ತೆರಿಗೆ, ವಿತರಕರ ಕಮಿಷನ್ ಇಲ್ಲದಿದ್ದರೆ ಪೆಟ್ರೋಲ್ 34 ರೂ.ಗೆ ಲಭ್ಯ !

Update: 2018-12-21 15:21 GMT

ಹೊಸದಿಲ್ಲಿ,ಡಿ.21: ತೆರಿಗೆ ಮತ್ತು ವಿತರಕರ ಕಮಿಷನ್ ತೆಗೆದುಹಾಕಿದರೆ ರಾಷ್ಟ್ರ ರಾಜಧಾನಿ ಪ್ರದೇಶ (ಎನ್‌ಸಿಆರ್) ದಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 34.04 ರೂ.ಗೆ ಲಭ್ಯವಾದರೆ ಡೀಸೆಲ್ ಪ್ರತಿ ಲೀಟರ್ 38.67 ರೂ.ಗೆ ದೊರೆಯುತ್ತದೆ ಎಂದು ವಿತ್ತ ಸಹಾಯಕ ಸಚಿವ ಶಿವಪ್ರತಾಪ ಶುಕ್ಲಾ ಶುಕ್ರವಾರ ಲೋಕಸಭೆಯಲ್ಲಿ ತಿಳಿಸಿದ್ದಾರೆ.

ಡಿಸೆಂಬರ್ 19ರ ಪೆಟ್ರೋಲಿಯಂ ದರಗಳ ವಿವರವನ್ನು ನೀಡಿದ ಶುಕ್ಲಾ, ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ತೆರಿಗೆಗಳು ಮತ್ತು ಡೀಲರ್ ಕಮಿಷನ್ ಕ್ರಮವಾಗಿ ಶೇ.96.9 ಮತ್ತು ಶೇ.60.3 ಆಗುತ್ತದೆ ಎಂದು ತಿಳಿಸಿದ್ದಾರೆ. ಡಿಸೆಂಬರ್ 19ರಂದು ಪೆಟ್ರೋಲ್ ಬೆಲೆ ಲೀಟರ್‌ಗೆ 70.63 ಆಗಿತ್ತು. ಇದರಲ್ಲಿ 17.98 ರೂ. ಕೇಂದ್ರ ಅಬಕಾರಿ ತೆರಿಗೆ, 15.02 ರೂ. ರಾಜ್ಯ ವ್ಯಾಟ್ ಮತ್ತು 3.59 ರೂ. ಡೀಲರ್ ಕಮಿಷನ್ ಸೇರಿದೆ. ಅದೇ ದಿನ ಡೀಸೆಲ್ ಬೆಲೆ ಲೀಟರ್‌ಗೆ 64.54 ರೂ. ಆಗಿತ್ತು. ಇದರಲ್ಲಿ ಕೇಂದ್ರ ಅಬಕಾರಿ ಸುಂಕ 13.83 ರೂ., ರಾಜ್ಯ ವ್ಯಾಟ್ 9.51 ರೂ. ಮತ್ತು ಡೀಲರ್ ಕಮಿಷನ್ 2.53 ರೂ. ಆಗಿದೆ ಎಂದು ಶುಕ್ಲಾ ತಿಳಿಸಿದ್ದಾರೆ. ಕಳೆದ ವಿತ್ತ ವರ್ಷದಲ್ಲಿ ಕೇಂದ್ರ ಪೆಟ್ರೋಲ್ ಮೇಲೆ 73,516.8 ಕೋಟಿ ರೂ. ಮತ್ತು ಡೀಸೆಲ್ ಮೇಲೆ 1.5 ಲಕ್ಷ ಕೋಟಿ ರೂ. ಅಬಕಾರಿ ಸುಂಕ ಸಂಗ್ರಹಿಸಿದೆ ಎಂದು ಸಚಿವರು ಲೋಕಸಭೆಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News