×
Ad

ಮತ್ತೊಂದು ಭೋಪಾಲ್ ದುರಂತಕ್ಕೆ ಅವಕಾಶ ಬೇಡ: ಡಾ. ಸತಿನಾಥ ಸಾರಂಗಿ

Update: 2018-12-21 20:30 IST

ಮಂಗಳೂರು, ಡಿ. 21: ನಗರದಲ್ಲಿ ಮತ್ತೊಂದು ಭೋಪಾಲ್ ದುರಂತ ಆಗದಿರಬೇಕಾದರೆ ಜನಸಾಮಾನ್ಯರು ಜನರ ಜೀವಕ್ಕೆ ವಿಷ ನೀಡಬಲ್ಲ ಕೈಗಾರಿಕೆಗಳ ವಿರುದ್ಧ ಒಗ್ಗಟ್ಟಾಗಿ ಹೋರಾಟ ನಡೆಸಬೇಕು ಎಂದು ಭೋಪಾಲ ಅನಿಲ ದುರಂತ ಸಂತ್ರಸ್ತರ ಪರ ಹೋರಾಟಗಾರ ಡಾ. ಸತಿನಾಥ ಸಾರಂಗಿ ಎಚ್ಚರಿಸಿದ್ದಾರೆ.

ದ.ಕ. ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ಕರಾವಳಿ ಕರ್ನಾಟಕ ಜನಾಭಿವೃದ್ಧಿ ವೇದಿಕೆ ವತಿಯಿಂದ ಎಂಆರ್‌ಪಿಎಲ್ ವಿಸ್ತರಣೆ ವಿರೋಧಿಸಿ ‘ತುಳುನಾಡು ಉಳಿಸಿ’ ಜನಾಗ್ರಹ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಭೋಪಾಲದಲ್ಲಿ ಸಾವಿರಾರು ಜನರ ಸಾವಿಗೆ ಕಾರಣವಾದ ಅನಿಲ ದುರಂತದ ಬಗ್ಗೆ ಸಂಕ್ಷಿಪ್ತವಾಗಿ ವಿವರ ನೀಡಿದ ಅವರು, ಆ ಘಟನೆಯಿಂದ ಇಂದಿಗೂ ಲಕ್ಷಾಂತರ ಜನರು ನರಕ ಯಾತನೆಯನ್ನು ಅನುಭವಿಸುತ್ತಿರುವುದಾಗಿ ಬೇಸರ ವ್ಯಕ್ತಪಡಿಸಿದರು. ಇಂತಹ ಅಪಾಯಕಾರಿ ಸನ್ನಿವೇಶ ಮಂಗಳೂರಿನಲ್ಲಿ ಬಾರದಂತೆ ಇಲ್ಲಿನ ಜನಸಾಮಾನ್ಯರು ಒಗ್ಗಟ್ಟಾಗಬೇಕು ಎಂದು ಅವರು ಕರೆ ನೀಡಿದರು.

‘‘ಭೋಪಾಲದಲ್ಲಿ ದುರಂತಕ್ಕೆ ಕಾರಣವಾದ ರಾಸಾಯನಿಕ ಕಾರ್ಖಾನೆ ಮತ್ತು ಎಂಆರ್‌ಪಿಎಲ್‌ಗೂ ಸಾಮ್ಯತೆಯನ್ನು ಇಂದು ಕುತ್ತೆತ್ತೂರು ಮತ್ತು ಪೆರ್ಮುದೆಗೆ ನನ್ನ ಭೇಟಿಯ ವೇಳೆ ಕಂಡು ಕೊಂಡಿದ್ದೇನೆ. ಹಚ್ಚ ಹಸುರಿನ ಪ್ರದೇಶದಲ್ಲಿ ಬೃಹತ್ ಕೈಗಾರಿಕೆ ಆರಂಭಕ್ಕೆ ಜನರು ಹೇಗೆ ಅವಕಾಶ ನೀಡಿದ್ದಾರೆಂಬ ಆತಂಕ ನನ್ನನ್ನು ಕಾಡುತ್ತಿದೆ. ಭೋಪಾಲದಲ್ಲಿಯೂ ಔಷಧಿ ತಯಾರಿಕಾ ಕೇಂದ್ರೆ ಎಂದು ಹೇಳಿ ಜನರನ್ನು ನಂಬಿಸಿ ಕಾರ್ಖಾನೆಯನ್ನು ಆರಂಭಿಸಲಾಗಿತ್ತು. ಬಳಿಕ ಅದು ಲಕ್ಷಾಂತರ ಜನರ ಜೀವಕ್ಕೇ ಕುತ್ತನ್ನು ತಂದಿಟ್ಟಿತು. ಸಂತ್ರಸ್ತರು ಇಂದಿಗೂ ಆ ವಿಷಾನಿಲದ ಕರಾಳ ಛಾಯೆಯಿಂದ ಹೊರಬರಲಾಗದೆ ನರಳುತ್ತಿದ್ದಾರೆ.

ಪರಿಹಾರದ ಹೆಸರಿನಲ್ಲಿ ಸಿಕ್ಕ ಹಣ ಜನರೊಳಗೆ ಸಂಘರ್ಷಕ್ಕೆ ಕಾರಣವಾಯಿತು. ಒಟ್ಟಿನಲ್ಲಿ ಭೋಪಾಲ ದುರಂತ ಅಲ್ಲಿನ ಜನಸಾಮಾನ್ಯರ ಬದುಕನ್ನೇ ಕಸಿದು ಬಿಟ್ಟಿತು. ಅಂತಹ ಅನಾಹುತಕ್ಕೆ ಇಲ್ಲಿನ ಜನತೆ ಅವಕಾಶ ನೀಡಬಾರದು. ಸರಕಾರ, ಜನಪ್ರತಿನಿಧಿಗಳು, ಮಾತ್ರವಲ್ಲ ನ್ಯಾಯಾಲಯದಲ್ಲೂ ಕೂಡಾ ಭೋಪಾಲ್ ಸಂತ್ರಸ್ತರಿಗೆ ಸೂಕ್ತ ನ್ಯಾಯ ದೊರಕಿಲ್ಲ. ಅಲ್ಪ ಸ್ವಲ್ಪ ನ್ಯಾಯ ದೊರಕಿರುವುದು ಕೇವಲ ಹೋರಾಟದಿಂದ ಮಾತ್ರ. ಹಾಗಾಗಿ ಇಲ್ಲಿ ಜನರ ಹೋರಾಟವನ್ನು ಬಲಪಡಿಸಬೇಕು’’ ಎಂದು ಅವರು ಸಲಹೆ ನೀಡಿದರು.

ಕೃಷಿ ಭೂಮಿ ಸಂರಕ್ಷಣಾ ಸಮಿತಿಯ ಉಪಾಧ್ಯಕ್ಷ ವಿಲಿಯಂ ಮಾತನಾಡಿ, ಎಂಆರ್‌ಪಿಎಲ್‌ನ 4ನೆ ಹಂತದ ವಿಸ್ತರಣೆಯನ್ನು ವಿರೋಧಿಸುವ ಮೂಲಕ ಕೃಷಿ ಭೂಮಿ, ಪ್ರಕೃತಿ, ಸಂಸ್ಕೃತಿಯನ್ನು ನಾವು ಉಳಿಸಬೇಕಾಗಿದೆ ಎಂದರು. ವೇದಿಕೆಯ ಟಿ.ಆರ್. ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷಿ ಭೂಮಿ ಸಂರಕ್ಷಣಾ ಸಮಿತಿಯ ಮಧುಕರ ಅಮೀನ್, ಮುಹಮ್ಮದ್ ಕುಂಞಿ, ಮೀನುಗಾರ ಮುಖಂಡ ವಾಸುದೇವ ಬೋಳೂರು, ವಿದ್ಯಾ ದಿನಕರ್, ಲಾರೆನ್ಸ್ ಡಿಸೋಜಾ ಮೊದಲಾದವರು ಉಪಸ್ಥಿತರಿದ್ದರು.

ಆ ರಾತ್ರಿ ಇನ್ನೆಂದೂ ಬಾರದಿರಲಿ !

ಡಿಸೆಂಬರ್ 2, 1984ರ ಆ ರಾತ್ರಿ ಭೋಪಾಲದ ಪಾಲಿಗೆ ಕರಾಳ ದಿನವಾಗಿತ್ತು. ಆ ದಿನ ಇನ್ನೆಂದೂ ಬಾರದಿರಲಿ. ಆ ರಾತ್ರಿ ಕೀಟನಾಶಕ ಕಾರ್ಖಾನೆಯಿಂದ ಹೊರಹೊಮ್ಮಿದ ವಿಷಾನಿಲ 10000 ಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದರೆ, 5 ಲಕ್ಷಕ್ಕೂ ಅಧಿಕ ಮಂದಿ ಆ ವಿಷಾನಿಲದ ಸೇವನೆಗೆ ಒಳಗಾದರು.

ಮರುದಿನ ಸಾವಿರಾರು ಮೃತದೇಹಗಳು ರಸ್ತೆಗಳಲ್ಲಿ ಬಿದ್ದುಕೊಂಡಿದ್ದವು. ಸರಕಾರ ತನ್ನ ಜವಾಬ್ದಾರಿಯನ್ನು ಮರೆಮಾಚಲು ಸರಕಾರಿ ವಾಹನದ ಮೂಲಕ ಆ ಮೃತದೇಹಗಳನ್ನು ನರ್ಮದಾ ನದಿಗೆ ಎಸೆಯುವ ಮೂಲಕ ಅಮಾನವೀಯತೆಯನ್ನು ಪ್ರದರ್ಶಿಸಿತ್ತು. ಪರಿಹಾರ ರೂಪವಾಗಿ ಅಂದು ಸತ್ತವರ ಕುಟುಂಬಕ್ಕೆ 10 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 25,000 ರೂ. ನೀಡಿತ್ತು. ಇದು ಜನರ ನಡುವೆ ಸಂಘರ್ಷಕ್ಕೆ ಕಾರಣವಾಯಿತು. ಅಧಿಕ ಪರಿಹಾರ ಹಣ ಪಡೆದವರು ಅದನ್ನು ದುಂದುವೆಚ್ಚ ಮಾಡಿದರೆ, ಗಾಯಾಳುಗಳಿಗೆ ಸಿಕ್ಕ ಚಿಕ್ಕಾಸು ಪರಿಹಾರದಿಂದ ಔಷಧೋಪಚಾರ ಸರಿಯಾಗಿ ಮಾಡಲಾಗದೆ ಸಾವಿಗಿಂತಲೂ ಭೀಕರವಾದ ಜೀವನವನ್ನು ನಡೆಸುವಂತಾಗಿದೆ. ಪರಿಹಾರದ ಬದಲಿಗೆ ಪರ್ಯಾಯ ವ್ಯವಸ್ಥೆ, ಸೂಕ್ತ ಉದ್ಯೋಗವನ್ನು ಕಲ್ಪಿಸಿದ್ದರೆ ಇಂದು ಅಲ್ಲಿನ ಸಂತ್ರಸ್ತರು ಸ್ವಲ್ಪವಾದರೂ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತಿತ್ತು. ಆದರೆ ಕಂಪನಿ, ಕೈಗಾರಿಕೆಗಳ ಕೈಗೊಂಬೆಗಳಾಗಿರುವ ಸರಕಾರ, ಜನಪ್ರತಿನಿಧಿಗಳಿಗೆ ಸಂತ್ರಸ್ತರ ಗೋಳು ಮಾತ್ರ ಕೇಳಲಿಲ್ಲ. ಹಾಗಾಗಿ ಅಭಿವೃದ್ಧಿ ಹೆಸರಿನಲ್ಲಿ ರೈತರಿಂದ ಭೂಸ್ವಾಧೀನಕ್ಕಾಗಿ ಪರಿಹಾರ ನೀಡಲು ಮುಂದಾಗುವ ಸಂದರ್ಭ ನಮ್ಮ ಪರಿಸರ, ಮುಂದಿನ ಜೀವನದ ಬಗ್ಗೆ ಗಂಭೀರವಾಗಿ ನಾವಿಂದು ಆಲೋಚನೆ ಮಾಡಬೇಕು ಎಂದು ಡಾ. ಸತಿನಾಥ ಸಾರಂಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News