ಬಂಟ್ವಾಳ ತಾಲೂಕಿನಲ್ಲಿ ಲೋ ವಾಲ್ಟೇಜ್ ಸಮಸ್ಯೆ ಇರುವುದಿಲ್ಲ: ಸಿಎಂ ಕುಮಾರಸ್ವಾಮಿ

Update: 2018-12-19 17:46 GMT

ಬಂಟ್ವಾಳ, ಡಿ.19: ಸಾಮಾನ್ಯವಾಗಿ ಬಂಟ್ವಾಳ ತಾಲೂಕಿನಲ್ಲಿ ಲೋ ವಾಲ್ಟೇಜ್ ಸಮಸ್ಯೆ ಇರುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಬೆಳಗಾವಿ ವಿಧಾನಮಂಡಲದಲ್ಲಿ ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಉಳಿಪಾಡಿ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಮುಖ್ಯಮಂತ್ರಿ ಅವರು, ವಿದ್ಯುತ್ ವಿತರಣಾ ಜಾಲದ ಬಲವರ್ಧನೆಗಾಗಿ ಮತ್ತು ಗುಣಮಟ್ಟದ ನಿರಂತರ ವಿದ್ಯುತ್ ಪೂರೈಕೆಗಾಗಿ ಸುಧಾರಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದ್ದಾರೆ. ಹಾಗೆಯೇ ರೈತರ ನೀರಾವರಿ ಪಂಪ್ ಸೆಟ್ ಕಾಮಗಾರಿಗಳಿಗೆ ಅವಶ್ಯಕತೆ ಇರುವ ಸಾಮಾಗ್ರಿಗಳನ್ನು ಸಕಾಲದಲ್ಲಿ ಖರೀದಿಸಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಶಾಸಕ ರಾಜೇಶ್ ನಾಯ್ಕ್ ಅವರ ಉಪಪ್ರಶ್ನೆಗೆ ಉತ್ತರಿಸಿದ್ದಾರೆ.

461.31 ಲಕ್ಷ ರೂ. ಕಾಮಗಾರಿ ಮಂಜೂರು:

ಬಂಟ್ವಾಳ ತಾಲೂಕಿನಲ್ಲಿ ದೀನ್ ದಯಾಳ್ ಉಪಾಧ್ಯಾಯ ಗ್ರಾಮಜ್ಯೋತಿ ಯೋಜನೆಯಡಿ ಗ್ರಾಮೀಣ ಮನೆಗಳ ವಿದ್ಯುದ್ದೀಕರಣಕ್ಕೆ 461.31 ಲಕ್ಷ ರೂಪಾಯಿಯ ಕಾಮಗಾರಿಯ ವಿಸ್ತೃತ ಯೋಜನಾ ವರದಿಗೆ ಮಂಜೂರಾತಿ ದೊರೆತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದು ಮುಖ್ಯಂಮತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಶಾಸಕರ ಮತ್ತೊಂದು ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದಾರೆ.

ಈ ಯೋಜನೆಯಡಿ ಗ್ರಾಮೀಣ ಮನೆಗಳ ವಿದ್ಯದ್ದೀಕರಣಕ್ಕೆ 233 ಫಲಾನುಭವಿಗಳನ್ನು ಗುರುತಿಸಲಾಗಿದ್ದು, 231 ಫಲಾನುಭವಿಗಳ ಮನೆಗೆ ಈಗಾಗಲೇ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಯೋಜನೆ ಮುಕ್ತಾಯ ಹಂತದಲ್ಲಿದ್ದು, ಡಿ. 31ರೊಳಗೆ ಪೂರ್ಣ ಗೊಳಿಸಲಾಗುವುದು ಎಂದು ಸಿಎಂ ಅವರು ಶಾಸಕ ರಾಜೇಶ್ ನಾಯ್ಕ್ ಅವರ ಪ್ರಶ್ನೆಗೆ ಉತ್ತರಿಸಿದ್ದಾರೆ.

ಪಿಲಾತಬೆಟ್ಡು ಪ.ಪೂ.ಕಾಲೇಜಿನ ಉಪನ್ಯಾಸಕರ ಹುದ್ದೆ: ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಪ.ಪೂ.ಕಾಲೇಜಿನ ಉಪನ್ಯಾಸಕರ ಹುದ್ದೆ ಸಹಿತ ಸ್ಥಳಾಂತರಿಸಿರುವುದು ಸರಕಾರದ ಗಮನದಲ್ಲಿದ್ದು, ಪ್ರಸ್ತುತ ಇಂಗ್ಲಿಷ್ ಮತ್ತು ಆರ್ಥಶಾಸ್ತ್ರದ ಉಪನ್ಯಾಸಕರು ಬಿ.ಇಡಿ ವ್ಯಾಸಂಗಕ್ಕೆ ತೆರಳಿದ್ದಾರೆ. ಈ ವ್ಯಾಸಂಗ ಮುಗಿದ ಬಳಿಕ ಕಾಲೇಜಿನ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಶಾಸಕ ರಾಜೇಶ್ ನಾಯ್ಕ್ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದಾರೆ.

ಕನ್ನಡ, ರಾಜ್ಯಶಾಸ್ತ್ರ ಮತ್ತು ವಾಣಿಜ್ಯಶಾಸ್ತ್ರ ಉಪನ್ಯಾಸಕರ ಹುದ್ದೆಗಳಿಗೆ ಕಾಲೇಜು ಅಭಿವೃದ್ಧಿ ಸಮಿತಿ ಉಪನ್ಯಾಸಕರನ್ನು ನೇಮಕ ಮಾಡಿದ್ದು, ವಿದ್ಯಾರ್ಥಿಗಳ ಪಾಠ ಪ್ರವಚನಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗಿದೆ ಎಂದು ಮುಖ್ಯಮಂತ್ರಿಯವರು ಶಾಸಕರ ಪ್ರಶ್ನೆಗೆ ಉತ್ತರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News