×
Ad

ಸ್ವಾವಲಂಬಿ ಗ್ರಾಮೀಣ ಭಾರತ ನಮ್ಮ ಮುಂದಿರುವ ಸವಾಲು: ಪ್ರೊ. ರಾಜ್‌ಮೋಹನ್ ಗಾಂಧಿ

Update: 2018-12-21 17:18 IST

ಮಂಗಳೂರು, ಡಿ. 21: ಗ್ರಾಮೀಣ ಭಾರತವನ್ನು ಮರಳಿ ಸಶಕ್ತಗೊಳಿಸುವುದು ಮತ್ತು ಸ್ವಾವಲಂಬಿಗಳನ್ನಾಗಿ ಮಾಡುವುದು ನಮ್ಮ ಮುಂದಿರುವ ಸವಾಲಾಗಿದೆ ಎಂದು ಗಾಂಧಿನಗರ ಐ.ಐ.ಟಿ ಮತ್ತು ಅಮೆರಿಕಾದ ಮಿಚಿಗನ್ ಸ್ಟೇಟ್ ವಿಶ್ವ ವಿದ್ಯಾನಿಲಯದ ಸಂದರ್ಶಕ ಪ್ರೊಫೆಸರ್ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧಿಯ ಮೊಮ್ಮಗ ಪ್ರೊ. ರಾಜ್ ಮೋಹನ್ ಗಾಂಧಿ ತಿಳಿಸಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ವಿಶ್ವವಿದ್ಯಾನಿಲಯ ಕಾಲೇಜು ಸಹಯೋಗದೊಂದಿಗೆ ಕಾಲೇಜಿನ ರವೀಂದ್ರ ಕಲಾ ಸಭಾಂಗಣದಲ್ಲಿಂದು ಹಮ್ಮಿಕೊಂಡ ಸ್ವರಾಜ್ಯ ಮತ್ತು ಸರ್ವೋದಯ ಮರು ಚಿಂತನೆ ಎಂಬ ವಿಷಯದ ಬಗ್ಗೆ ಅವರು ಉಪನ್ಯಾಸ ನೀಡಿದರು.

ಗ್ರಾಮ ಸ್ವರಾಜ್ಯದ ಗಾಂಧೀಜಿಯ ಪ್ರಮುಖ ಗುರಿಯಾಗಿತ್ತು. ಸಮಕಾಲೀನ ಭಾರತ ನಿರುದ್ಯೋಗ ಸೇರಿದಂತೆ ಹಲವು ಸಮಸ್ಯೆಗಳನ್ನೆದುರಿಸುತ್ತಿದೆ. ಇಂತಹ ಗ್ರಾಮೀಣ ಭಾರತಕ್ಕೆ ಮತ್ತೆ ಜೀವ ತುಂಬುವುದು ನಮ್ಮ ಮುಂದಿರುವ ಸವಾಲಾಗಿದೆ. ಈ ಸವಾಲನ್ನು ಪ್ರತಿಯೊಬ್ಬ ಭಾರತೀಯನು ಸ್ವೀಕರಿಸಿ ತಮ್ಮ ಕೊಡುಗೆಯನ್ನು ನೀಡಬೇಕಾಗಿದೆ. ಗಾಂಧೀಜಿ ಅವರ ಹಿಂದ್ ಸ್ವರಾಜ್ ಪುಸ್ತಕದಲ್ಲಿ ಸ್ವರಾಜ್ಯದ ಬಗ್ಗೆ ಸತ್ಯಾಗ್ರಹದ ಬಗ್ಗೆ ಸರ್ವೋದಯ ಬಗ್ಗೆ ನೇರವಾದ ಪ್ರಸ್ತಾಪವಿರಲಿಲ್ಲ. ಆದರೆ ಸ್ವರಾಜ್ಯದ ಸತ್ಯಾಗ್ರಹದ ಸರ್ವೋದಯ ಎಲ್ಲಾ ಆಶಯಗಳನ್ನು ಒಳಗೊಂಡಿತ್ತು ಎಂದು ರಾಜ್ ಮೋಹನ್ ಗಾಂಧಿ ತಿಳಿಸಿದರು.

ಸಂವಾದದಲ್ಲಿ ಪಾಲ್ಗೊಂಡ ರಾಜ್ ಮೋಹನ್ ಗಾಂಧಿ

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಸಭಾಂಗಣವನ್ನು ನೋಡಿ ತುಂಬಾ ಸಂತಸಪಟ್ಟಿರುವುದಾಗಿ ರಾಜ್ ಮೋಹನ್ ಗಾಂಧಿ ಹೇಳಿದರು.

ಗಾಂಧೀಜಿಗೆ ಪ್ರೀಯವಾದ ವೈಷ್ಣವ ಜನತೋ...ಗೀತೆಯನ್ನು ಹಾಡಿದ ವಿದ್ಯಾರ್ಥಿನಿಯನ್ನು ಅಭಿನಂದಿಸಿದರು.

ಕಸ್ತೂರ್ ಬಾ ನೆನೆದು ಗದ್ಗದಿತರಾದರು

ಮೋಹನ್ ದಾಸ್ ಕರಮಚಂದ ಗಾಂಧಿಯವರ ಜೊತೆಗಿನ ಒಡನಾಟದ ಬಗ್ಗೆ ಮತ್ತು ಕಸ್ತೂರ್ ಬಾ ಗಾಂಧಿವರ ಬಗ್ಗೆ ಸಭೀಕರು ಕೇಳಿದಾಗ ಕಸ್ತೂರ್ ಬಾ ಗಾಂಧಿ ಮಹತ್ವದ ಪಾತ್ರವಹಿಸಿದ್ದಾರೆ. ನಾನು ಹುಟ್ಟಿದಾಗ ನನ್ನ ತಾಯಿಯ ಜೊತೆ ಇದ್ದವರು ಕಸ್ತೂರ್‌ ಬಾ, ನಾನು  6 ವರ್ಷದವನಿರುವಾಗ ಅವರನ್ನು ಕಳೆದುಕೊಂಡೆ. ಗಾಂಧಿ ಮಹಾತ್ಮರಾಗುವಲ್ಲಿ ಕಸ್ತೂರ್ ಬಾ ಎಲ್ಲಾ ತಾಯಿಯರಂತೆ ತಮ್ಮ ಬದುಕಿನಲ್ಲಿ ಬಹಳಷ್ಟು ತ್ಯಾಗ ಮಾಡಿದ್ದಾರೆ, ಸಹಿಸಿದ್ದಾರೆ ಎಂದಾಗ ಒಂದು ಕ್ಷಣ ಬಾವೋದ್ವೆಗದಿಂದ ಕಣ್ಣೀರಿಟ್ಟರು.

ಸಮಾರಂಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಎ.ಎಂ.ಖಾನ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಡಾ. ಉದಯ ಕುಮಾರ್ ಇರ್ವತ್ತೂರು ಸ್ವಾಗತಿಸಿದರು. ಡಾ.ಲತಾ ಪಂಡಿತ್ ಕಾರ್ಯಕ್ರಮ ನಿರೂಪಿಸಿದರು. ಡಾ. ಜಯವಂತ್ ನಾಯಕ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News