×
Ad

ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣ: ಎಫ್‌ಐಆರ್ ರದ್ದು ಕೋರಿ ತೇಲ್ತುಂಬ್ಡೆ ಸಲ್ಲಿಸಿದ್ದ ಅರ್ಜಿ ತಿರಸ್ಕೃತ

Update: 2018-12-21 19:30 IST

ಹೊಸದಿಲ್ಲಿ, ಡಿ.21: ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ತನ್ನ ವಿರುದ್ಧ ಜನವರಿ 8ರಂದು ಪುಣೆ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ರದ್ದುಗೊಳಿಸಬೇಕೆಂದು ಕೋರಿ ಹೋರಾಟಗಾರ ಆನಂದ್ ತೇಲ್ತುಂಬ್ಡೆ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿದೆ. ಆದರೆ, ಅವರಿಗೆ ನ್ಯಾಯಾಲಯ ಮೂರು ವಾರ ಬಂಧನದಿಂದ ರಕ್ಷಣೆಯನ್ನು ಮಂಜೂರುಗೊಳಿಸಿದೆ.

ಎಫ್‌ಐಆರ್ ರದ್ದುಕೋರಿ ಹೋರಾಟಗಾರರಾದ ಗೌತಮ್ ನವ್ಲಾಖ, ತೇಲ್ತುಂಬ್ಡೆ ಹಾಗೂ ಸ್ಟಾನ್ ಸ್ವಾಮಿ ಜಂಟಿಯಾಗಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಆದೇಶವನ್ನು ಕಾಯ್ದಿರಿಸಿತ್ತು. ನವ್ಲಾಖರಿಗೆ ಜನವರಿ 14ರವರೆಗೆ ಬಂಧನದಿಂದ ರಕ್ಷಣೆ ನೀಡಲಾಗಿದ್ದರೆ, ತೇಲ್ತುಂಬ್ಡೆಯನ್ನು ಆರೋಪಿ ಹಾಗೂ ಸ್ವಾಮಿಯನ್ನು ‘ಶಂಕಿತ’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಕಳೆದ ಡಿಸೆಂಬರ್ 31ರಂದು ಪುಣೆಯಲ್ಲಿ ನಡೆದಿದ್ದ ಎಲ್ಗರ್ ಪರಿಷದ್ ಸಭೆಗೂ ಮಾವೋವಾದಿ ನಕ್ಸಲರಿಗೂ ಸಂಪರ್ಕವಿದೆ ಎಂದು ಪೊಲೀಸರು ಆರೋಪಿಸಿದ್ದು, ಸಭೆಯಲ್ಲಿ ಪಾಲ್ಗೊಂಡಿದ್ದ ನವ್ಲಾಖ, ತೇಲ್ತುಂಬ್ಡೆ, ಅರುಣ್ ಫೆರೇರಾ, ವೆರ್ನಾನ್ ಗೋನ್ಸಾಲ್ವಿಸ್, ಸುಧಾ ಭಾರದ್ವಾಜ್, ಪಿ.ವರವರ ರಾವ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಈ ಸಭೆಯಲ್ಲಿ ಹೋರಾಟಗಾರರು ಮಾಡಿದ್ದ ಪ್ರಚೋದನಕಾರಿ ಭಾಷಣ ಮರುದಿನ (ಜನವರಿ 1ರಂದು) ನಡೆದ ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಪ್ರಧಾನ ಕಾರಣ ಎಂದು ಪೊಲೀಸರು ಆರೋಪಿಸಿದ್ದಾರೆ.

ಬಳಿಕ ಸುಪ್ರೀಂಕೋರ್ಟ್‌ನ ಆದೇಶದಂತೆ ಆರೋಪಿಗಳನ್ನು ಗೃಹ ಬಂಧನದಲ್ಲಿಡಲಾಗಿತ್ತು. ಇತ್ತೀಚೆಗೆ ನವ್ಲಾಖರನ್ನು ಹೊರತುಪಡಿಸಿ ಉಳಿದ ಆರೋಪಿಗಳನ್ನು ಪುಣೆ ಪೊಲೀಸರು ಬಂಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News