ಡಿ.21ರಿಂದ ಬಿ.ಸಿ.ರೋಡ್‌ನಲ್ಲಿ ಕರಾವಳಿ ಕಲೋತ್ಸವ

Update: 2018-12-19 18:03 GMT

ಮಂಗಳೂರು, ಡಿ.19: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬಂಟ್ವಾಳದ ಚಿಣ್ಣರ ಲೋಕ ಮೋಕೆದ ಕಲಾವಿದರೆ ಸೇವಾ ಟ್ರಸ್ಟ್ ಆಶ್ರಯದಲ್ಲಿ ಕರಾವಳಿ ಕಲೋತ್ಸವವು ಡಿ.21ರಿಂದ 30ರವರೆಗೆ ಬಿ.ಸಿ.ರೋಡ್ ಜೋಡುಮಾರ್ಗದ ಗೋಲ್ಡನ್ ಪಾರ್ಕ್ ಅಸೋಸಿಯೇಟ್ಸ್ ಮೈದಾನದಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಸುದರ್ಶನ್ ಜೈನ್ ಪಂಜಿಕಲ್ಲು ತಿಳಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು ಡಿ.21ರಿಂದ 23ರ ವರೆಗೆ ಚಿಣ್ಣರೋತ್ಸವ, 23 ಮತ್ತು 30ರಂದು ರಾಜ್ಯಮಟ್ಟದ ನೃತ್ಯ ಪ್ರದರ್ಶನ, 24ರಿಂದ 29ರ ವರೆಗೆ ರಾತ್ರಿ 8ರಿಂದ ತಾಲೂಕು ಮಟ್ಟದ ನಾಟಕೋತ್ಸವ ಸ್ಪರ್ಧೆ ನಡೆಯಲಿದೆ. 21ರಂದು ಸಂಜೆ 4 ಗಂಟೆಗೆ ಬಿ.ಸಿರೋಡ್ ಅಣ್ಣಪೂರ್ಣೇಶ್ವರಿ ಕಲಾಮಂಟಪದಿಂದ ಜಾನಪದ ದಿಬ್ಬಣ, 5:30ಕ್ಕೆ ಕರಾವಳಿ ಕಲೋತ್ಸವ ಉದ್ಘಾಟನೆಗೊಳ್ಳಲಿದೆ. ಸಚಿವೆ ಡಾ. ಜಯಮಾಲಾ, ಸಚಿವ ಯು.ಟಿ.ಖಾದರ್, ಶಾಸಕ ರಾಜೇಶ್ ನಾಯ್ಕಾ, ಮಾಜಿ ಸಚಿವ ರಮಾನಾಥ ರೈ ಭಾಗವಹಿಸಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಪ್ರತಿದಿನ ವಿಶೇಷ ಆಹ್ವಾನಿತರಾಗಿ ತುಳು-ಕನ್ನಡ ಸಿನಿಮಾ ಕಲಾವಿದರು, ರಿಯಾಲಿಟಿ ಶೋಗಳಲ್ಲಿ ಮಿಂಚಿದ ಜಿಲ್ಲೆಯ ಪ್ರತಿಭೆಗಳು ಪಾಲ್ಗೊಳ್ಳಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಜ್ಯ, ಹೊರ ರಾಜ್ಯಗಳ ಜಾನಪದ ಕಲಾ ತಂಡಗಳಿಂದ ಜಾನಪದ ನೃತ್ಯ, ಸಂಗೀತ ರಸಮಂಜರಿ, ನೃತ್ಯ ಸಂಗಮ, ಗಿರಿಜಾ ಕಲ್ಯಾಣ-ಜಾಂಬವತಿ ಕಲ್ಯಾಣ ಯಕ್ಷಗಾನ ಬಯಲಾಟ, ತುಳುನಾಡ ಐಸಿರಿ ನೃತ್ಯ ರೂಪಕ, ಭರತನಾಟ್ಯ ವೈಭವ ಪ್ರತಿದಿನ ಪ್ರದರ್ಶನಗೊಳ್ಳಲಿದೆ. ಡಿ.30ರಂದು ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಸುದರ್ಶನ್ ಜೈನ್ ಪಂಜಿಕಲ್ಲು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪ್ರಧಾನ ಸಂಚಾಲಕ ಮೋಹನದಾಸ ಕೊಟ್ಟಾರಿ ಮುನ್ನೂರು, ರಮೇಶ್ ರೈ, ಸೀತಾರಾಮ ಶೆಟ್ಟಿ, ಮಧುಸೂದನ್ ಶೆಣೈ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News