ಜಿಲ್ಲಾ ಉಸ್ತುವಾರಿ ಸಚಿವರಿಂದ ತಾರತಮ್ಯ: ಜೆಡಿಎಸ್ ಕೌನ್ಸಿಲರ್‌ಗಳ ಆರೋಪ

Update: 2018-12-19 13:57 GMT

ಮಂಗಳೂರು,ಡಿ.19: ಉಳ್ಳಾಲ ನಗರಸಭೆಯ ನಗರೋತ್ಥಾನ ಯೋಜನೆಯಡಿ ಮಂಜೂರಾಗಿದ್ದ 25 ಕೋ.ರೂ. ಮೊತ್ತದ ವಿವಿಧ ಕಾಮಗಾರಿಗಳನ್ನು ಬದಲಾಯಿಸುವ ಮೂಲಕ ಜಾತ್ಯತೀತ ಜನತಾದಳದ ಕೌನ್ಸಿಲರ್‌ಗಳಿಗೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅನ್ಯಾಯ ಮಾಡಿದ್ದಾರೆ ಎಂದು ಉಳ್ಳಾಲ ನಗರಸಭೆ ಸದಸ್ಯ ಹಾಗೂ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನಕರ ಉಳ್ಳಾಲ್ ಆರೋಪಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಐದು ಮಂದಿಯನ್ನು ಸೋಲಿಸಿ ಜೆಡಿಎಸ್ ಅಭ್ಯರ್ಥಿಗಳು ಗೆದ್ದಿದ್ದರು. ಇದರಿಂದ ಕಾಂಗ್ರೆಸ್ಸಿಗರು ಹತಾಶೆಗೊಂಡಿದ್ದರು. ಮಂಜೂರಾಗಿದ್ದ ಕಾಮಗಾರಿಗಳನ್ನು ಸಚಿವರ ಹಿಂಬಾಲಕರ ಕುಮ್ಮಕ್ಕಿನಿಂದಾಗಿ ಬದಲಾಯಿಸಲಾಗಿದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರವಿದ್ದರೂ, ಕ್ಷೇತ್ರದ ಶಾಸಕರೂ ಆಗಿರುವ ಉಸ್ತುವಾರಿ ಸಚಿವರು ದ್ವೇಷದ ರಾಜಕೀಯ ಮೂಲಕ ಜೆಡಿಎಸ್ ಸದಸ್ಯರಿಗೆ ಅನ್ಯಾಯ ಮಾಡಿದ್ದಾರೆ. ಈ ಬಗ್ಗೆ ಈಗಾಗಲೇ ಸಚಿವರು ಮತ್ತು ಅಧಿಕಾರಿಗಳ ಗಮನ ಸೆಳೆದರೂ ಯಾವುದೇ ಪ್ರಯೋಜನ ಆಗಿಲ್ಲ. ಮುಂದಿನ ವಾರ ಬೆಂಗಳೂರಿಗೆ ತೆರಳಿ ಪಕ್ಷದ ನಾಯಕರ ಗಮನ ಸೆಳೆಯುತ್ತೇವೆ. ಅದಕ್ಕೂ ಸ್ಪಂದನ ಸಿಗದಿದ್ದಲ್ಲಿ ನಗರಸಭೆಯ ಮುಂದೆ ಪ್ರತಿಭಟನೆ ಮಾಡುತ್ತೇವೆ. ಅದರಿಂದಲೂ ಪ್ರಯೋಜನ ಆಗದಿದ್ದರೆ, ಬದಲಾಯಿಸಿದ ಕಾಮಗಾರಿ ಸ್ಥಗಿತಗೊಳಿಸಲು ಕೋರ್ಟ್‌ನಿಂದ ತಡೆಯಾಜ್ಞೆ ತರುತ್ತೇವೆ ಎಂದು ದಿನಕರ ಉಳ್ಳಾಲ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಉಳ್ಳಾಲ ನಗರಸಭಾ ವ್ಯಾಪ್ತಿಯ ಜೆಡಿಎಸ್ ಅಧ್ಯಕ್ಷ ಮುಸ್ತಫಾ, ಸದಸ್ಯರಾದ ಯು.ಎಂ. ಜಬ್ಬಾರ್, ಖಲೀಲ್ ಉಳ್ಳಾಲ, ಮುಶ್ತಾಕ್ ಪಟ್ಲ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News