ಟೋಲ್ ವಿರೋಧಿಸಿ ಬೆಳ್ಮಣ್‌ನಲ್ಲಿ ಪ್ರತಿಭಟನೆ: ಪಡುಬಿದ್ರೆ-ಕಾರ್ಕಳ ರಾಜ್ಯ ಹೆದ್ದಾರಿ ಸಂಪೂರ್ಣ ಬಂದ್

Update: 2018-12-20 15:09 GMT

ಬೆಳ್ಮಣ್, ಡಿ.20: ಪಡುಬಿದ್ರೆ- ಕಾರ್ಕಳ ರಾಜ್ಯ ಹೆದ್ದಾರಿಯ ಬೆಳ್ಮಣ್‌ನಲ್ಲಿ ಟೋಲ್ ಗೇಟ್ ಅಳವಡಿಸುವ ಸರಕಾರದ ಕ್ರಮವನ್ನು ವಿರೋಧಿಸಿ ಬೆಳ್ಮಣ್ ಟೋಲ್‌ಗೇಟ್- ಸುಂಕ ವಸೂಲಾತಿ ಕೇಂದ್ರ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ಹಾಗೂ ರಾಜ್ಯ ಹೆದಾ್ದರಿ ಸಂಪೂರ್ಣ ಬಂದ್ ಆಚರಿಸಲಾಯಿತು.

ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸಿದ ಸ್ಥಳೀಯರು ಪ್ರತಿಭಟನಾ ಮೆರ ವಣಿಗೆಯ ಮೂಲಕ ಬೆಳ್ಮಣ್ ಚರ್ಚ್ ಬಳಿಯ ಪೆಟ್ರೋಲ್ ಪಂಪ್‌ವರೆಗೆ ಸಾಗಿ, ನಂತರ ಅಲ್ಲಿಂದ ಹಿಂದೆ ಬಂದು ನಂದಳಿಕೆ ಬೋರ್ಡ್ ಶಾಲೆಯ ವರೆಗೆ ಸಾಗಿ ಮತ್ತೆ ಬಸ್ ನಿಲ್ದಾಣಕ್ಕೆ ವಾಪಾಸಾದರು.

ಬೆಳ್ಮಣ್ ಬಸ್ಸು ನಿಲ್ದಾಣದಲ್ಲಿ ನಡೆದ ಪ್ರತಿಭಟನಾ ಸಭೆಯ ಬಳಿಕ ನೂರಾರು ಪ್ರತಿಭಟನಾಕಾರರು ಸರಕಾರ ಕ್ರಮವನ್ನು ವಿರೋಧಿಸಿ ಹೆದ್ದಾರಿಯ ನಡು ರಸ್ತೆಯಲ್ಲಿಯೇ ಮಲಗಿ ಘೋಷಣೆ ಕೂಗಿದರು. ಈ ವೇಳೆ ಕಾರ್ಕಳ ಪೊಲೀಸರು ಸಮಿತಿಯ ಮುಖಂಡರು ಸೇರಿದಂತೆ ನೂರಾರು ಮಂದಿ ಪ್ರತಿಭಟನಕಾ ರರನ್ನು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದರು.

ಬಂದ್ ಕರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, ಕಾರ್ಕಳ-ಪಡುಬಿದ್ರೆ ಹೆದ್ದಾರಿಯಲ್ಲಿ ಸಂಜೆಯವರೆಗೆ ಯಾವುದೇ ವಾಹನ ಸಂಚರಿಸಲಿಲ್ಲ. ಮಂಗಳೂರಿನಿಂದ ಬಂದ ವಾಹನಗಳು ಪಡುಬಿದ್ರೆಯಿಂದಲೇ ವಾಪಾಸ್ಸಾದವು. ಕಿನ್ನಿಗೋಳಿಯಿಂದ ಬಂದ ವಾಹನಗಳು ಮುಂಡ್ಕೂರಿನಿಂದಲೇ ಸಂಚಾರ ಮೊಟಕುಗೊಳಿಸಿದ್ದವು. ಬೆಳ್ಮಣ್ ಪೇಟೆಯ ಎಲ್ಲಾ ಅಂಗಡಿಗಳು ಮುಚ್ಚಿದ್ದು, ರಿಕ್ಷಾ, ಕಾರು ಸಹಿತ ಎಲ್ಲಾ ವಾಹನಗಳ ಮಾಲಕರು ಹಾಗೂ ಚಾಲಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ನಿಟ್ಟೆ ವಿದ್ಯಾ ಸಂಸ್ಥೆ ಸಹಿತ ಬೆಳ್ಮಣ್ ಪರಿಸರದ ಎಲ್ಲಾ ಶಿಣ ಸಂಸ್ಥೆಗಳು ಬಂದ್ ಆಚರಿಸಿದವು.

ಟೋಲ್ ಎಂಬ ದೌರ್ಭಾಗ್ಯ: ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಮಾರು ಸಾಂದೀಪನೀ ಸಾಧನಾಶ್ರಮದ ಶ್ರೀ ಈಶ ವಿಟ್ಠಲದಾಸ ಸ್ವಾಮೀಜಿ, ನಮ್ಮನ್ನು ಆಳುತ್ತಿರುವ ಸರಕಾರಗಳು ಟೋಲ್ ಭಾಗ್ಯ ಎಂಬ ದೌರ್ಭಾಗ್ಯ ನೀಡಿ ಜನರನ್ನು ವಂಚಿಸುತ್ತಿದೆ. ಟೋಲ್ ವಿರುದ್ಧದ ಸಹಸ್ರಾರು ಮಂದಿ ಹೋರಾಟ ನಡೆಸುತ್ತಿದ್ದರೂ ಜಿಲ್ಲಾಡಳಿತ ಅದಕ್ಕೆ ಸೂಕ್ತವಾಗಿ ಸ್ಪಂದಿಸದಿರುವುದು ವಿಪ ರ್ಯಾಸ ಎಂದು ಟೀಕಿಸಿದರು.

ಸಮಿತಿಯ ಸಂಚಾಲಕ ನಂದಳಿಕೆ ಸುಹಾಸ್ ಹೆಗ್ಡೆ ಮಾತನಾಡಿ, ಕಾರ್ಕಳ ಪಡುಬಿದ್ರೆ ರಾಜ್ಯ ಹೆದ್ದಾರಿ 1ರಲ್ಲಿ ಸುಂಕ ವಸೂಲಿ ಮಾಡಲು ಸರಕಾರ ಗುಟ್ಟಾಗಿ ಸಿದ್ಧತೆ ನಡೆಸುತ್ತಿದೆ. ಜನಸಾಮಾನ್ಯ ನಾಗರಿಕರನ್ನು ಕಡೆಗಣಿಸುವ ಸರಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ರಸ್ತೆ ನಿರ್ಮಾಣವಾಗಿ 4 ವರ್ಷಗಳೇ ಕಳೆದಿವೆ. ಈ ಅವಧಿಯಲ್ಲಿ ನಾವು ನೀಡಿದ ತೆರಿಗೆಗಳನ್ನು ಸರಕಾರ ಹಿಂದೆ ನೀಡಿದರೆ, ಮುಂದೆ ನಾವು ಸುಂಕ ಪಾವತಿಸುತ್ತೇವೆ. ಸುತ್ತಮುತ್ತಲಿನ 27 ಗ್ರಾಮಗಳ ಲಕ್ಷಾಂತರ ಮಂದಿ ಒಂದಾಗಿ ದ್ದೇವೆ. ರಕ್ತ ಕೊಟ್ಟಾದರೂ ಟೋಲ್ ಪ್ರಾರಂಭಿಸಲು ಬಿಡುವುದಿಲ್ಲ. ಸರಕಾರ ಹಾಗೂ ಜಿಲ್ಲಾಡಳಿತ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ ಎಂದು ಅವರು ದೂರಿದರು.

ಪತ್ರಕರ್ತ ಶ್ರೀಕಾಂತ ಶೆಟ್ಟಿ, ಸಮಿತಿಯ ಸರ್ವಜ್ಞ ತಂತ್ರಿ, ಶಶಿಧರ ಶೆಟ್ಟಿ, ಟ್ಯಾಕ್ಸಿಮೆನ್ ಅಸೋಸಿಯೇಶನ್‌ನ ರಮೇಶ್, ಜಿಪಂ ಸದಸ್ಯೆ ರೇಷ್ಮಾ ಉದಯ ಶೆಟ್ಟಿ ಮಾತನಾಡಿದರು. ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಅವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಅವರು, ಈ ಟೋಲ್‌ನ ವ್ಯವಸ್ಥೆಯ ಹಿಡಿತ ಜಿಲ್ಲಾಡಳಿತದ ಕೈಯಲ್ಲಿಲ್ಲ. ಆದುದರಿಂದ ಸಾರ್ವಜನಿಕರ ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಸರಕಾರಕ್ಕೆ ಕಳುಹಿಸಲಾಗುವುದು ಎಂದು ಹೇಳಿದರು.

ಗಮನ ಸೆಳೆದ ಟೋಲ್ ಟ್ರೀ

ಟೋಲ್ ಗೇಟ್ ನಮ್ಮನ್ನು ಯಾವ ರೀತಿ ಲೂಟಿ ಮಡುತ್ತಿದೆ ಎಂಬ ಸಂದೇಶ ಸಾರುವ ಎಂಬ ಹೆಮ್ಮರ ಪ್ರತಿಭಟನಾ ಸ್ಥಳದಲ್ಲಿ ಎಲ್ಲ ಗಮನ ಸೆಳೆಯಿತು. ಈ ಟೋಲ್ ಟ್ರೀಯನ್ನು ಸಮಿತಿಯ ಸಂಚಾಲಕ ಸುಹಾಸ್ ಹೆಗ್ಡೆ ನಿರ್ಮಿಸಿದ್ದು, ಆ ಮರದಲ್ಲಿ ಎಲ್ಲಾ ರೀತಿಯಾದ ವಾಹನಗಳು ಆತ್ಮಹತ್ಯೆ ಮಾಡಿ ಕೊಂಡ ಚಿತ್ರಣವನ್ನು ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News