ಗ್ರಾಮೀಣ ಅಂಚೆ ನೌಕರರಿಂದ ಮತ್ತೆ ಅನಿರ್ಧಿಷ್ಠಾವಧಿ ಮುಷ್ಕರ ಆರಂಭ

Update: 2018-12-18 17:31 GMT

ಪುತ್ತೂರು, ಡಿ. 18:  ಭಾರತೀಯ ಅಂಚೆ ಇಲಾಖೆಯಲ್ಲಿ ಅವಿಶ್ರಾಂತ ಸೇವೆ ಸಲ್ಲಿಸುತ್ತಿರುವ ಗ್ರಾಮೀಣ ಅಂಚೆ ನೌಕರರ ವೇತನ ಆಯೋಗದ ವರದಿಯ ಶಿಫಾರಸ್ಸನ್ನು ಕೂಡಲೇ ಜಾರಿಗೊಳಿಸುವಂತೆ ಆಗ್ರಹಿಸಿ ಗ್ರಾಮೀಣ ಅಂಚೆ ನೌಕರರು ಮಂಗಳವಾರದಿಂದ ಮತ್ತೆ ಅನಿರ್ಧಿಷ್ಠಾವಧಿ ಮುಷ್ಕರ ಆರಂಭಿಸಿದ್ದು, ಗ್ರಾಮೀಣ ಅಂಚೆ ವ್ಯವಸ್ಥೆ ಸ್ತಬ್ಧಗೊಳ್ಳಲಿದೆ.

ಕೆಲವು ತಿಂಗಳ ಹಿಂದೆ ಇದೇ ಬೇಡಿಕೆಯನ್ನು ಮುಂದಿಟ್ಟುಕೊಂಡು ದೇಶದಾದ್ಯಂತ ಗ್ರಾಮೀಣ ಅಂಚೆ ನೌಕರರ ಸಂಘಟನೆಗಳು ಮುಷ್ಕರ ನಡೆಸಿದ್ದು, ಕೇಂದ್ರ ಸರ್ಕಾರ ಕ್ಯಾಬಿನೆಟ್ ಅನುಮೋದನೆ ನೀಡಿದ ಬಳಿಕ ಮುಷ್ಕರ ಹಿಂಪಡೆಯಲಾಗಿತ್ತು. ಆದರೆ ಶಿಫಾರಸ್ಸನ್ನು ಜಾರಿಗೊಳಿಸದೆ ಮತ್ತೆ ವಂಚಿಸಲಾಗಿದೆ ಎಂದು ಆರೋಪಿಸಿರುವ ಸಂಘಟನೆಗಳು ಮತ್ತೆ ಮುಷ್ಕರಕ್ಕೆ ಕರೆ ನೀಡಿವೆ.

ಪುತ್ತೂರಿನ ಪ್ರಧಾನ ಅಂಚೆ ಕಚೇರಿ ಬಳಿ ಮಂಗಳವಾರ ಸೇರಿದ ಉಪವಿಭಾಗ ವ್ಯಾಪ್ತಿಯ ಗ್ರಾಮೀಣ ಅಂಚೆ ನೌಕರರು ಸಾಂಕೇತಿಕವಾಗಿ ಪ್ರತಿಭಟನೆಗೆ ಚಾಲನೆ ನೀಡಿದ್ದಾರೆ. ಮುಂದಿನ ಮುಷ್ಕರದ ರೂಪುರೇಷೆ, ಮುಷ್ಕರದಲ್ಲಿ ನೌಕರರ ಪಾಲ್ಗೊಳ್ಳುವಿಕೆಯ ಕುರಿತು ಚರ್ಚೆ ನಡೆಸಿದ್ದಾರೆ. ಬುಧವಾರದಿಂದ ಪ್ರಧಾನ ಅಂಚೆ ಕಚೇರಿಯ ಮುಂಭಾಗದಲ್ಲಿ ನೂರಾರು ನೌಕರರು ಅನಿರ್ಧಿಷ್ಠಾವಧಿ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ. 

ಗ್ರಾಮೀಣ ಅಂಚೆ ನೌಕರರ ಸಂಘಟನೆಯ ವಿಭಾಗೀಯ ಅಧ್ಯಕ್ಷ ವಿಠಲ ಎಸ್. ಪೂಜಾರಿ, ಪ್ರಮುಖರಾದ ಸಂತೋಷ್ ಪುತ್ತೂರು, ಕಮಲಾಕ್ಷ ಸುಳ್ಯ, ಯತೀನ್, ಲೀಯಾ ಡಿಸೋಜ, ಗಣೇಶ್ ಬಂಟ್ವಾಳ, ಶೇಖರ್ ಬೆಳ್ತಂಗಡಿ, ಪ್ರಮೋದ್ ಬಳಂಜ, ಭೂಷಣ್ ಕುಮಾರ್ ಸುಳ್ಯ ಮತ್ತಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News