×
Ad

14 ವರ್ಷದೊಳಗಿನ ರಾಜ್ಯ ಕ್ರಿಕೆಟ್ ತಂಡಕ್ಕೆ ಉಡುಪಿಯ ಆಶೀಷ್ ನಾಯಕ್ ಆಯ್ಕೆ

Update: 2018-12-19 22:18 IST

ಉಡುಪಿ, ಡಿ.19: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಬೆಂಗಳೂರಿನಲ್ಲಿ ನಡೆಸಿದ 14 ವರ್ಷ ಕೆಳ ಹರೆಯದವರ ಅಂತರ್ ವಲಯ ಪಂದ್ಯಾಟದಲ್ಲಿ ಮಂಗಳೂರು ವಲಯ ತಂಡವನ್ನು ಪ್ರತಿನಿಧಿಸಿದ ಆಶೀಷ್ ನಾಯಕ್, 26 ಮಂದಿಯನ್ನೊಳಗೊಂಡ ರಾಜ್ಯ ಸಂಭಾವ್ಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಅಂತರ್ ವಲಯ ಕ್ರಿಕೆಟ್ ಪಂದ್ಯಗಳಲ್ಲಿ ಬೌಲಿಂಗ್‌ನಲ್ಲಿ ಮಿಂಚಿದ್ದ ಅಶೀಷ್ ನಾಯಕ್, 108 ಓವರುಗಳಲ್ಲಿ 44 ಮೇಡನ್ ಎಸೆದು 183 ರನ್‌ಗಳನ್ನು ನೀಡಿ 17 ವಿಕೆಟ್ ಪಡೆದಿದ್ದರು. ಬ್ಯಾಟಿಂಗ್‌ನಲ್ಲೂ ಅವರು 30.31 ಸರಾಸರಿ ರನ್‌ಗಳೊಂದಿಗೆ ಟೂರ್ನಿಯಲ್ಲಿ ಒಟ್ಟು 154 ರನ್‌ಗಳನ್ನು ಗಳಿಸಿದ್ದರು.

ರಾಜ್ಯ ತಂಡದ ಆಯ್ಕೆಗಾಗಿ ಪ್ರಕಟಿಸಿರುವ ಸಂಭ್ಯಾವ್ಯ ಆಟಗಾರರ ಪಟ್ಟಿಯಲ್ಲಿ ಮಂಗಳೂರು ವಲಯ ತಂಡದಿಂದ ಸ್ಥಾನ ಪಡೆದ ಏಕೈಕ ಆಟಗಾರನೀತ. ಟೂರ್ನಿಯುದ್ದಕ್ಕೂ ತೋರಿದ ಉತ್ತಮ ಆಟ ನಾಯಕ್‌ಗೆ ಮುಂದೆ ರಾಜ್ಯ ಮಟ್ಟದಲ್ಲಿ ಮಿಂಚುವ ಅವಕಾಶವನ್ನು ತಂದುಕೊಟ್ಟಿದೆ.

ಅಶೀಷ್ ನಾಯಕ್ ಉಡುಪಿ ವಳಕಾಡು ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಯಾಗಿದ್ದು, ಪರ್ಕಳದ ನೇತಾಜಿ ಸ್ಪೋರ್ಟ್ಸ್ ಕ್ಲಬ್‌ನ ಸದಸ್ಯನಾಗಿ ಕ್ರಿಕೆಟ್ ಆಡುತ್ತಿದ್ದಾನೆ. ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯು ಮಾಹೆಯ ಸಹಕಾರದೊಂದಿಗೆ ಮಣಿಪಾಲದಲ್ಲಿ ಆಯೋಜಿಸಿರುವ ಕ್ರಿಕೆಟ್ ತರಬೇತಿ ಶಿಬಿರದಲ್ಲಿ ಈತ ತರಬೇತಿಯನ್ನು ಪಡೆಯುತ್ತಿದ್ದಾನೆ.

ಅಶೀಷ್ ಪರ್ಕಳದ ರಮೇಶ್ ನಾಯಕ್ ಮತ್ತು ಶಕುಂತಲಾ ಇವರ ಪುತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News