×
Ad

ಕಲಾಪ್ರಕಾರಗಳಲ್ಲಿ ತೊಡಗಿಸಿಕೊಂಡರೆ ನೆಮ್ಮದಿಯ ಜೀವನ ಸಾಧ್ಯ: ರಮಾನಾಥ ರೈ

Update: 2018-12-22 18:35 IST

ಬಂಟ್ವಾಳ, ಡಿ. 22: ಕಲಾಪ್ರಕಾರಗಳಲ್ಲಿ ತೊಡಗಿಸಿಕೊಂಡರೆ, ಮನುಷ್ಯನ ಜೀವನ ಸುಖ, ನೆಮ್ಮದಿಯಿಂದ ಇರಲು ಸಾಧ್ಯ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಅಭಿಪ್ರಾಯಪಟ್ಟಿದ್ದಾರೆ.

ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಬಿ.ಸಿ.ರೋಡಿನ ಗೋಲ್ಡನ್ ಪಾರ್ಕ್ ಅಸೋಸಿಯೇಟ್ಸ್ ಮೈದಾನದಲ್ಲಿ ಡಿ.30ರವರೆಗೆ ನಡೆಯಲಿರುವ ಕರಾವಳಿ ಕಲೋತ್ಸವ 2018ವನ್ನು ಶುಕ್ರವಾರ ರಾತ್ರಿ ಉದ್ಘಾಟಿಸಿ ಅವರು ಮಾತನಾಡಿದರು. ಇದೇ ವೇಳೆ ಅವರು ಹಿರಿಯ ರಂಗಕರ್ಮಿ ಮಂಜು ವಿಟ್ಲ ಅವರನ್ನು ಕರಾವಳಿ ಸೌರಭ ಪ್ರಶಸ್ತಿ ನೀಡಿ ಸನ್ಮಾನಿಸಿದರು.

ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್ ಅವರು ವಸ್ತುಪ್ರದರ್ಶನ ಮಳಿಗೆ, ಅಮ್ಯೂಸ್‍ಮೆಂಟ್ ಪಾರ್ಕ್ ಉದ್ಘಾಟಿಸಿ ಮಾತನಾಡಿ, ಕಲೋತ್ಸವದಂಥ ಕಾರ್ಯಕ್ರಮಗಳು ಜನರನ್ನು ಬೆಸೆಯುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ ಎಂದರು. ಈ ಸಂದರ್ಭ ಚಿಣ್ಣರ ಪ್ರಶಸ್ತಿಯನ್ನು ಭಾಗ್ಯಶ್ರೀ ಅವರಿಗೆ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಕಲೋತ್ಸವದ ಅಧ್ಯಕ್ಷ ಸುದರ್ಶನ ಜೈನ್, ಚಿಣ್ಣರ ಲೋಕದ ಸ್ಥಾಪಕ ಮೋಹನದಾಸ ಕೊಟ್ಟಾರಿ, ಗೌರವಾಧ್ಯಕ್ಷ ಪಿ.ಜಯರಾಮ ರೈ, ಗೋಲ್ಡನ್ ಪಾರ್ಕ್ ಅಸೋಸಿಯೇಟ್ಸ್ ಆಡಳಿತ ಪಾಲುದಾರ ಅಶೋಕ್ ಕುಮಾರ್ ಬರಿಮಾರ್, ಚಿಣ್ಣರೋತ್ಸವದ ಅಧ್ಯಕ್ಷ ಅಭಿಷೇಕ್, ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಉಪಸ್ಥಿತರಿದ್ದರು. ಬಿ.ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.

30ರವರೆಗೆ ವೈವಿಧ್ಯಮಯ ಕಾರ್ಯಕ್ರಮ

ಪ್ರಸಿದ್ಧ ತಂಡಗಳ ನಾಟಕ ಪ್ರದರ್ಶನ, ಪ್ರತಿಭಾಸಂಪನ್ನ ಚಿಣ್ಣರಿಂದ ನೃತ್ಯ, ಗಾಯನ, ಪ್ರತಿದಿನವೂ ವೈವಿಧ್ಯಮಯ ಕಾರ್ಯಕ್ರಮ, ರಂಗಭೂಮಿ, ಕಲೆ, ಸಾಹಿತ್ಯ, ಸಾಂಸ್ಕೃತಿಕ ರಂಗದ ಸಾಧಕರಿಗೆ ಸನ್ಮಾನ, ಪ್ರಸಿದ್ಧ ಸಂಗೀತ ನಿರ್ದೇಶಕ ಮಣಿಕಾಂತ ಕದ್ರಿ ಸಹಿತ ಚಿತ್ರರಂಗದ ಗಣ್ಯರ ಆಗಮನ ಕಲೋತ್ಸವದಲ್ಲಿದೆ.

ಡಿ. 23ರಂದು ಸಂಜೆ 4ಕ್ಕೆ ರಾಜ್ಯಮಟ್ಟದ ಫಿಲ್ಮ್ ಡ್ಯಾನ್ಸ್ ಸ್ಪರ್ಧೆ, ಗುರುವಂದನಾ ಕಾರ್ಯಕ್ರಮ, 8:30ಕ್ಕೆ ನೃತ್ಯರೂಪಕ ತುಳುನಾಡ ಐಸಿರಿ ನಡೆಯಲಿದೆ. ಡಿ. 24ರಂದು ಸಂಜೆ 6ಕ್ಕೆ ಭರತ ನೃತ್ಯವೈಭವ, ಸಂಜೆ 7ಕ್ಕೆ ನಾಟಕೋತ್ಸವ ಉದ್ಘಾಟನೆ ನಡೆಯಲಿದ್ದು, ಡಿ. 25ರಂದು ಮಧ್ಯಾಹ್ನ 2ಕ್ಕೆ ಕರಾವಳಿ ಝೇಂಕಾರ ಜಿಲ್ಲಾ ಮಟ್ಟದ (ಸಿಂಗಾರಿ ಮೇಳ) ಚೆಂಡೆ ಸ್ಪರ್ಧೆ, ಸಂಜೆ 7ಕ್ಕೆ ಸಭಾ ಕಾರ್ಯಕ್ರಮ, ಡಿ. 26, 27, 28, 29ರಂದು ಸಂಜೆ 6ಕ್ಕೆ ತುಳು ಸಿನಿಮಾಲೋಕದ ತಾರಾಸಂಗಮ ಕಲೋತ್ಸವದಲ್ಲಿರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News