ಸೈನೈಡ್ ಮೋಹನ್ ಪ್ರಕರಣದ ತೀರ್ಪು ಮುಂದೂಡಿಕೆ

Update: 2018-12-19 16:22 GMT

ಮಂಗಳೂರು,ಡಿ.19: ಸರಣಿ ಸ್ತ್ರೀ ಹಂತಕ ಸೈನೈಡ್ ಮೋಹನ್ ವಿರುದ್ಧ ದಾಖಲಾಗಿರುವ ಅತ್ಯಾಚಾರ ಮತ್ತು ಕೊಲೆ ಕೃತ್ಯಗಳ ಪೈಕಿ ಮತ್ತೆ ಎರಡು ಪ್ರಕರಣಗಳ ವಿಚಾರಣೆ ಮುಗಿದಿದ್ದು, 2019ರ ಜನವರಿ 17ಕ್ಕೆ ತೀರ್ಪು ಪ್ರಕಟಗೊಳ್ಳಲಿದೆ.

ವಿಟ್ಲ ಹಾಗೂ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಪತ್ತೆಯಾಗಿ, ಮೈಸೂರು ಬಸ್ ನಿಲ್ದಾಣದಲ್ಲಿ ಮೃತದೇಹ ಪತ್ತೆಯಾದ ಇಬ್ಬರು ಯುವತಿಯರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ಮುಗಿದಿದೆ. ಬುಧವಾರ ತೀರ್ಪು ಪ್ರಕಟ ಮಾಡುವ ಸಾಧ್ಯತೆ ಇತ್ತು. ಆದರೆ ಕೊನೆಯ ಹಂತದಲ್ಲಿ ನ್ಯಾಯಾಧೀಶರು ಮುಂದಿನ ತಿಂಗಳಿಗೆ ಮುಂದೂಡಿದ್ದಾರೆ.

ಈವರೆಗೆ ಮೋಹನ್ ವಿರುದ್ಧ ದಾಖಲಾಗಿರುವ ಪ್ರಕರಣಗಳ ಪೈಕಿ ಏಳು ಯುವತಿಯರ ಕೊಲೆ ಪ್ರಕರಣಗಳ ವಿಚಾರಣೆ ಮುಗಿದಿದೆ. ಇನ್ನೂ 13 ಯುವತಿಯರ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದ ಪ್ರಕರಣ ವಿಚಾರಣೆಗೆ ಬಾಕಿ ಇದೆ.

ಸೈನೈಡ್ ಮೋಹನ್ 2004ರಿಂದ 2009ರ ಅವಧಿಯಲ್ಲಿ 20 ಯುವತಿಯರನ್ನು ಅತ್ಯಾಚಾರವೆಸಗಿ, ಕೊಲೆ ಮಾಡಿದ್ದ. 2014ರಲ್ಲಿ ಆತ ಒಟ್ಟು ಮೂರು ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿದ್ದ. ಪುತ್ತೂರು ಠಾಣಾ ವ್ಯಾಪ್ತಿಯಲ್ಲಿ ನಾಪತ್ತೆಯಾಗಿದ್ದ ಯುವತಿಯ ರೇಪ್ ಮತ್ತು ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯವು 2017ರ ಸೆಪ್ಟೆಂಬರ್ 15ರಂದು ಮೋಹನ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಬಂಟ್ವಾಳ ಠಾಣಾ ವ್ಯಾಪ್ತಿಗೆ ಸಂಬಂಧಿಸಿದ 5ನೇ ಪ್ರಕರಣದಲ್ಲಿ 2018 ಫೆಬ್ರವರಿ 24ರಂದು ಜೀವಾವಧಿ ಶಿಕ್ಷೆಗೊಳಗಾಗಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News