×
Ad

ಮಹಾಮುಷ್ಕರ: ಕಾರ್ಮಿಕ ಸಂಘಟನೆಗಳ ಜಂಟಿ ಸಮಾವೇಶ

Update: 2018-12-21 19:55 IST

ಕುಂದಾಪುರ, ಡಿ.21: ಕೇಂದ್ರದ ಕಾರ್ಮಿಕ ವಿರೋಧಿ, ಜನ ವಿರೋಧಿ ನೀತಿಗಳ ವಿರುದ್ಧ ಜ.8 ಮತ್ತು 9ರಂದು ದೇಶದ 10 ಕಾರ್ಮಿಕ ಸಂಘಟನೆಗಳು ಹಮ್ಮಿಕೊಂಡಿರುವ ಅಖಿಲ ಭಾರತ ಮುಷ್ಕರವನ್ನು ಬೆಂಬಲಿಸಿ ಸಿಐಟಿಯು, ಇಂಟಕ್ ಮತ್ತು ಇತರ ಜನಪರ ಸಂಘಟನೆಗಳ ಜಂಟಿ ಸಮಾವೇಶವು ಗುರುವಾರ ಕುಂದಾಪುರದ ಕಂಟ್ರಿ ಕ್ಲಬ್ ವಠಾದಲ್ಲಿ ಜರಗಿತು.

ಸಭೆಯನ್ನುದ್ದೇಶಿಸಿ ಸಿಐಟಿಯು ಅಧ್ಯಕ್ಷ ಎಚ್.ನರಸಿಂಹ ಮಾತನಾಡಿ, ಕಳೆದ 4 ವರ್ಷಗಳಿಂದ ಕೇಂದ್ರ ಸರಕಾರವು 44 ಕಾರ್ಮಿಕ ಕಾನೂನುಗಳನ್ನು 4 ಸಂಹಿತೆಯಾಗಿ ಮಾಡಲು ಮುಂದಾಗಿದೆ. ಈಗಾಗಲೇ ಕಾರ್ಮಿಕರಿಗೆ ಸಿಗು ತ್ತಿರುವ ಹಲವಾರು ಸೌಲಭ್ಯಗಳಲ್ಲಿಯೂ ಸುಧಾರಣೆ ಹೆಸರಿನಲ್ಲಿ ಸುಲಭವಾಗಿ ಸಿಗದ ರೀತಿಯಲ್ಲಿ ತಿದ್ದುಪಡಿ ಮಾಡುತ್ತಿದೆ ಎಂದು ಆರೋಪಿಸಿದರು.

ಕಾರ್ಮಿಕ ಮುಖಂಡ ಸುರೇಶ್ ಕಲ್ಲಾಗರ ಮಾತನಾಡಿ, ಅಭಿವೃದ್ಧಿ ಎಂದರೆ ದೇಶದ ಸಂಪತ್ತು ಅಭಿವೃದ್ಧಿ ಮಾಡುವ ದುಡಿಮೆಗಾರರ ಅಭಿವೃದ್ಧಿಯಾಗಬೇಕು. ಆದರೆ ಇಂದು ಸರಕಾರವು ಕಾರ್ಮಿಕ ಕಾನೂನುಗಳನ್ನೇ ಮುರಿದು ದೇಶದ ದೊಡ್ಡ ಬಂಡವಾಳಗಾರರಿಗೆ ವಿಪರೀತ ಲಾಭ ಮಾಡಿಕೊಡುವ ನೀತಿಯನ್ನು ತರುತ್ತಿದೆ. ಸರಕಾರವು ಪ್ರತಿ ವರ್ಷ ಸರಾಸರಿ 5 ಲಕ್ಷ ಕೋಟಿ ರೂ.ಗಳನ್ನು ಬಂಡವಾಳಗಾರರಿಗೆ ತೆರಿಗೆ ರಿಯಾಯಿತಿ ನೀಡುತ್ತಿದೆ ಎಂದು ದೂರಿದರು.

ಆರ್‌ಬಿಐನ ಅಂಕಿ ಅಂಶಗಳ ಪ್ರಕಾರ 2014-15-2017ರ ನಡುವೆ ಬ್ಯಾಂಕ್‌ನಲ್ಲಿ ಸಾಲ ಪಡೆದ ದೊಡ್ಡ ಬಂಡವಾಳಗಾರರ 2.42 ಲಕ್ಷ ಕೋಟಿ ರೂ. ಮನ್ನ ಮಾಡಲಾಗಿದೆ. ಆದರೆ ಕಾರ್ಮಿಕರು, ನೌಕರರು ಸೌಲಭ್ಯ ಕೇಳಿದರೆ ಸಂಪನ್ಮೂಲದ ಕೊರತೆ ತೋರಿಸಲಾಗುತ್ತದೆ. ರಿಕ್ಷಾ, ಬಸ್ಸು ನೌಕರರರು ಸೌಲಭ್ಯ ಗಳಿಂದ ವಂಚಿತರಾಗಿದ್ದಾರೆ. ಆದರೆ ಸರಕಾರ 2014-15ರಲ್ಲಿ 1.26 ಲಕ್ಷ ಕೋಟಿಗಳಿಂದ 2016-17ರಲ್ಲಿ 2.73 ಲಕ್ಷಕೋಟಿಗಳನ್ನು ಪೆಟ್ರೋಲಿಯಂ ಕಚ್ಛಾ ತೈಲಗಳಿಂದ ಆದಾಯ ಹೆಚ್ಚಿಸಿಕೊಂಡಿದೆ ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಇಂಟಕ್ ಸಂಘಟನೆಯ ಲಕ್ಷ್ಮಣ ಶೆಟ್ಟಿ ಮಾತನಾಡಿ, ಕೇಂದ್ರ ಸರಕಾರವು ಈ ದೇಶದ ಶೇ.99.9 ಜನರ ಅಭಿವೃದ್ಧಿ ಪರ ನೀತಿಯ ಬದಲಾಗಿ ಶೇ.0.01 ಜನರ ಪರ ನೀತಿ ತರುತ್ತಿರುವುದನ್ನು ವಿರೋಧಿಸಬೇಕಾ ಗಿದೆ. ಕೇಂದ್ರ ಸರಕಾರದ ನೀತಿಗಳಿಂದ ದೊಡ್ಡ ಶ್ರೀಮಂತರಿಗೆ ಅನುಕೂಲ ವಾಗಿದೆ. ಮಧ್ಯಮ, ಬಡವರು ಮತ್ತಷ್ಟು ಸಂಕಷ್ಟಕ್ಕೊಳಗಾಗಿದ್ದಾರೆ. ಆದುದರಿಂದ ಜ.8-9ರ ಮುಷ್ಕರ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.

ಸಭೆಯಲ್ಲಿ ಇಂಟಕ್‌ನ ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿ ರೋಶನ್ ಶೆಟ್ಪಿ, ಇಂಟಕ್ ಉಪಾಧ್ಯಕ್ಷರಾದ ರಘುರಾಮ ನಾಯ್ಕ, ಸಿಐಟಿಯು ರಿಕ್ಷಾ ಸಂಘದ ಅಧ್ಯಕ್ಷ ಲಕ್ಷ್ಮಣ ಬರೇಕಟ್ಟು, ಇಂಟಕ್ ರಿಕ್ಷಾ ಸಂಘಟನೆಯ ಮಾಣಿ ಉದಯ್ ಕುಮಾರ್ ಉಪಸ್ಥಿತರಿದರು. ಸಿಐಟಿಯು ಸಂಘಟನಾ ಕಾರ್ಯದರ್ಶಿ ರಮೇಶ್ ವಿ. ಸ್ವಾಗತಿಸಿದರು. ಕಟ್ಟಡ ಸಂಘದ ಸುಧಾಕರ ಕುಂಭಾಶಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News