ಶಿಕ್ಷಣ ಜೀವನದ ಶಕ್ತಿ : ಇಬ್ರಾಹಿಂ ಬ್ಯಾರಿ
ಸಿದ್ಧಕಟ್ಟೆ, ಡಿ. 20: ಪ್ರತಿಯೊಬ್ಬ ಮನುಷ್ಯನಿಗೂ ಭೌತಿಕ ಮತ್ತು ಲೌಕಿಕ ಜ್ಞಾನ ತುಂಬಾನೇ ಅವಶ್ಯ. ಇದನ್ನು ಶಿಕ್ಷಣ ನಮಗೆ ನೀಡುತ್ತದೆ. ಆದ ಕಾರಣವೇ ಶಿಕ್ಷಣವನ್ನು ಜೀವನದ ಶಕ್ತಿ ಎಂದು ಪರಿಗಣಿಸಲಾಗುತ್ತದೆ ಎಂದು ನೆಕ್ಕಿಲಾಡಿ ಜುಮಾ ಮಸೀದಿಯ ಖತೀಬ್ ಇಬ್ರಾಹಿಂ ಬ್ಯಾರಿ ಅಭಿಪ್ರಾಯಪಟ್ಟರು.
ಸಿದ್ಧಕಟ್ಟೆ ಕೆರೆಬಳಿ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
1976ರಲ್ಲಿ ಈ ಶಾಲೆ ಆರಂಭವಾದಾಗ ನಾನು ಮೊದಲನೇ ತರಗತಿ ಸೇರಿದೆ. ಅಲ್ಲಿಯ ತನಕ ಮಸೀದಿಯ ಒಂದು ಭಾಗದಲ್ಲಿ ತರಗತಿಗಳು ನಡೆಯು ತ್ತಿದ್ದವು. ಆಗ ನಾವು ಒಂದೇ ಕೊಠಡಿಯಲ್ಲಿ 40-50 ಮಂದಿ ವ್ಯಾಸಂಗ ಮಾಡುತ್ತಿದ್ದೆವು. ಆದರೆ ಇಂದು ಎಲ್ಲಾ ಸೌಕರ್ಯಗಳನ್ನು ನೀಡಿದ ಹೊರತಾಗಿಯೂ ಪೋಷಕರು ಆಂಗ್ಲ ಮಾಧ್ಯಮ ಶಾಲೆಗಳ ಮೊರೆ ಹೋಗುತ್ತಿದ್ದಾರೆ. ಇದರಿಂದ ಉತ್ತಮ ಗ್ರಾಮೀಣ ಶಾಲೆಗಳು ಮುಚ್ಚುವ ಪರಿಸ್ಥಿತಿ ಎದುರಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಗಬೆಟ್ಟು ಗ್ರಾಮ ಪಂಚಾಯತ್ ಸದಸ್ಯ ಮುಹಿಯುದ್ದೀನ್ .ಕೆ ಮಾತನಾಡಿ ಆಂಗ್ಲ ಶಿಕ್ಷಣಕ್ಕೆ ಇಂದು ಹೆಚ್ಚು ಒತ್ತು ನೀಡಲಾಗುತ್ತಿದೆ. ಇದರಿಂದ ಕನ್ನಡ ಶಾಲೆಗಳಲ್ಲಿ ಓದುವವರ ಸಂಖ್ಯೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಆದರೆ ಊರಿನ ನಾವೆಲ್ಲಾ ಸೇರಿ ಇಂದು ಆಯೋಜಿಸಿರುವ ಈ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಿಂದ ಶಾಲೆ ಖಂಡಿತ ಅಭಿವೃದ್ಧಿ ಹೊಂದಲಿದೆ. ಇದೇ ರೀತಿ ಎಲ್ಲ ಕನ್ನಡ ಶಾಲೆಯ ಉಳಿವಿಗಾಗಿ ಆಯಾ ಊರಿನ ಜನ ಪಣತೊಡಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸಿದ ಗಣ್ಯರನ್ನು ಸನ್ಮಾನಿಸಲಾಯಿತು. ಜೊತೆಗೆ ಶಾಲೆ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಾಲೆಯ ವಾರ್ಷಿಕ ವರದಿಯನ್ನು ಪ್ರಾಂಶುಪಾಲರಾದ ಮೇರಿ ಸಿಂಧ್ಯ ರೋಡ್ರಿಗಸ್ ಮಂಡಿಸಿದರು.
ವೇದಿಕೆಯಲ್ಲಿ ಅಬ್ದುಲ್ ಅಝೀಝ್ ಕೆರೆಬಳಿ , ಬಿ ಹಸನಬ್ಬ ಕೆರೆಬಳಿ, ಎಸ್ ಎಮ್ ಉಸೈನ್ ಕೆರೆಬಳಿ , ನಝೀರ್ ಅಹ್ಮದ್ ಕೆರೆಬಳಿ ಮತ್ತಿತ್ತರರು ಉಪಸ್ಥಿತರಿದ್ದರು. ಕಾಯ್ರಕ್ರಮವನ್ನು ನಿಶಾ ಲೋಬೊ ನಿರೂಪಿಸಿದರು. ವಿನೋದ ಕುಮಾರಿ ವಂದಿಸಿದರು. ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.