿನಲ್ಲಿ ಮನೆ ಕಟ್ಟಿಸುವುದಕ್ಕಾಗಿ ಮನೋಜ್ ಕುಮಾರ್ ಜತೆ ದೂರವಾಣಿ ಮೂಲಕ ಮಾತನಾಡಿ ಮನೆ ಕಟ್ಟುವ ವಿಷಯ ತಿಳಿಸಿದ್ದರು. ಅದರಂತೆ ಹಲವು ಕಡೆ ಮನೆ ಕಟ್ಟಲು ಜಾಗ ನೋಡಿದ್ದರು. ಅಂತೂ ಬಪ್ಪನಾಡು ದೇವಳದ ಬಳಿ 9 ಸೆಂಟ್ಸ್ ಜಾಗದಲ್ಲಿ ಮನೆ ಕಟ್ಟಿಸಲು ಒಪ್ಪಿಕೊಂಡರು. ಹಾಗೇ ಮನೆ ಕಟ್ಟಿ 60 ಲಕ್ಷ ರೂ.ಗೆ ಮಾರಾಟ ಮಾಡುವುದಾಗಿ ಮನೋಜ್ ಕುಮಾರ್ ಹೇಳಿದ್ದ. ಮಹಿಳೆ ಆತನ ಮಾತನ್ನು ನಂಬಿಕೊಂಡು ಮೊದಲ ಬಾರಿಗೆ 50 ಸಾವಿರ ರೂ. ಮುಂಗಡ ನೀಡಿದ್ದರು. ಆದರೆ ಯಾವುದೇ ಕರಾರು ಪತ್ರ ಮಾಡಿಸಿಕೊಂಡಿರಲಿಲ್ಲ.
ಆ ಬಳಿಕ ಮಹಿಳೆ ಹಲವು ಬಾರಿ ವಿಜಯಾ ಬ್ಯಾಂಕ್, ಭಾರತ್ ಕೋ ಆಪರೇಟಿವ್ ಬ್ಯಾಂಕ್, ಎಸ್‌ಬಿಐ ಬ್ಯಾಂಕ್ ಖಾತೆಗಳಿಂದ ಆತನ ಖಾತೆಗೆ ಲಕ್ಷಗಟ್ಟಲೆ ಹಣ ವರ್ಗಾಯಿಸಿದ್ದರು. 26 ಲಕ್ಷ ರೂ. ತನಕ ಹಣ ಪಡೆದುಕೊಂಡಿದ್ದ ಬಗ್ಗೆ ಮನೋಜ್ ಕುಮಾರ್ ರಶೀದಿಯನ್ನೂ ನೀಡಿದ್ದ. ಒಟ್ಟು ಸುಮಾರು 60 ಲಕ್ಷಕ್ಕಿಂತಲೂ ಅಧಿಕ ಹಣವನ್ನು ತನ್ನ ಖಾತೆಗೆ ಜಮೆ ಮಾಡಿಸಿಕೊಂಡಿದ್ದ.

2013 ಸೆಪ್ಟೆಂಬರ್ 6ರಂದು ಮಹಿಳೆ ಆತನ ಕಚೇರಿಗೆ ಹೋದಾಗ ಮದುವೆಯಾಗುವುದಾಗಿ ನಂಬಿಸಿ ಮನೋಜ್ ಕುಮಾರ್ ಅತ್ಯಾಚಾರ ನಡೆಸಿದ್ದ ಎನ್ನಲಾಗಿದೆ. 2014 ಮೇ 2ರಂದು ಗೃಹ ಪ್ರವೇಶ ನಡೆಸಿದ್ದರು. ಮಹಿಳೆಯ ಹೆಸರಿನಲ್ಲೇ ಗೃಹ ಪ್ರವೇಶದ ಆಮಂತ್ರಣ ಪತ್ರಿಕೆಯನ್ನೂ ಆರೋಪಿ ಮನೋಜ್ ಕುಮಾರ್ ಪ್ರಕಟಿಸಿದ್ದ. ಆ ಬಳಿಕ ಮದುವೆಯಾಗುವಂತೆ ಕೇಳಿಕೊಂಡಾಗ ಆತ ಸರಿಯಾಗಿ ಸ್ಪಂದಿಸಿರಲಿಲ್ಲ. ಮನೆಯನ್ನು ನೋಂದಣಿ ಮಾಡಿಸಿಕೊಡಬೇಕು ಎಂದು ಕೇಳಿದಾಗಲೂ ನೋಂದಣಿ ಮಾಡಿಸದೆ ಅಲೆದಾಡಿಸಿದ. ಆತ ಆ ಮನೆಯ ದಾಖಲಾತಿಯನ್ನು ಸಿಂಡಿಕೇಟ್ ಬ್ಯಾಂಕ್‌ನಲ್ಲಿರಿಸಿ 25 ಲಕ್ಷ ರೂ. ಸಾಲ ಪಡೆದಿರುವುದು ಗಮನಕ್ಕೆ ಬಂತು.

ಮನೋಜ್ ಕುಮಾರ್ ಹಣವನ್ನೂ ಹಿಂತಿರುಗಿಸಲಿಲ್ಲ, ಮದುವೆಯೂ ಆಗಲಿಲ್ಲ, ಮನೆಯನ್ನು ನೋಂದಣಿ ಮಾಡಿಸಿಯೂ ಕೊಡದೆ ವಂಚನೆ ಮಾಡಿದ್ದ ಎಂದು ಆರೋಪಿಸಿ ಮಹಿಳೆ 2014 ಡಿ.12ರಂದು ಮುಲ್ಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಡಿ.13ರಂದು ಆರೋಪಿಯನ್ನು ಬಂಧಿಸಿದ್ದರು. ಮೂರು ತಿಂಗಳ ಬಳಿಕ ಆತ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದ. ಅಂದಿನ ಇನ್‌ಸ್ಪೆಕ್ಟರ್ ರಾಮಚಂದ್ರ ನಾಯಕ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

25 ಸಾಕ್ಷಿ, 75 ದಾಖಲೆ ಸಂಗ್ರಹ: ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ವೇಳೆ ಖಾತೆಗೆ ಹಣ ವರ್ಗಾವಣೆಗೊಳಿಸಿದ ಬ್ಯಾಂಕ್‌ಗಳ ವ್ಯವಸ್ಥಾಪಕರು ಸೇರಿದಂತೆ 25 ಸಾಕ್ಷಿ, 75 ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. 26 ಲಕ್ಷ ರೂ. ಪಡೆದ ಬಗ್ಗೆ ನೀಡಿದ ರಶೀದಿಯನ್ನು ಹಸ್ತಾಕ್ಷರ ತಜ್ಞರ ಮೂಲಕ ಪರೀಕ್ಷೆಗೊಳಪಡಿಸಿದ್ದು, ಅದರಲ್ಲಿ ಮನೋಜ್ ಕುಮಾರ್‌ನದ್ದೇ ಸಹಿ ಮತ್ತು ಸೀಲ್ ಹಾಕಿರುವುದು ಸಾಬೀತಾಗಿದೆ. ಇದೀಗ ಆ ಮನೆಯಲ್ಲಿ ಮಹಿಳೆಯ ಹೆತ್ತವರು ವಾಸವಿದ್ದಾರೆ. ಆದರೆ ಮನೆಯ ಮೇಲೆ ಸಾಲ ಪಡೆದ ಕಾರಣ ಬ್ಯಾಂಕ್‌ನವರು ಏಲಂ ಮಾಡಲು ಹೊರಟಿದ್ದಾರೆ ಎನ್ನಲಾಗಿದೆ.

ಸಾಕ್ಷಾಧಾರದ ಕೊರತೆಯಿಂದ (ಐಪಿಸಿ ಸೆಕ್ಷನ್ 376) ಅತ್ಯಾಚಾರ ಪ್ರಕರಣ ಖುಲಾಸೆಗೊಂಡಿದೆ. ಆದರೆ (ಐಪಿಸಿ ಸೆಕ್ಷನ್ 420) ಮೋಸ ಹಾಗೂ (ಐಪಿಸಿ ಸೆಕ್ಷನ್ 506) ಬೆದರಿಕೆ ಒಡ್ಡಿದ ಪ್ರಕರಣ ಸಾಬೀತಾಗಿದೆ ಎಂದು ನ್ಯಾಯಾಧೀಶ ಡಿ.ಟಿ.ಪುಟ್ಟರಂಗ ಸ್ವಾಮಿ ಆದೇಶದಲ್ಲಿ ತಿಳಿಸಿದ್ದಾರೆ. ಸರಕಾರದ ಪರವಾಗಿ ಅಭಿಯೋಜಕಿ ಜುಡಿತ್ ಒ.ಎಂ. ಕ್ರಾಸ್ತಾ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News