ಧನಾತ್ಮಕ ಚಿಂತನೆಯಿಂದ ಸಾಧನೆ ಮಾಡಲು ಸಾಧ್ಯ: ಎಸ್ಪಿ ನಿಂಬರಗಿ

Update: 2018-12-22 15:12 GMT

ಕುಂದಾಪುರ, ಡಿ. 22: ವಿದ್ಯಾರ್ಥಿ ಜೀವನದಲ್ಲಿ ಗುರಿ ಮುಖ್ಯ. ಎದುರಾಗುವ ಟೀಕೆಗಳನ್ನು ಋಣಾತ್ಮಕವಾಗಿ ಪರಿಗಣಿಸದೆ ಧನಾತ್ಮಕವಾಗಿ ತೆಗೆದುಕೊಳ್ಳ ಬೇಕು. ಆಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹೇಳಿದ್ದಾರೆ.

ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಾರ್ಷಿಕೋತ್ಸವ ಸಮಾರಂಭ ‘ವಿಕಾಸ 21’ರಲ್ಲಿ ಮುಖ್ಯ ಅತಿಥಿಯಾಗಿ ಅವರು ಶನಿವಾರ ಮಾತನಾಡುತಿ ದ್ದರು.

ತಂದೆ- ತಾಯಿ, ದೇಶಪ್ರೇಮ, ಯೋಧರಿಗೆ ಗೌರವ ಕೊಡುವ ಕೆಲಸ ಮಾಡಬೇಕು. ಬಸವಣ್ಣ, ಗಾಂಧೀಜಿ, ಅಂಬೇಡ್ಕರ್‌ರಂತಹ ಮಹಾನ್ ವ್ಯಕ್ತಿಗಳ ಆದರ್ಶವನ್ನು ಪಾಲಿಸಬೇಕು. ಶಾಲಾ ಕಾಲೇಜುಗಳಲ್ಲಿ ಪೋಕ್ಸೋ ಕಾಯ್ದೆ, ಮಾದಕ ವ್ಯಸನದಿಂದ ಉಂಟಾಗುವ ದುಷ್ಪರಿಣಾಮ ಹಾಗೂ ಸಂಚಾರಿ ನಿಯಮ ಪಾಲನೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಬೇಕು ಎಂದರು.

ಹಾಜಿ ಕೆ.ಮೊಹಿದೀನ್ ಬ್ಯಾರಿ ಎಜುಕೇಶನ್ ಟ್ರಸ್ಟ್‌ನ ಆಡಳಿತ ವಿಶ್ವಸ್ಥ ಸಯ್ಯದ್ ಮುಹಮ್ಮದ್ ಬ್ಯಾರಿ ಮಾತನಾಡಿ, ಜೀವನದಲ್ಲಿ ಸತ್ಯ, ನ್ಯಾಯ, ಒಳ್ಳೆಯ ಗುಣ ಹಾಗೂ ಪ್ರಾಮಾಣಿಕ ಸಂಪಾದನೆ ಬಹಳ ಮುಖ್ಯ. ಈ ನಾಲ್ಕು ಮೌಲ್ಯಗಳನ್ನು ಬದುಕಿನ ಕೊನೆಯವರೆಗೂ ಕಾಪಾಡಿಕೊಳ್ಳಬೇಕು. ಮಾನವೀಯ ಮೌಲ್ಯಗಳು ಹೆಚ್ಚಾಗಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಎಡ್ ಪರೀಕ್ಷೆಯಲ್ಲಿ ಮಂಗಳೂರು ವಿವಿಗೆ ಪ್ರಥಮ ರ್ಯಾಂಕ್ ಪಡೆದ ಚಂದ್ರಿಕಾ, ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿವಾನಂದ ಚುಂಬಣ್ಣ ನವರ್, ವಾಲಿಬಾಲ್‌ ಪಟು ಮಹಮ್ಮದ್ ರಿಝ್ವಾನ್, ಕರಾಟೆಪಟು ಮಹಮ್ಮದ್ ಅಹಾದ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾರಿ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಅಬ್ದುಲ್ ರಹ್ಮಾನ್ ವಹಿಸಿದ್ದರು.

ವೇದಿಕೆಯಲ್ಲಿ ವಿಶ್ವಸ್ಥ ಮಂಡಳಿಯ ಅಶ್ರಫ್ ಬ್ಯಾರಿ, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಸಮೀರ್, ಬಿ.ಎಡ್ ಕಾಲೇಜಿನ ಪ್ರಾಂಶುಪಾಲ ಸಿದ್ದಪ್ಪ ಕೆ.ಎಸ್., ಡಿ.ಎಡ್ ಕಾಲೇಜಿನ ಪ್ರಾಂಶುಪಾಲರಾದ ಫಿರ್ದೌಸ್, ಪುರಸಭಾ ಸದಸ್ಯರಾದ ಅಶ್ಫಕ್ ಕೋಡಿ, ಕಮಲಾ, ವಿವಿಧ ಬ್ಯಾರೀಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಸುಮಿತ್ರಾ, ರೆಹನಾ ಬೇಗಂ, ಜಯಂತಿ, ರೇಶ್ಮಾ ಡಿಸೋಜ, ಶಿಕ್ಷಕ ರಕ್ಷಕ ಸಂಘದ ಶಿವಾನಂದ ಮೊದಲಾದವರು ಉಪಸ್ಥಿತರಿದ್ದರು.

ಉಪನ್ಯಾಸಕ ಸಂದೀಪ್ ಕುಮಾರ್ ಸ್ವಾಗತಿಸಿದರು. ಜಯಶೀಲ ಶೆಟ್ಟಿ ವಂದಿಸಿದರು. ಸುನೀತಾ, ರಕ್ಷಿತಾ ಬಿ.ಶೆಟ್ಟಿ, ಭಾರತಿ, ಕಾವ್ಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News