×
Ad

ಡಿ.21ರಂದು ದೇಶಾದ್ಯಂತ ಬ್ಯಾಂಕ್‌ಗಳ ಮುಷ್ಕರ

Update: 2018-12-19 21:17 IST

ಉಡುಪಿ, ಡಿ.18: ತಮ್ಮ ವಿವಿಧ ಬೇಡಿಕೆಗಳು ಹಾಗೂ ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯಿಸಿ ಅಖಿಲ ಭಾರತೀಯ ಬ್ಯಾಂಕ್ ಅಧಿಕಾರಿಗಳ ಸಂಘ (ಎಐಬಿಓಸಿ) ಡಿ.21ರಂದು ಶುಕ್ರವಾರ ದೇಶಾದ್ಯಂತ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿವೆ ಎಂದು ಸಿಂಡಿಕೇಟ್ ಬ್ಯಾಂಕಿನ ಅಧಿಕಾರಿ ವರ್ಗದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಎಐಬಿಓಸಿಯ ಜಂಟಿ ಪ್ರಧಾನ ಕಾರ್ಯದರ್ಶಿ ಯು.ಶಶಿಧರ ಶೆಟ್ಟಿ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಾದ್ಯಂತ ಕಾರ್ಯನಿರತ ಬ್ಯಾಂಕ್ ಅಧಿಕಾರಿಗಳ ಮೇಲೆ ನಡೆಯುತ್ತಿರುವ ಹಲ್ಲೆಗಳನ್ನು ನಾವು ವಿರೋಧಿಸುತಿದ್ದೇವೆ. ಅಧಿಕಾರಿಗಳ ವೈದ್ಯಕೀಯ ಸೌಲಭ್ಯಗಳಲ್ಲಿ ಏಕಪಕ್ಷೀಯವಾಗಿ ಕಡಿತಗೊಳಿಸಿರುವುದನ್ನು ವಿರೋಧಿಸುತಿದ್ದೇವೆ ಎಂದರು.

ಬೇಡಿಕೆ: ಸಂಪೂರ್ಣ ಮೆಂಡೆಟ್‌ನ್ನು ಜಾರಿಗೊಳಿಸಬೇಕು. 11ನೇ ದ್ವಿತೀಯ ವೇತನ ಒಪ್ಪಂದವನ್ನು ಪೂರ್ಣವಾಗಿ ಜಾರಿಗೊಳಿಸಬೇಕು. ನೌಕರರ ವೇತನ ಪರಿಷ್ಕರಣೆಯನ್ನು ಶೀಘ್ರವಾಗಿ ಹಾಗೂ ಸಂಪೂರ್ಣವಾಗಿ ಜಾರಿಗೊಳಿಸಬೇಕು. ಅಧಿಕಾರಿಗಳ ಕೆಲಸದಲ್ಲಿ ಸಮತೋಲನ ತರಲು ಐದು ದಿನಗಳ ಕೆಲಸದ ವಾರವನ್ನು ಪ್ರಾರಂಭಿಸಬೇಕು. ನಿವೃತ್ತ ಬ್ಯಾಂಕ್ ಉದ್ಯೋಗಿಗಳ ಪಿಂಚಣಿ ಪರಿಕ್ಷಕರಣೆ, ಕುಟುಂಬ ಪಿಂಚಣಿಯಲ್ಲಿ ಸುಧಾರಣೆ ಮಾಡಬೇಕು. ಮೂಲ ಬ್ಯಾಂಕ್ ವ್ಯವಹಾರಕ್ಕೆ ಆದ್ಯತೆ ಹಾಗೂ ಬ್ಯಾಂಕೇತರ ಉತ್ಪನ್ನಗಳ ಮಾರಾಟಕ್ಕೆ ನಿಷೇಧ ವಿಧಿಸಬೇಕು.

ನೂತನ ಪಿಂಚಣಿಯನ್ನು ರದ್ದುಮಾಡಿ, ನಿರ್ದಿಷ್ಟ ಪಿಂಚಣಿಯನ್ನು ಜಾರಿಗೊಳಿಸಬೇಕು. ಪ್ರಾದೇಶಿಕ ಬ್ಯಾಂಕುಗಳಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಂತೆ ಪಿಂಚಣಿ ಸೌಲಭ್ಯ ಸೇರಿ ಎಲ್ಲಾ ಸವಲತ್ತುಗಳಲ್ಲಿರುವ ತಾರತಮ್ಯ ನಿವಾರಿಸಬೇಕು. ವಿಜಯಾ ಬ್ಯಾಂಕ್, ದೇನಾ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡ ಬ್ಯಾಂಕುಗಳ ವಿಲೀನವನ್ನು ರದ್ದುಪಡಿಸಬೇಕು.

ಪತ್ರಿಕಾಗೋಷ್ಠಿಯಲ್ಲಿ ಸಿಂಡೀಕೇಟ್ ಬ್ಯಾಂಕಿನ ಶಂಕರ್ ಕುಂದಾಪುರ, ಕೆನರಾ ಬ್ಯಾಂಕಿನ ರಾಕೇಶ್, ವಿಜಯಾ ಬ್ಯಾಂಕಿನ ಅವಿನಾಶ್, ಕಾರ್ಪೋರೇಷನ್ ಬ್ಯಾಂಕಿನ ಜಯಪ್ರಕಾಶ್ ಉಪಸ್ಥಿತರಿದ್ದರು.

ಬ್ಯಾಂಕ್ ವ್ಯವಹಾರ ಗುರುವಾರವೇ ಮುಗಿಸಿ: ಐದು ದಿನ ರಜೆ
ಶುಕ್ರವಾರದ ಬ್ಯಾಂಕ್ ಮುಷ್ಕರದ ನಂತರ ಮುಂದಿನ ನಾಲ್ಕೈದು ದಿನ ಬ್ಯಾಂಕುಗಳಿಗೆ ರಜೆ ಇರುವ ಕಾರಣ, ಗ್ರಾಹಕರು ತಮ್ಮ ಅಗತ್ಯದ ಬ್ಯಾಂಕಿಂಗ್ ವ್ಯವಹಾರಗಳನ್ನು ಗುರುವಾರವೇ ಮುಗಿಸುವುದು ಅತ್ಯಂತ ಸೂಕ್ತ.

ಶುಕ್ರವಾರ ಅಖಿಲ ಭಾರತ ಬ್ಯಾಂಕ್ ಮುಷ್ಕರವಾದರೆ, ಡಿ.22 ತಿಂಗಳ ನಾಲ್ಕನೇ ಶನಿವಾರವಾದ ಕಾರಣ ರಜೆ, 23 ರವಿವಾರ, ಡಿ.25 ಮಂಗಳವಾರ ಕ್ರಿಸ್ಮಸ್ ರಜೆ, 26ರಂದು ಯುಎಫ್‌ಬಿಯು ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದ್ದು ಅಂದು ಬ್ಯಾಂಕುಗಳು ಬಾಗಿಲು ತೆರೆಯುವ ಸಾಧ್ಯತೆ ಇಲ್ಲ. ಹೀಗಾಗಿ ಡಿ.24 ಸೋಮವಾರ ಮಾತ್ರ ಬ್ಯಾಂಕುಗಳು ಕಾರ್ಯನಿರ್ವಹಿಸಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News