ಡಿ.21: ಎಂಆರ್‌ಪಿಎಲ್ ವಿಸ್ತರಣೆ ವಿರೋಧಿಸಿ ‘ತುಳುನಾಡು ಉಳಿಸಿ’ ಜನಾಗ್ರಹ ಸಭೆ

Update: 2018-12-19 18:06 GMT

ಮಂಗಳೂರು,ಡಿ.19: ಕರಾವಳಿ ಕರ್ನಾಟಕ ಜನಾಭಿವೃದ್ಧಿ ವೇದಿಕೆ ಮಂಗಳೂರು ವತಿಯಿಂದ ಎಂಆರ್‌ಪಿಎಲ್ ವಿಸ್ತರಣೆ ವಿರೋಧಿಸಿ ‘ತುಳುನಾಡು ಉಳಿಸಿ’ ಜನಾಗ್ರಹ ಸಭೆ ಡಿ.21ರಂದು ಅಪರಾಹ್ನ 3ಕ್ಕೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಆಯೋಜಿಸಲಾಗಿದೆ ಎಂದು ವೇದಿಕೆಯ ಸ್ಥಾಪಕ ಟಿ.ಆರ್. ಭಟ್ ತಿಳಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು ಎಂಆರ್‌ಪಿಎಲ್ ತನ್ನ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು 1,011 ಎಕರೆ ಕೃಷಿ ಭೂಮಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ಎಂಆರ್‌ಪಿಎಲ್‌ನಿಂದ ಈಗಾಗಲೇ ಸ್ಥಳೀಯ ಜನರು ಅನೇಕ ತೊಂದರೆ ಅನುಭವಿಸುತ್ತಿದ್ದಾರೆ. ನಾಲ್ಕನೇ ಹಂತದ ವಿಸ್ತರಣೆಯಿಂದ ಮಂಗಳೂರು ಪರಿಸರದ ಜನತೆ ಮತ್ತಷ್ಟು ತೊಂದರೆಗೆ ಒಳಗಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಎಂಆರ್‌ಪಿಎಲ್‌ನ ಉದ್ದೇಶಿತ ವಿಸ್ತರಣಾ ಯೋಜನೆ ಕೈಬಿಡಬೇಕು ಎಂದು ಆಗ್ರಹಿಸಲು ಪ್ರತಿಭಟನೆ ನಡೆಸಲಾಗುತ್ತಿದೆ. ಭೋಪಾಲ್ ಅನಿಲ ದುರಂತದ ಸಂತ್ರಸರ ಪರ ಹೋರಾಟಗಾರ ಡಾ. ಸತಿನಾಥ ಸಾರಂಗಿ ಭೂಪಾಲ್ ಪ್ರಧಾನ ಭಾಷಣ ಮಾಡುವರು. ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಸಾಮಾಜಿಕ ಕಾರ್ಯಕರ್ತರು, ರೈತರು, ಕಾರ್ಮಿಕರು ಭಾಗವಹಿಸಲಿದ್ದಾರೆ ಎಂದರು.

ಎಂಆರ್‌ಪಿಎಲ್ ಮತ್ತು ಸುತ್ತಲಿನ ವಿಷಕಾರಿ ಉದ್ದಿಮೆಗಳಿಂದ ಮಾನವನ ಆರೋಗ್ಯ, ಪರಿಸರ, ಮೀನುಗಾರಿಕೆ ಅಪಾಯದಲ್ಲಿದೆ. ಜನವಸತಿ ಪ್ರದೇಶದಲ್ಲಿ ಅಪಾಯಕಾರಿ ಕಾರ್ಖಾನೆಗಳು ಇರಬಾರದು ಎಂಬ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮವನ್ನು ಇಲ್ಲಿ ಉಲ್ಲಂಘಿಸಲಾಗಿದೆ. ಪಣಂಬೂರು-ಬೈಕಂಪಾಡಿಯಲ್ಲಿ ಈಗಾಗಲೇ ಭೀಕರ ದುರ್ಘಟನೆ ಸಾಧ್ಯತೆಯಿರುವ 11 ರಾಸಾಯನಿಕ ಸ್ಥಾವರಗಳಿವೆ. 2011-18ರ ಅವಧಿಯಲ್ಲಿ ಎಂಆರ್‌ಪಿಎಲ್ ಪ್ರದೇಶದಲ್ಲಿ 34 ಅಪಘಾತ ಸಂಭವಿಸಿದೆ. 12 ಮಾರಣಾಂತಿಕವಾಗಿದ್ದು, 18 ಸಾವು ಸಂಭವಿಸಿದೆ. ಸಮುದ್ರಕ್ಕೆ ಕಲುಷಿತ ನೀರು ಬಿಡುತ್ತಿರುವುದರಿಂದ ಸಮುದ್ರದ ನೀರೂ ವಿಷವಾಗುವ ಜತೆಗೆ ಮೀನು ಉತ್ಪತ್ತಿ ಕಡಿಮೆಯಾಗುತ್ತಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಎಂಆರ್‌ಪಿಎಲ್ ವಿಸ್ತರಣೆಗೆ ಅವಕಾಶ ನೀಡಬಾರದು ಎಂದು ಟಿ.ಆರ್.ಭಟ್ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಸಂಚಾಲಕ ಮುಹಮ್ಮದ್ ಕುಂಞಿ, ರಾಜೇಂದ್ರ ಕುಮಾರ್, ವಾಸುದೇವ ಬೋಳೂರು, ಹೇಮಲತಾ ಭಟ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News