ಆಧುನಿಕತೆ ದಾಳಿಯಿಂದ ಯುವಜನರಲ್ಲಿ ಭಾಷಾಭಿಮಾನದ ಕೊರತೆ: ಮುದ್ದು ಮೂಡುಬೆಳ್ಳೆ

Update: 2018-12-20 12:37 GMT

ಶಿರ್ವ, ಡಿ.20: ಸಾಹಿತ್ಯಕ್ಕೆ ಮೂಲ ಪ್ರೇರಣೆಯಾದ ಪ್ರಕೃತಿಯ ನಾಶ ಮತ್ತು ಆಧುನಿಕ ಸೌಲಭ್ಯಗಳ ದಾಳಿಯಿಂದಾಗಿ ಇಂದು ಯುವ ಜನರಲ್ಲಿ ಭಾಷಾಭಿ ಮಾನದ ಕೊರತೆ ಉಂಟಾಗಿದೆ. ಶಾಲಾಕಾಲೇಜಿನಲ್ಲಿ ಸಿಗದಿರುವ ಸಾಹಿತ್ಯ, ಸಾಂಸ್ಕೃತಿಕ ಪ್ರೀತಿಯನ್ನು ಸಮಾಜದ ಸಂಘಟನೆಗಳು ನೀಡಬೇಕಾಗಿವೆ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಆಕಾಶವಾಣಿ ಕಲಾವಿದ, ಕನ್ನಡ ತುಳು ಸಾಹಿತಿ ಮುದ್ದು ಮೂಡುಬೆಳ್ಳೆ ಹೇಳಿದ್ದಾರೆ.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾಪು ಘಟಕದ ಆಶ್ರಯದಲ್ಲಿ ಗುರುವಾರ ಶಿರ್ವ ಕುತ್ಯಾರು ಶ್ರೀಪರಶುರಾಮೇಶ್ವರ ಕ್ಷೇತ್ರದ ಶ್ರೀಸೂರ್ಯ ಚೈತನ್ಯಗ್ಲೋಬಲ್ ಅಕಾಡೆಮಿ ಸ್ಕೂಲ್ ಸಭಾಂಗಣದ ಬಿ.ಎಸ್.ಕುರ್ಕಾಲ್ ಮಂಟಪದ ಪಾದೂರು ಗುರುರಾಜ ಭಟ್ ವೇದಿಕೆಯಲ್ಲಿ ಆಯೋಜಿಸಲಾದ ಕಾಪು ತಾಲೂಕಿನ ಪ್ರಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಶಿಕ್ಷಣವು ಮನುಷ್ಯನಲ್ಲಿ ದೇಶಾಭಿಮಾನ, ಭಾಷಾಭಿಮಾನ, ಆತ್ಮಾಭಿಮಾನ ಬೆಳೆಸು ಮೂಲಕ ಮಾನವೀಯತೆ ಹಾಗೂ ಆತ್ಮೀಯತೆ ಹುಟ್ಟಿಸಬೇಕು. ಆ ಶಕ್ತಿ, ಶಿಕ್ಷಣದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಸಾಹಿತ್ಯಕ್ಕೆ ಇದೆ. ಈ ನಿಟ್ಟಿನಲ್ಲಿ ಯುವ ತಲೆಮಾರನ್ನು ಸಾಹಿತ್ಯದ ಕಡೆಗೆ ಸೆಳೆಯುವ ಹೊಸ ಹೊಸ ವಿಧಾನಗಳನ್ನು ಕಂಡುಕೊಳ್ಳಬೇಕಾಗಿದೆ ಎಂದರು.

ನಗರಮುಖಿಯಾಗಿ ಪಾಶ್ಚಾತ್ಯೀಕರಣಗೊಂಡಿರುವ ಇಂದಿನ ಬದುಕು ಕೃಷಿ ಯಿಂದ ವಿಮುಖವಾಗಿ ಪರಂಪರೆಯ ಕೊಂಡಿ ಕಳಚುತ್ತಿದೆ. ಆಧುನಿಕ ಶಿಕ್ಷಣ ಪದ್ದತಿ ಬದುಕನ್ನು ಯಂತ್ರೀಕೃತಗೊಳಿಸುತ್ತಿದೆ. ಆಧುನಿಕ ಶಿಕ್ಷಣ ನೀಡುವ ಜ್ಞಾನ ವನ್ನು ಕೃಷಿ ಮುಖಿಯಾಗಿಸುವ ನಿಟ್ಟಿನಲ್ಲಿ ಕೃಷಿಗೆ ಪೂರಕವಾಗುವಂತೆ ಕೌಶಲ್ಯ ತಂತ್ರಜ್ಞಾನವನ್ನು ಬೆಳೆಸುವಂತಾಗಬೇಕು ಎಂದು ಅವರು ತಿಳಿಸಿದರು.

ಕನ್ನಡಿಗರ ಬದುಕಿನ ಎಲ್ಲ ರಂಗಗಳಲ್ಲಿ ಕನ್ನಡತನ ಎದ್ದು ಕಾಣಬೇಕು. ಶಿಕ್ಷಣ, ಸಾಹಿತ್ಯ, ವ್ಯಾಪಾರ ವಾಣಿಜ್ಯ, ಆಡಳಿತ, ಕಲೆ, ಕ್ರೀಡೆ, ಕೃಷಿ ಹೀಗೆ ಎಲ್ಲ ರಂಗಗಳಲ್ಲಿ ಕನ್ನಡದ ಶಕ್ತಿ ಕಾಣಿಸಿಕೊಂಡರೆ ಕನ್ನಡವು ತನ್ನಿಂದ ತಾನಾಗಿ ಎದ್ದು ನಿಲ್ಲುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.

ಸಮ್ಮೇಳನವನ್ನು ಉದ್ಘಾಟಿಸಿದ ಪದ್ಮಭೂಷಣ ಪ್ರೊ.ಬಿ.ಎಂ.ಹೆಗ್ಡೆ ಮಾತನಾಡಿ, ಸಾಹಿತ್ಯವು ಮನುಷ್ಯನ ಹಿತವನ್ನು ಬಯಸುವ ಎಲ್ಲಾ ಸೃಜನಶೀಲ ಚಟು ವಟಿಕೆಗಳ ಮೂಲವಾಗಿದೆ. ಸಾಹಿತ್ಯ ಖುಷಿ ಕೊಡುವ ಜತೆಗೆ ಸತ್ಯವನ್ನೇ ಹೇಳಬೇಕು. ದೈರ್ಯ ಕೊಡುವಂತಿರಬೇಕು ಎಂದು ಅಭಿಪ್ರಾಯ ಪಟ್ಟರು.

ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಿ ದರು. ನಿವೃತ್ತ ಪ್ರಾಚಾರ್ಯ ಆಲ್ಬನ್ ರೊಡ್ರಿಗಸ್ ನುಡಿಚೇತನ ನೆರವೇರಿಸಿ ದರು. ಕಸಾಪ ಪೂರ್ವ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಪುಸ್ತಕ ಬಿಡುಗಡೆ ಮಾಡಿದರು. ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಚಿತ್ರಕಲಾವಿದೆ ರೇಖಾರಾವ್ ಹೆಬ್ಬಾರ್, ಪಾದೂರು ವೆಂಕಟೇಶ ತಂತ್ರಿ, ರೆ.ಫಾ.ಲಾರೆನ್ಸ್ ಬಿ. ಡಿಸೋಜ ಕಳತ್ತೂರು ಶುಭಾಸಂಶನೆಗೈದರು

ಕಸಾಪ ಕಾಪು ತಾಲೂಕು ಅಧ್ಯಕ್ಷ ಪುಂಡಲೀಕ ಮರಾಠೆ, ಕುತ್ಯಾರು ಶ್ರೀ ಪರಶುರಾಮ ಕ್ಷೇತ್ರದ ಧರ್ಮದರ್ಶಿ ಶಂಭುದಾಸ್ ಗುರೂಜಿ, ಜಿಪಂ ಸದಸ್ಯೆ ಶಿಲ್ಪಾಸುವರ್ಣ, ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ಶೇಷಶಯನ ಕಾರಿಂಜ, ಕಸಾಪ ಉಡುಪಿ ತಾಲೂಕು ಅದ್ಯಕ್ಷೆ ವಸಂತಿ ಶೆಟ್ಟಿ, ಪಾದೂರು ಅರುಣ್ ಶೆಟ್ಟಿ ಉಪಸ್ಥಿತರಿದ್ದರು.

ಸ್ವಾಗತ ಸಮಿತಿಯ ಅಧ್ಯಕ್ಷ ಕುತ್ಯಾರು ಕೇಂಜ ಶ್ರೀಧರ ತಂತ್ರಿ ಸ್ವಾಗತಿಸಿದರು. ಕಸಾಪ ತಾಲೂಕು ಸಮಿತಿ ಸದಸ್ಯ ಹರೀಶ್ ಕಟಪಾಡಿ ಪರಿಚಯಿಸಿದರು. ಕೋಶಾಧಿಕಾರಿ ಎಸ್.ಎಸ್.ಪ್ರಸಾದ್ ಸಹಕರಿಸಿದರು. ಕಾರ್ಯದರ್ಶಿ ವಿದ್ಯಾಧರ ಪುರಾಣಿಕ್ ವಂದಿಸಿದರು. ಸತೀಶ್ ಕುತ್ಯಾರು ಕಾರ್ಯಕ್ರಮ ನಿರ್ವಹಿಸಿದರು. ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಕುತ್ಯಾರು ಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ತುಳುವಿಗೆ ರಾಷ್ಟ್ರೀಯ ಮನ್ನಣೆ

ಕನ್ನಡಿಗರಿಗೆ ತುಳುವರ ಋಣ ಇದೆ. ಆದುದರಿಂದ ಎಲ್ಲ ಸಾಹಿತಿಗಳು, ರಾಜಕೀಯ ನೇತಾರರು ಪಕ್ಷಭೇದ ಮರೆತು ತುಳುಭಾಷೆಗೆ ರಾಷ್ಟ್ರೀಯ ಮನ್ನಣೆ ದೊರೆಯುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡಬೇಕು ಎಂದು ಮುದ್ದು ಮೂಡು ಬೆಳ್ಳೆ ಆಗ್ರಹಿಸಿದರು.

ಉದ್ಯೋಗ ಹಣ ಸ್ಥಾನಮಾನ ಗಳಿಸುವ ಏಕೈಕ ಉದ್ದೇಶದ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಸಾಹಿತ್ಯಾಭಿರುಚಿಯನ್ನು ಬೆಳೆಸುವ ಅವಕಾಶವಿಲ್ಲ. ಕನ್ನಡ ಸ್ನಾತ ಕೋತ್ತರ ಪದವೀಧರರಿಗೆ ಉದ್ಯೋಗ ಅವಕಾಶ ಮತ್ತು ಯೋಗ್ಯ ಸ್ಥಾನಮಾನ ಒದಗಿಸಲು ಸರಕಾರ ಯೋಜನೆ ರೂಪಿಸುವ ಅಗತ್ಯವಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News