ತಾಜ್‌ಮಹಲ್ ರಕ್ಷಣೆಗಾಗಿ ವೈಜ್ಞಾನಿಕ ಸ್ವಚ್ಛತಾ, ಸಂರಕ್ಷಣಾ ಯೋಜನೆ: ಕೇಂದ್ರ

Update: 2018-12-21 15:19 GMT

ಹೊಸದಿಲ್ಲಿ,ಡಿ.21: ತಾಜ್ ಮಹಲ್ ಮೇಲೆ ಶೇಖರಣೆಗೊಂಡಿರುವ ಮಾಲಿನ್ಯಕಾರಕಗಳನ್ನು ತೆಗೆಯಲು ಪುರಾತತ್ವ ಇಲಾಖೆಯು ವೈಜ್ಞಾನಿಕ ಶುಚಿತ್ವ ಮತ್ತು ಸಂರಕ್ಷಣಾ ಯೋಜನೆಯನ್ನು ರೂಪಿಸಿದೆ ಎಂದು ಕೇಂದ್ರ ಸರಕಾರ ಶುಕ್ರವಾರ ಲೋಕಸಭೆಯಲ್ಲಿ ತಿಳಿಸಿದೆ.

ಭಾರತೀಯ ಪುರಾತತ್ವ ಇಲಾಖೆಯ ಪ್ರಕಾರ, ವಿವಿಧ ಮೂಲಗಳ ಮಾಲಿನ್ಯಕಾರಕಗಳು ತಾಜ್ ಮಹಲ್‌ನ ಮೇಲ್ಮೈಯಲ್ಲಿರುವ ಅಮೃತಶಿಲೆಗಳ ಮೇಲೆ ಶೇಖರಣೆಗೊಂಡಿದೆ. ಈ ಧೂಳಿನ ಕಣಗಳ ಮೇಲೆ ಬೆಳಕು ಬಿದ್ದು ಅದು ಪ್ರತಿಫಲಿಸಿದಾಗ ವಿವಿಧ ಬಣ್ಣವನ್ನು ಹೊರಸೂಸುತ್ತದೆ. ಇದರಿಂದ ಅಮೃತಶಿಲೆಯು ಬಣ್ಣ ಬದಲಾದಂತೆ ಗೋಚರವಾಗುತ್ತದೆ ಎಂದು ಪರಿಸರ ಸಹಾಯಕ ಸಚಿವ ಮಹೇಶ್ ಶರ್ಮಾ ತಿಳಿಸಿದ್ದಾರೆ.

ತಾಜ್ ಮಹಲ್‌ನ ನಾಲ್ಕು ಮಿನಾರಗಳು, ಎಂಟು ದ್ವಾರಗಳು, ಅಮೃತಶಿಲೆಯ ನಾಲ್ಕು ಗೋಡೆಗಳು, ಮಾನವನ ಎತ್ತರದವರೆಗಿನ ಆಂತರಿಕ ಭಾಗ ಮತ್ತು ಮುಖ್ಯ ಸಮಾಧಿಯ ಛಾವಣಿಯ ಮೇಲಿರುವ ನಾಲ್ಕು ಛತ್ರಿಗಳನ್ನು ಈಗಾಗಲೇ ಸ್ವಚ್ಛಗೊಸಲಾಗಿದೆ. ಮುಖ್ಯ ಗುಂಬಝ್ ಸ್ವಚ್ಛತೆಗೆ ಇನ್ನಷ್ಟು ಅಧ್ಯಯನ ನಡೆಸುವ ಅಗತ್ಯವಿದೆ ಎಂದು ಶರ್ಮಾ ತಿಳಿಸಿದ್ದಾರೆ. ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾಗಿರುವ ತಾಜ್ ಮಹಲ್‌ನ ರಕ್ಷಣೆಗೆ ಕುರಿತ ವರದಿಯನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನು ಪಡೆದುಕೊಂಡಿರುವ ದಿಲ್ಲಿ ಮೂಲದ ಯೋಜನೆ ಮತ್ತು ಶಿಲ್ಪಕಲೆ ಶಾಲೆ (ಎಸ್‌ಪಿಎ)ಗೆ ಶೇ.80 ಅಂದರೆ 51.89 ಲಕ್ಷ ರೂ. ಪಾವತಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News