×
Ad

ಮೈಸೂರು ಸಿಲ್ಕ್ ನಮ್ಮ ಸಂಸ್ಕೃತಿ, ಪರಂಪರೆಯ ಭಾಗ: ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ

Update: 2018-12-19 19:31 IST

ಉಡುಪಿ, ಡಿ.19: ಮೈಸೂರು ಸಿಲ್ಕ್ ನಮ್ಮ ರಾಜ್ಯದ ಸಂಸ್ಕೃತಿ ಹಾಗೂ ಪರಂಪರೆಯ ಒಂದು ಭಾಗವಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅಭಿಪ್ರಾಯ ಪಟ್ಟಿದ್ದಾರೆ.

ಬುಧವಾರ ಉಡುಪಿ ಡಯಾನ ಹೊಟೇಲ್ ಸಭಾಂಗಣದಲ್ಲಿ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ (ಕೆಎಸ್‌ಐಸಿ) ವತಿಯಿಂದ ಡಿ.19ರಿಂದ 22ರವರೆಗೆ ಆಯೋಜಿಸಿರುವ ಮೈಸೂರು ಸಿಲ್ಕ್ ಸೀರೆ ಹಾಗೂ ಇತರ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. 

ಮೈಸೂರು ಸಿಲ್ಕ್ ಸೀರೆಗಳು ಉತ್ತಮ ಗುಣಮಟ್ಟ ಹಾಗೂ ದೀರ್ಘ ಬಾಳಿಕೆಗೆ ಪ್ರಸಿದ್ಧಿಯಾಗಿದ್ದು, ತಾನು ಇದರ ಉತ್ಪನ್ನಗಳನ್ನು ಸ್ವತಹ ಖರೀದಿಸಿ ನೋಡಿದ್ದೇನೆ ಎಂದು ಐಎಸ್ ತರಬೇತಿ ಅವಧಿಯಲ್ಲಿ ಮೈಸೂರಿನಲ್ಲಿರುವ ಕೆಎಸ್‌ಐಸಿಯ ಕಾರ್ಖಾನೆಯಿಂದ ಹತ್ತು ವರ್ಷಗಳ ಹಿಂದೆ ಖರೀದಿಸಿದ ಸೀರೆ ಇನ್ನೂ ಸ್ವಲ್ಪವೂ ಮಾಸದೇ ಹೊಸದರಂತೆ ಇರುವುದನ್ನು ಜಿಲ್ಲಾಧಿಕಾರಿಗಳು ಉದಾಹರಣೆಯಾಗಿ ನೀಡಿದರು.

ಕೆಎಸ್‌ಐಸಿ ರಾಜ್ಯದಲ್ಲಿ ಉತ್ತಮ ನಿರ್ವಹಣೆ ತೋರುತ್ತಿರುವ ಕೃಷಿ ಆಧಾರಿತ ಉದ್ದಿಮೆಯಾಗಿದೆ. ಇದು ರೈತರಿಂದ(ರೇಷ್ಮೆ ಬೆಳೆಗಾರರು) ರೇಷ್ಮೆ ಗೂಡುಗಳನ್ನು ನೇರವಾಗಿ ಖರೀದಿಸಿ ಉತ್ತಮ ಮೌಲ್ಯವನ್ನು ನೀಡುತ್ತಿದೆ. ಪರಿಶುದ್ಧ ರೇಷ್ಮೆಯಿಂದ ಸಾಂಪ್ರದಾಯಿಕ ಹಾಗೂ ಆಧುನಿಕ ವಿನ್ಯಾಸದ ಸೀರೆಗಳನ್ನು ತಯಾರಿಸಿ ಸ್ಪರ್ಧಾತ್ಮಕ ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಿದೆ. ಮೈಸೂರು ಸಿಲ್ಕ್ ಸೀರೆ ಖರೀದಿ ರಾಜ್ಯದ ಪ್ರತಿಯೊಬ್ಬರ ಹೆಮ್ಮೆ ಎಂದು ಪ್ರಿಯಾಂಕ ಹೇಳಿದರು.

ಕೆಎಸ್‌ಐಸಿ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಭಾನುಪ್ರಕಾಶ್ ಮಾತನಾಡಿ, ಮೈಸೂರು ಸಿಲ್ಕ್ ಸೀರೆಗಳನ್ನು ಅತ್ಯುತ್ತಮ ಗುಣಮಟ್ಟದ ರೇಷ್ಮೆಯಿಂದ ತಯಾರಿಸಲಾಗುತ್ತಿದೆ. ರಾಮನಗರ ಹಾಗೂ ಶಿಡ್ಲಘಟ್ಟಗಳಲ್ಲಿ ಪ್ರತಿದಿನ ರೈತರಿಂದ ನೇರವಾಗಿ ಗುಣಮಟ್ಟದ ರೇಷ್ಮೆಗೂಡುಗಳನ್ನು ಖರೀದಿಸಿ ಅದರಿಂದ ಸಾಂಪ್ರದಾಯಿಕ ರೀತಿಯಲ್ಲಿ ಉತ್ಪಾದಿಸುವ ಈ ಸೀರೆಗಳಲ್ಲಿ ಜರಿಯು ಪರಿಶುದ್ದ ಚಿನ್ನವಾಗಿದ್ದು, ಶೇ.0.65ಚಿನ್ನ ಹಾಗೂ ಶೇ.65ರಷ್ಟು ಬೆಳ್ಳಿಯಿಂದ ತಯಾರಿಸಲಾಗುತ್ತಿದೆ ಎಂದರು. 

ಮೈಸೂರು ರೇಷ್ಮೆಗೆ ನಾವು ಭೌಗೋಳಿಕ ಗುರುತಿನ ನೋಂದಣಿಯನ್ನು ಹೊಂದಿದ್ದೇವೆ. ಇದರಿಂದ ತಯಾರಿಸುವ ಸೀರೆಗಳ ವಿನ್ಯಾಸಗಳು ಸಾಂಪ್ರದಾಯಿಕ ಹಾಗೂ ಆಧುನಿಕತೆಯಿಂದ ಕೂಡಿವೆ. ಸಂಸ್ಥೆಗೆ 2016-17ರಲ್ಲಿ ಮುಖ್ಯಮಂತ್ರಿಗಳ ವಾರ್ಷಿಕ ರತ್ನ ಪ್ರಶಸ್ತಿ ದೊರೆತಿದೆ. ಆನ್‌ಲೈನ್ ಮೂಲಕವೂ ಸಂಸ್ಥೆಗೆ ಗ್ರಾಹಕರು ಕೆಎಸ್‌ಐಸಿ ಉತ್ಪನ್ನಗಳಿಗೆ ಬೇಡಿಕೆ ಸಲ್ಲಿಸಬಹುದಾಗಿದೆ ಎಂದರು.

ಇದೇ ವೇಳೆ ಸಂಸ್ಥೆಯ ಈ ವರ್ಷದ ಹೊಸ ವಿನ್ಯಾಸದ ಸೀರೆಯನ್ನು ಜಿಲ್ಲಾಧಿಕಾರಿ ಪ್ರಿಯಾಂಕ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ಉಡುಪಿಯಲ್ಲಿ ನಾಲ್ಕು ದಿನಗಳ ಕಾಲ ಬೆಳಗ್ಗೆ 10ರಿಂದ ರಾತ್ರಿ 8 ಗಂಟೆಯವರೆಗೆ ನಡೆಯುವ ಈ ಪ್ರದರ್ಶನ ಮತ್ತು ಮಾರಾಟದಲ್ಲಿ ರೂ. 3000ರೂ.ಗಳಿಂದ ಮೂರು ಲಕ್ಷ ರೂ.ಗಳವರೆಗೆ ಸೀರೆ ಹಾಗೂ ಇತರ ಉತ್ಪನಗಳ ಸಂಗ್ರಹವಿದ್ದು, ಶೇ.25 ರವರೆಗೆ ರಿಯಾಯತಿ ನೀಡಲಾಗುವುದು ಎಂದು ಭಾನುಪ್ರಕಾಶ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News