ಬ್ಯಾರೀಸ್ ಶಿಕ್ಷಣ ಸಂಸ್ಥೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗೂ ಒತ್ತು ನೀಡುತ್ತಿರುವುದು ಶ್ಲಾಘನೀಯ: ಟಿ.ಆರ್.ಸುರೇಶ್

Update: 2018-12-20 14:46 GMT

ಮಂಗಳೂರು, ಡಿ.20: ನಗರದ ಹ್ಯಾಟ್‌ಹಿಲ್‌ನಲ್ಲಿರುವ ‘ಬ್ಯಾರೀಸ್ ಪಬ್ಲಿಕ್ ಸ್ಕೂಲ್ ಮತ್ತು ಹಿಸ್ ಗ್ರೇಸ್ ಮೊಂಟೆಸ್ಸರಿ’ಯ ವಾರ್ಷಿಕೋತ್ಸವ ಕಾರ್ಯಕ್ರಮವು ಗುರುವಾರ ಪುರಭವನದಲ್ಲಿ ಜರುಗಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ದ.ಕ.ಜಿಲ್ಲೆಯು ಶಿಕ್ಷಣದ ‘ಹಬ್’ಆಗಿ ಬೆಳೆಯುತ್ತಿದೆ. ಅದರಲ್ಲೂ ಬ್ಯಾರೀಸ್ ಶಿಕ್ಷಣ ಸಂಸ್ಥೆಯು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗೂ ಹೆಚ್ಚು ಒತ್ತು ನೀಡುತ್ತಿರುವುದು ಶ್ಲಾಘನೀಯವಾಗಿದೆ. ಮಕ್ಕಳಿಗೆ ಶಾಲೆಯು ಎರಡನೆ ಮನೆಯಾಗಿದೆ. ಕಲಿಕೆಯ ಹಂತದಲ್ಲಿ ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆ, ನಾಯಕತ್ವ ಗುಣವನ್ನು ಗುರುತಿಸಿ ಬೆಳೆಸುವಲ್ಲಿ ಶಿಕ್ಷಕರ, ಪೋಷಕರ ಜವಾಬ್ದಾರಿ ಮಹತ್ತರವಾಗಿದೆ ಎಂದು ಅಭಿಪ್ರಾಯಪಟ್ಟರು.

ಅಪರ ಜಿಲ್ಲಾಧಿಕಾರಿ ಕುಮಾರ್ ಮಾತನಾಡಿ ಶಾಲಾ-ಕಾಲೇಜುಗಳ ವಾರ್ಷಿಕೋತ್ಸವವು ಪ್ರತಿಯೊಬ್ಬ ವಿದ್ಯಾರ್ಥಿಯ ನೆನಪಿನಲ್ಲಿ ಉಳಿಯುವ ದಿನವಾಗಿದೆ. ಈ ದಿನ ಎಲ್ಲ ವಿದ್ಯಾರ್ಥಿಗಳು ಸ್ವಚ್ಛಂದವನ್ನು ಬಯಸುತ್ತಾರೆ. ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ಅವಕಾಶವನ್ನೂ ವಾರ್ಷಿಕೋತ್ಸವ ನೀಡುತ್ತದೆ. ವಿದ್ಯಾರ್ಥಿ ಜೀವನದಲ್ಲೇ ಪ್ರತಿಯೊಬ್ಬರೂ ಬದುಕಿನ ಗುರಿಯ ಬಗ್ಗೆ ಸ್ಪಷ್ಟತೆ ಹೊಂದಿರಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ಯಾರೀಸ್ ಅಕಾಡಮಿ ಆಫ್ ಲರ್ನಿಂಗ್‌ನ ಅಧ್ಯಕ್ಷ ಹಾಗೂ ಆಡಳಿತ ಟ್ರಸ್ಟಿ ಸೈಯದ್ ಮುಹಮ್ಮದ್ ಬ್ಯಾರಿ ಇಂದು ಶಿಕ್ಷಣ ವ್ಯವಹಾರವಾಗಿದೆ. ಶ್ರೀಮಂತ ಮಕ್ಕಳನ್ನು ಗುರಿಯಾಗಿಸಿಕೊಂಡೇ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲಾಗುತ್ತದೆ. ಆದರೆ ಬ್ಯಾರೀಸ್ ಶಿಕ್ಷಣ ಸಂಸ್ಥೆಯು ಅದಕ್ಕೆ ವಿರುದ್ಧವಾಗಿದೆ. ನಾವೆಂದೂ ಕೂಡ ಶಿಕ್ಷಣವನ್ನು ವ್ಯವಹಾರವಾಗಿ ನೋಡಿಲ್ಲ. ಯಾವುದೇ ಡೊನೇಶನ್ ಪಡೆಯದೆ ಆರ್ಥಿಕವಾಗಿ ಹಿಂದುಳಿದ ಮತ್ತು ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಿಗೆ ಹೆಚ್ಚೆಚ್ಚು ಅವಕಾಶ ಕಲ್ಪಿಸಿಕೊಡುತ್ತಿದ್ದೇವೆ ಎಂದರು.

ಇತ್ತೀಚಿನ ದಿನಗಳಲ್ಲಿ ಶಿಕ್ಷಣಕ್ಕೆ ಧಾರ್ಮಿಕ ಬಣ್ಣ ಬಲಿಯಲಾಗುತ್ತದೆ. ಶಿಕ್ಷಣವನ್ನು ಹೀಗೆ ವರ್ಗೀಕರಿಸುವುದೂ ಸರಿಯಲ್ಲ. ಶಿಕ್ಷಣ ಎಲ್ಲರಿಗಾಗಿ ಮತ್ತು ಎಲ್ಲರನ್ನೊಳಗೊಂಡಿರಬೇಕು. ಸತ್ಯ, ಅಚಲ ನಂಬಿಕೆ ಮತ್ತು ನೆಮ್ಮದಿಯ ಗುರಿಯೊಂದಿಗೆ ಪ್ರತಿಯೊಬ್ಬರಿಗೂ ಶಿಕ್ಷಣ ಸಿಗುವಂತಹ ಉದ್ದೇಶವನ್ನು ಬ್ಯಾರೀಸ್ ಶಿಕ್ಷಣ ಸಂಸ್ಥೆ ಹೊಂದಿದೆ. ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಕರು ಮಾತ್ರವಲ್ಲದೆ ಪೋಷಕರು ಕೂಡ ಶ್ರದ್ಧೆ ವಹಿಸಿದರೆ ಮಾತ್ರ ಸದುದ್ದೇಶ ಸಫಲವಾಗಲಿದೆ ಎಂದು ಸೈಯದ್ ಮುಹಮ್ಮದ್ ಬ್ಯಾರಿ ಅಭಿಪ್ರಾಯಪಟ್ಟರು.

ಬ್ಯಾರೀಸ್ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲೆ ಗೀತಾ ರೇಗೋ ವಾರ್ಷಿಕ ವರದಿ ವಾಚಿಸಿದರು. ವಿದ್ಯಾರ್ಥಿ ಅಯಾನ್ ವಂದಿಸಿದರು. ಈ ಸಂದರ್ಭ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News