×
Ad

ಆದ್ಯತಾ ವಲಯದತ್ತ ಬ್ಯಾಂಕ್‌ಗಳ ನಿರಾಸಕ್ತಿ: ಜಿಪಂ ಸಿಇಒ ಅಸಮಾಧಾನ

Update: 2018-12-20 21:06 IST

ಮಂಗಳೂರು, ಡಿ.20: ಆದ್ಯತಾ ವಲಯಗಳಾದ ಕೃಷಿ, ಮಧ್ಯಮ ಸಣ್ಣ ಮತ್ತು ಅತಿಸಣ್ಣ ರಂಗದ ಕೈಗಾರಿಗಳಿಗೆ ಸಾಲ ನೀಡಲು ಜಿಲ್ಲೆಯ ಬಹುತೇಕ ಬ್ಯಾಂಕ್‌ಗಳು ಆಸಕ್ತು ತೋರಿಸುತ್ತಿಲ್ಲ ಎಂದು ದ.ಕ.ಜಿಪಂ ಸಿಇಒ ಡಾ.ಸೆಲ್ವಮಣಿ ಆರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದ.ಕ.ಜಿಪಂ ಸಭಾಂಗಣದಲ್ಲಿ ಗುರುವಾರ ನಡೆದ ಬ್ಯಾಂಕಿಂಗ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅನೇಕ ಸಭೆಗಳಲ್ಲಿ ಸಾರ್ವಜನಿಕರು ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ಬ್ಯಾಂಕ್‌ನಿಂದ ಸಾಲ ಲಭಿಸುತ್ತಿಲ್ಲ ಎಂದು ದೂರುತ್ತಿದ್ದಾರೆ. ಬೆಂಗಳೂರಿನ ಬಳಿಕ ದ.ಕ.ಜಿಲ್ಲೆಯು ಅತಿ ಹೆಚ್ಚು ನಗರೀಕರಣಗೊಂಡಿರುವ ಜಿಲ್ಲೆಯಾಗಿದೆ. ಉದ್ಯಮಕ್ಕೂ ಸಾಕಷ್ಟು ಅವಕಾಶ ಇದೆ. ಆದರೆ ಬ್ಯಾಂಕ್‌ಗಳು ಈ ಬಗ್ಗೆ ಹೆಚ್ಚು ಮುತುವರ್ಜಿ ವಹಿಸುತ್ತಿಲ್ಲ ಎಂದ ಡಾ. ಸೆಲ್ವಮಣಿ ಸೆಪ್ಟಂಬರ್ ಅಂತ್ಯಕ್ಕೆ ಕೃಷಿ ವಲಯಕ್ಕೆ ಜಿಲ್ಲೆಯ ಬ್ಯಾಂಕ್‌ಗಳು 2,074 ಕೋ.ರೂ. ಸಾಲ ನೀಡಿದ್ದು, ಶೇ. 42ರಷ್ಟು ಪ್ರಗತಿಯಷ್ಟೇ ಆಗಿದೆ. ಎಂಎಸ್‌ಎಂಇ ಕ್ಷೇತ್ರಕ್ಕೆ 1,325 ಕೋ.ರೂ.ಮುಂಗಡ ನೀಡಲಾಗಿದ್ದು ಶೇ.41ರಷ್ಟು ಪ್ರಗತಿ ಸಾಧಿಸಿದೆ. ಆದರೆ ಆದ್ಯತೇತರ ಕ್ಷೇತ್ರಗಳಲ್ಲಿ 5,078.81 ಕೋ.ರೂ. ಸಾಲ ನೀಡಿದ್ದು, ಶೇ.125ರಷ್ಟು ಸಾಧಿಸಲಾಗಿದೆ. ಒಟ್ಟಾರೆ ಬ್ಯಾಂಕ್‌ಗಳು ಇತರ ಕ್ಷೇತ್ರಗಳತ್ತ ಹೆಚ್ಚು ಗಮನ ಹರಿಸಿಲ್ಲ ಎಂದರು.

ಜಿಲ್ಲೆಯಲ್ಲಿ ಜೂನ್ ಅಂತ್ಯಕ್ಕೆ 645 ಬ್ಯಾಂಕ್ ಶಾಖೆಗಳಿದ್ದು, ಸೆಪ್ಟಂಬರ್ ಅಂತ್ಯಕ್ಕೆ 43,288.75 ಕೋ.ರೂ. ಠೇವಣಿ ಇರಿಸಿಕೊಳ್ಳುವ ಮೂಲಕ ಶೇ.8.53ರಷ್ಟು ಪ್ರಗತಿಯಾಗಿದೆ. ಮುಂಗಡ ನೀಡಿಕೆ ಶೇ. 19.5 ಪ್ರಗತಿಯೊಂದಿಗೆ 26,550 ಕೋ.ರೂ. ತಲಪಿದೆ. ಒಟ್ಟು ವಹಿವಾಟು ಶೇ 12.48ರ ಪ್ರಗತಿ ಸಹಿತ 70,062.78 ಕೋ.ರೂ. ಆಗಿದೆ ಎಂದು ಲೀಡ್ ಬ್ಯಾಂಕ್ ಅಧಿಕಾರಿಗಳು ಮಾಹಿತಿ ನೀಡಿದರು.

ಸಿಂಡಿಕೇಟ್ ಬ್ಯಾಂಕ್ ವಲಯ ವ್ಯವಸ್ಥಾಪಕ ಸುಧಾಕರ ಕೊಥಾರಿ, ಆರ್‌ಬಿಐ ಎಜಿಎಂ ಪಿ.ಕೆ.ಪಟ್ನಾಯಕ್, ಲೀಡ್ ಬ್ಯಾಂಕ್ ಮ್ಯಾನೇಜರ್ ಫ್ರಾನ್ಸಿಸ್ ಬೊರ್ಜಿಯಾ ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಮುಖ ಬ್ಯಾಂಕ್ ಸಹಿತ ಜಿಲ್ಲೆಯಲ್ಲಿನ ಬ್ಯಾಂಕ್‌ಗಳ ಸಿ.ಡಿ. ಅನುಪಾತ (ಸಾಲ-ಠೇವಣಿ ಅನುಪಾತ) ಭಾರತೀಯ ರಿಸರ್ವ್ ಬ್ಯಾಂಕ್ ಸೂಚಿತ ಶೇ.60ಕ್ಕಿಂತ ಕಡಿಮೆ ಇರುವುದು ಕೂಡ ಸಭೆಯಲ್ಲಿ ಬೆಳಕಿಗೆ ಬಂತು. ಹಿಂದಿನ ಸಾಲಿಗೆ ಹೋಲಿಸಿದರೆ ಅನುಪಾತದಲ್ಲಿ ತುಸು ಏರಿಕೆಯಾಗಿದೆ, ಸರಾಸರಿ ಅನುಪಾತ ಶೇ. 56.17ರಿಂದ ಶೇ. 61.85 ತಲಪಿದೆ. ಹಲವು ಪ್ರಮುಖ ಬ್ಯಾಂಕ್‌ಗಳ ಅನುಪಾತ ಶೇ.40ಕ್ಕೂ ಕಡಿಮೆ ಇರುವ ಬಗ್ಗೆ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು.

ಜಿಲ್ಲೆಯಲ್ಲಿ ಗ್ರಾಮೀಣ ಮೂಲಸೌಕರ್ಯಗಳ ಆಧಾರದಲ್ಲಿ ನಬಾರ್ಡ್ ಸಿದ್ಧಪಡಿಸಿದ ಜಿಲ್ಲೆಯ 2019-20ರ ಸಂಭಾವ್ಯ ಸಂಯೋಜಿತ ಸಾಲ ಯೋಜನೆಯನ್ನು ಸಿಇಒ ಡಾ.ಸೆಲ್ವಮಣಿ ಬಿಡುಗಡೆಗೊಳಿಸಿದರು. ಆದ್ಯತಾ ವಲಯದ 8 ಪ್ರಮುಖ ಕ್ಷೇತ್ರಗಳಡಿ 12,659.04 ಕೋ.ರೂ.ನ ಸಾಲ ಯೋಜನೆ ಇದಾಗಿದೆ ಎಂದು ನಬಾರ್ಡ್ ಎಜಿಎಂ ಎಸ್.ರಮೇಶ್ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News