×
Ad

ಪೊಲೀಸ್ ಅಧಿಕಾರಿಯ ಹತ್ಯೆಗಿಂತ ದನದ ಸಾವು ಹೆಚ್ಚಿನ ಮಹತ್ವ ಪಡೆದಿದೆ: ನಾಸಿರುದ್ದೀನ್ ಶಾ

Update: 2018-12-20 22:09 IST

ಮುಂಬೈ,ಡಿ.20: ಇತ್ತೀಚಿನ ಗುಂಪು ಹಿಂಸಾಚಾರವನ್ನು ಪರೋಕ್ಷವಾಗಿ ಪ್ರಸ್ತಾಪಿಸಿರುವ ಬಾಲಿವುಡ್ ನಟ ನಾಸಿರುದ್ದೀನ್ ಶಾ ಅವರು,ಹಲವು ಸ್ಥಳಗಳಲ್ಲಿ ಪೊಲೀಸ್ ಅಧಿಕಾರಿಯ ಹತ್ಯೆಗಿಂತ ದನದ ಸಾವಿಗೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತಿದೆ ಎಂದು ಕಳವಳವನ್ನು ವ್ಯಕ್ತಪಡಿಸಿದ್ದಾರೆ.

ತನ್ನ ಮಕ್ಕಳ ಯೋಗಕ್ಷೇಮದ ಬಗ್ಗೆಯೂ ಕಳವಳವನ್ನು ವ್ಯಕ್ತಪಡಿಸಿರುವ ಶಾ,ಅವರನ್ನು ಯಾವುದೇ ಧರ್ಮದ ಅನುಯಾಯಿಗಳನ್ನಾಗಿ ತಾವು ಬೆಳೆಸಿಲ್ಲ ಎಂದು ಹೇಳಿದ್ದಾರೆ.

ಕಾರವಾನ್-ಎ-ಮೊಹಬ್ಬತ್ ಇಂಡಿಯಾಕ್ಕೆ ನೀಡಿರುವ ವೀಡಿಯೊ ಸಂದರ್ಶನದಲ್ಲಿ ಶಾ ಈ ಮಾತುಗಳನ್ನಾಡಿದ್ದು, ಸಂಸ್ಥೆಯು ತನ್ನ ಯು ಟ್ಯೂಬ್ ಚಾನೆಲ್‌ನಲ್ಲಿ ಈ ಸಂದರ್ಶನವನ್ನು ಶೇರ್ ಮಾಡಿದೆ.

ವಿಷವು ಈಗಾಗಲೇ ಹರಡಿಕೊಂಡುಬಿಟ್ಟಿದೆ ಮತ್ತು ಈಗ ಅದನ್ನು ನಿಯಂತ್ರಿಸುವುದು ಕಠಿಣವಾಗುತ್ತದೆ ಎಂದಿರುವ ಶಾ,ಭೂತವನ್ನು ವಾಪಸ್ ಬಾಟಲಿಯೊಳಗೆ ಹಾಕುವುದು ತುಂಬ ಕಷ್ಟ. ಕಾನೂನನ್ನು ತಮ್ಮ ಕೈಗಳಲ್ಲಿ ತೆಗೆದುಕೊಳ್ಳುವವರಿಗೆ ಸಂಪೂರ್ಣ ಅಭಯವಿದೆ. ಹಲವು ಪ್ರದೇಶಗಳಲ್ಲಿ ಪೊಲೀಸ್ ಅಧಿಕಾರಿಯ ಸಾವಿಗಿಂತ ದನದ ಸಾವಿಗೆ ಹೆಚ್ಚಿನ ಪ್ರಾಮುಖ್ಯವನ್ನು ನೀಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ ಎಂದಿದ್ದಾರೆ.

ನಟಿ ರತ್ನಾ ಪಾಠಕ್ ಶಾ ಅವರನ್ನು ಮದುವೆಯಾಗಿರುವ ಶಾ,ಒಳ್ಳೆಯದು ಅಥವಾ ಕೆಟ್ಟದ್ದಕ್ಕೂ ಮತ್ತು ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವುದು ನನ್ನ ನಂಬಿಕೆಯಾಗಿದ್ದರಿಂದ ನಮ್ಮ ಮಕ್ಕಳಾದ ಇಮಾದ್ ಮತ್ತು ವಿವಾನ್ ಅವರಿಗೆ ಯಾವುದೇ ಧಾರ್ಮಿಕ ಶಿಕ್ಷಣವನ್ನು ನೀಡದಿರಲು ನಾವು ನಿರ್ಧರಿಸಿದ್ದೆವು ಎಂದಿದ್ದಾರೆ.

ಒಳ್ಳೆಯದು ಮತ್ತು ಕೆಟ್ಟದ್ದರ ಕುರಿತು,ನಮ್ಮ ನಂಬಿಕೆಗಳೇನು ಎನ್ನುವ ಬಗ್ಗೆ ನಾವು ಅವರಿಗೆ ಕಲಿಸಿದ್ದೇವೆ ಎಂದಿರುವ ಅವರು, ಸದ್ಯೋಭವಿಷ್ಯದಲ್ಲಿ ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆಯಾಗುವುದಿಲ್ಲ ಎನ್ನುವುದು ನನ್ನ ಚಿಂತೆಗೆ ಕಾರಣವಾಗಿದೆ. ನಾನು ಕ್ರೋಧಗೊಂಡಿದ್ದೇನೆ,ಹೆದರಿಕೊಂಡಿಲ್ಲ ಎಂದು ಹೇಳಿದ್ದಾರೆ.

ನನಗೆ ನನ್ನ ಮಕ್ಕಳ ಬಗ್ಗೆ ಆತಂಕವಿದೆ,ಏಕೆಂದರೆ ನಾಳೆ ಗುಂಪೊಂದು ಅವರನ್ನು ಮುತ್ತಿಕೊಂಡು ನೀವು ಹಿಂದು ಅಥವಾ ಮುಸ್ಲಿಮರೇ ಎಂದು ಪ್ರಶ್ನಿಸಿದರೆ ಅವರ ಬಳಿ ಯಾವುದೇ ಉತ್ತರವಿರುವುದಿಲ್ಲ ಎಂದಿರುವ ಶಾ,ಈ ವಿಷಯಗಳು ನನ್ನನ್ನು ಹೆದರಿಸುತ್ತಿಲ್ಲ,ಅವು ನನಗೆ ಸಿಟ್ಟು ತರಿಸುತ್ತವೆ. ಸರಿಯಾಗಿ ಚಿಂತಿಸುವ ಯಾವುದೇ ವ್ಯಕ್ತಿಯು ಸಿಟ್ಟುಗೊಳ್ಳಬೇಕು,ಹೆದರಿಕೊಳ್ಳಬಾರದು ಎಂದು ನಾನು ಭಾವಿಸಿದ್ದೇನೆ. ಇದು ನಮ್ಮ ಮನೆ,ನಮ್ಮನ್ನು ಇಲ್ಲಿಂದ ತೆರವುಗೊಳಿಸುವ ಧೈರ್ಯ ಯಾರಿಗಿದೆ ಎಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News