ಕಾನ ಬಾಳ ಎಂಆರ್‌ಪಿಎಲ್ ರಸ್ತೆ ಅವ್ಯವಸ್ಥೆ ವಿರೋಧಿಸಿ ಪಂಜಿನ ಮೆರವಣಿಗೆ

Update: 2018-12-20 14:01 GMT

ಸುರತ್ಕಲ್, ಡಿ.20: ಸುರತ್ಕಲ್-ಕಾನ-ಬಾಳ -ಎಂಆರ್‌ಪಿಎಲ್ ರಸ್ತೆ ದುರವಸ್ಥೆ ಖಂಡಿಸಿ, ಚತುಷ್ಪಥ ರಸ್ತೆ ಕಾಮಗಾರಿ ಟೆಂಡರು ರದ್ದುಪಡಿಸಿ ದುರಸ್ತಿ ಕೆಲಸಕ್ಕೆ ಕೋಟ್ಯಂತರ ಹಣವನ್ನು ಪೋಲು ಮಾಡುತ್ತಿರುವ ಸರಕಾರದ ನೀತಿಯನ್ನು ವಿರೋಧಿಸಿ ನಾಗರಿಕ ಹೋರಾಟ ಸಮಿತಿ ನೇತೃತ್ವದಲ್ಲಿ ಬುಧವಾರ ಬಿಎಎಸ್‌ಎಎಫ್ ಬಳಿಯಿಂದ ಕಾನ ಜಂಕ್ಷನ್‌ವರೆಗೆ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭ ಮಾತನಾಡಿದ ಹೋರಾಟ ಸಮಿತಿ ಸಂಚಾಲಕ ಮತ್ತು ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಮಾತನಾಡಿ ಈ ರಸ್ತೆಯ ಅಭಿವೃಧ್ಧಿಗಾಗಿ ಒತ್ತಾಯಿಸಿ ಕಳೆದ ಎರಡು ವರ್ಷಗಳಲ್ಲಿ ದಾಖಲೆಯ 20 ಹೋರಾಟಗಳು ನಡೆದಿದೆ. ಒಂದು ರಸ್ತೆಗಾಗಿ ಇಷ್ಟು ಪ್ರತಿಭಟನೆ ಯಾವತ್ತೂ ನಡೆದ ಉದಾಹರಣೆ ಇಲ್ಲ ಎಂದರು.

ಜನರ ನಿರಂತರ ಹೋರಾಟದ ಫಲವಾಗಿ 58 ಕೋಟಿಗಳ ಚತುಷ್ಪಥ ರಸ್ತೆಗಾಗಿ ಲೋಕೋಪಯೋಗಿ ಇಲಾಖೆಯ ಮೂಲಕ ಟೆಂಡರ್ ಪ್ರಕ್ರಿಯೆ ಮುಗಿಸಿ ಶಿಲಾನ್ಯಾಸ ಕಾರ್ಯಕ್ರಮವನ್ನು ಫೆಬ್ರವರಿಯಲ್ಲಿ ನಡೆಸಿತ್ತು. ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಟೆಂಡರ್ ರದ್ದುಗೊಳಿಸಿರುವುದು ಜನರಿಗೆ ಮಾಡಿರುವ ದ್ರೋಹವಾಗಿದೆ. ಈಗ ಜನರ ಕಣ್ಣಿಗೆ ಮಣ್ಣೆರಚಲಿಕ್ಕಾಗಿ 1.20 ಕೋ.ರೂ.ನ್ನು ದುರಸ್ಥಿ ಕೆಲಸಕ್ಕೆ ನಗರಪಾಲಿಕೆ ಮುಂದಾಗಿರುವುದು ಜನರ ತೆರಿಗೆಯ ಹಣವನ್ನು ವ್ಯರ್ಥ ಮಾಡುವ ದುಷ್ಕೃತ್ಯ ಎಂದು ಬಿ.ಕೆ.ಇಮ್ತಿಯಾಝ್ ಆಪಾದಿಸಿದರು.

ಹೋರಾಟ ಸಮಿತಿಯ ಸಹ ಸಂಚಾಲಕ, ಮಾಜಿ ಸೈನಿಕ ನವೀನ್ ಪೂಜಾರಿ ಮತ್ತು ಶ್ರೀನಾಥ್ ಕುಲಾಲ್ ಮಾತನಾಡಿದರು. ಪ್ರತಿಭಟನೆಯಲ್ಲಿ ಜೋಕಟ್ಟೆ ಗ್ರಾಪಂ ಸದಸ್ಯ ಅಬೂಬಕ್ಕರ್ ಬಾವ , ಸ್ಥಳೀಯ ಮುಖಂಡರಾದ ಕರುಣಾಕರ ಶೆಟ್ಟಿ,ಹಮೀದ್ ಕಟ್ಲ,ಫ್ರಾನ್ಸಿಸ್ ಕಾನ,ರೆಮ್ಮಿ ಡಿಸೋಜ,ಜೋಯ್ ಡಿಸೋಜ ಕಾನ,ಅಜ್ಮಲ್ ಕಾನ,ಬಿ.ಕೆ. ಮಕ್ಸೂದ್, ಐ.ಮುಹಮ್ಮದ್, ಮುಸ್ತಫಾ ಅಂಗರಗುಂಡಿ,ಹಂಝ ಮೈಂದಗುರಿ,ರಹೀಮ್ ಕಾನ,ಮೆಹಬೂಬ್ ಖಾನ್, ಗಿರೀಶ್ ಜನಕಾಕಾಲನಿ, ಬಾಬು ಮೈಂದಗುರಿ, ಇಬ್ರಾಹೀಂ ಎಂ.ಎಚ್.,ಅಝರ್ ಕಾನ, ಫಾರೂಕ್ ಜನತಾಕಾಲನಿ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News