ಧರ್ಮಗಳು ಹುಟ್ಟಿರುವುದು ಜನರ ಕಲ್ಯಾಣಕ್ಕಾಗಿ: ಪ್ರೊ.ಶ್ರೀಪತಿ ತಂತ್ರಿ

Update: 2018-12-20 15:10 GMT

ಉಡುಪಿ, ಡಿ. 20: ಪ್ರತಿಯೊಂದು ಧರ್ಮವನ್ನು ಆಳವಾಗಿ, ಮುಕ್ತ ಮನಸ್ಸಿ ನಿಂದ ಅಧ್ಯಯನ ಮಾಡಿದಾಗ ಎಲ್ಲ ಧರ್ಮಗಳು ಹುಟ್ಟಿರುವುದು ಜನರ ಕಲ್ಯಾಣಕ್ಕಾಗಿ ಎಂಬುದು ಅರ್ಥ ಆಗುತ್ತದೆ. ಆದುದರಿಂದ ನಾವೆಲ್ಲ ಒಂದಾಗಿ ಪ್ರೀತಿಯಿಂದ ಪ್ರಕೃತಿ ಜೊತೆ ಬದುಕಬೇಕಾಗಿದೆ ಎಂದು ಉಡುಪಿಯ ನಿವೃತ್ತ ಪ್ರಾಂಶುಪಾಲ ಪ್ರೊ.ಪಿ.ಶ್ರೀಪತಿ ತಂತ್ರಿ ಹೇಳಿದ್ದಾರೆ.

ಸೌಹಾರ್ದ ಸಮಿತಿ, ಕೆಥೋಲಿಕ್ ಸಭಾ ಉಡುಪಿ ಘಟಕ, ಉಡುಪಿ ಶೋಕಮಾತಾ ಇಗರ್ಜಿ, ಲಯನ್ಸ್ ಜಿಲ್ಲಾ 317ಸಿ ಹಾಗೂ ಲಯನ್ಸ್ ಕ್ಲಬ್ ಉಡುಪಿ ಸಂಗಮ ಇವುಗಳ ಸಂಯುಕ್ತ ಆಶ್ರಯದಲ್ಲಿ ಶೋಕಮಾತಾ ಇಗರ್ಜಿ ಯಲ್ಲಿ ಗುರುವಾರ ಆಯೋಜಿಸಲಾದ ಸರ್ವಧರ್ಮ ಕ್ರಿಸ್‌ಮಸ್ ಆಚರಣೆ ಯಲ್ಲಿ ಅವರು ಮಾತನಾಡುತಿದ್ದರು.

ಇಂದು ಧರ್ಮವನ್ನು ಕೆಳಮಟ್ಟದಲ್ಲಿ ಅರ್ಥೈಸುತ್ತಿರುವುದರಿಂದ ಧರ್ಮ- ಧರ್ಮಗಳ ಮಧ್ಯೆ ವಿಭಜನೆ ಉಂಟಾಗಿ ಸಂಘರ್ಷಗಳು ನಡೆಯುತ್ತಿವೆ. ಧರ್ಮ ಬೇರೆ ಬೇರೆಯಾದರೂ ದೇವರು ಮಾತ್ರ ಒಂದೆ. ಆದರೆ ಮಕ್ಕಳು ಮಾತ್ರ ಅದನ್ನು ಅರ್ಥ ಮಾಡಿಕೊಳ್ಳದೆ ಪರಸ್ಪರ ಬಡಿದಾಡಿಕೊಳ್ಳುತ್ತಿದ್ದಾರೆ. ನಾವಿಂದು ಬಹು ಮತೀಯ ವಿಶ್ವ ಸಮಾಜದಲ್ಲಿ ಹೊಂದಿಕೊಂಡು ಬದುಕಬೇಕು. ಆಹಾರ, ಬಣ್ಣ, ಭಾಷೆ, ಉಡುಪಿನಲ್ಲಿ ಭಿನ್ನತೆ ಹುಡುಕಿದರೆ ಸಂಘರ್ಷ ಉಂಟಾಗುತ್ತದೆ ಎಂದು ಅವರು ತಿಳಿಸಿದರು.

ಜಗತ್ತಿನಲ್ಲಿ ಧರ್ಮದ ಆಧಾರದಲ್ಲಿ ಮಾನವ ಹತ್ಯೆಯಾಗಿರುವುದು ಎಲ್ಲ ಸಾಂಕ್ರಾಮಿಕ ರೋಗ, ಪ್ರಾಕೃತಿಕ ವಿಕೋಪಗಳಿಗಿಂತ 10ಪಾಲು ಹೆಚ್ಚು. ಇದನ್ನು ಮುಂದುವರೆಸದೆ ಮಾನವೀಯತೆಯನ್ನು ನಾವು ಬೆಳೆಸಿಕೊಳ್ಳಬೇಕು. ಉಡುಪಿ ಯಲ್ಲಿ ಎಲ್ಲ ಧರ್ಮದವರು ಯಾವುದೇ ಸಂಘರ್ಷ ಇಲ್ಲದೆ ಸಹಬಾಳ್ವೆಯಿಂದ ಬದುಕುತ್ತಿದ್ದಾರೆ. ಈ ಸೌಹಾದರ್ತೆಯ ಪರಿಸರವನ್ನು ಉಳಿಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯ ಪಟ್ಟರು.

ಅಧ್ಯಕ್ಷತೆಯನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅ.ವಂ.ಡಾ. ಜೆರಾಲ್ಡ್ ಐಸಾಕ್ ಲೋಬೊ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಲ್ಪೆ ಯುಬಿಎಂ ಎಬ್ನಿಜರ್ ಚರ್ಚ್‌ನ ಪಾಸ್ಟರ್ ರೆ.ಡೇವಿಡ್ ನಿರ್ಮಾಣಿಕ್, ಕೇಂದ್ರ ಸರಕಾರದ ಆಯೋಗ್ಯ ವಿಭಾಗದ ಇನ್ಪೆಕ್ಷನ್ ಫ್ಯಾಕಲ್ಟಿ ಡಾ.ಮುಹಮ್ಮದ್ ರಫೀಕ್ ಹೂಡೆ ಮಾತನಾಡಿದರು.

ಶೋಕಮಾತಾ ಇಗರ್ಜಿಯ ಪ್ರಧಾನ ಧರ್ಮಗುರು ಅ.ವಂ.ವಲೇರಿಯನ್ ಮೆಂಡೋನ್ಸಾ ಸ್ವಾಗತಿಸಿದರು. ಸೌಹಾರ್ದ ಸಮಿತಿಯ ಸಂಚಾಲಕ ಮೈಕಲ್ ಡಿಸೋಜ ವಂದಿಸಿದರು. ಕಾರ್ಯಕ್ರಮ ಸಂಯೋಜಕ ಅಲ್ಫೋನ್ಸ್ ಡಿಕೋಸ್ಟಾ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಬೃಹತ್ ಗಾತ್ರದ ಕ್ರಿಸ್‌ಮಸ್ ಟ್ರೀ, ವಿವಿಧ ನಕ್ಷತ್ರಗಳ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ, ಕ್ರಿಸ್‌ಮಸ್ ಗೀತೆಗಳು, ಕೇಕ್ ವಿತರಣೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News