×
Ad

ಕರಾಟೆಯಿಂದ ಆತ್ಮವಿಶ್ವಾಸ ಇಮ್ಮಡಿಗೊಳ್ಳುತ್ತದೆ: ಶಾಸಕ ಸುನಿಲ್ ನಾಯ್ಕ

Update: 2018-12-22 20:05 IST

ಭಟ್ಕಳ, ಡಿ. 22: ಕರಾಟೆಗೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರೋತ್ಸಾಹವಿದ್ದು ಇದು ವ್ಯಕ್ತಿಯ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸುತ್ತದೆ ಎಂದು ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಸುನಿಲ್ ನಾಯ್ಕ ಹೇಳಿದರು.

ಅವರು ಶುಕ್ರವಾರ ಇಲ್ಲಿನ ಆಸರಕೇರಿಯ ಶ್ರೀ ವೆಂಕಟರಮಣ ಸಭಾ ಭವನದಲ್ಲಿ ಶೋಟೋಕಾನ್ ಕರಾಟೆ ಇಸ್ಟಿಟ್ಯೂಟ್‍ನ ಪ್ರಥಮ ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್‍ಶಿಪ್-2018 ಉದ್ಘಾಟಿಸಿ ಮಾತನಾಡಿದರು.

ಕರಾಟೆ ಕಲೆಯು ಒಂದು ಜೀವ ರಕ್ಷಕ ಕಲೆಯಾಗಿದ್ದು ಇದಕ್ಕೆ ಆತ್ಮ ವಿಶ್ವಾಸ ಮುಖ್ಯವಾಗಿದೆ. ಆತ್ಮವಿಶ್ವಾಸವನ್ನು ಕರಾಟೆ ಕಲೆ ಇಮ್ಮಡಿಗೊಳಿಸುತ್ತದೆ. ಕರಾಟೆ ಕಲೆಯನ್ನು ಕಲಿತವರು ಅತ್ಯಂತ ಹೆಚ್ಚು ಆತ್ಮ ವಿಶ್ವಾಸದಿಂದ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗುವುದು. ಈ ಹಿಂದೆ ಕರಾಟೆ ಶಾಲೆಯನ್ನು ಆರಂಭಿಸಿ ಭಟ್ಕಳದಲ್ಲಿ ಕರಾಟೆಯನ್ನು ಪರಿಚಯಿಸಿದ ವಾಸುದೇವ ನಾಯ್ಕ ಅವರು ತನಗೂ ಹಲವಾರು ಬಾರಿ ಕರಾಟೆಗೆ ಸೇರಿಕೊಳ್ಳುವಂತೆ ಮನವಿ ಮಾಡಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶೋಟೋಕಾನ್ ಕರಾಟೆ ಇನ್ಸ್‍ಸ್ಟಿಟ್ಯೂಟ್‍ನ ಅಧ್ಯಕ್ಷ ಸುರೇಶ ನಾಯ್ಕ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ ಮಾತನಾಡಿ, ಶುಭ ಹಾರೈಸಿದರು. 

ಅತಿಥಿಗಳಾದ ಮುಖ್ಯ ರೆಫ್ರಿ ಹನ್ಷಿ ಕೆ.ವಿ. ರವಿ, ಡಿ.ವೈ.ಎಸ್.ಪಿ. ವೆಲೆಂಟೈನ್ ಡಿಸೋಜ, ವಿಶೇಷ ಆಹ್ವಾನಿತರಾದ ವಿಜಯವಾಣಿ ಸಂಪಾದಕರ ವಿವೇಕ ಮಹಾಲೆ, ಅತಿಥಿಗಳಾದ ಉ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ, ಅಟೋ ರಕ್ಷಾ ಯೂನಿಯನ್ ಅಧ್ಯಕ್ಷ ಕೃಷ್ಣಾ ನಾಯ್ಕ ಆಸರಕೇರಿ, ಗೌರವಾಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿದರು.

ವೇದಿಕೆಯಲ್ಲಿ ಮುಖ್ಯ ತರಬೇತುದಾರ ಸಿ. ರಾಜನ್, ವಿದ್ಯಾಂಜಲಿ ಪಬ್ಲಿಕ್ ಸ್ಕೂಲ್‍ನ ಪ್ರಾಂಶುಪಾಲ ಜ್ಯೋತಿಷ್ ಎಂ., ಸಂಸ್ಥೆಯ ಗೌರವಾಧ್ಯಕ್ಷ ಕಿರಣ್ ಶ್ಯಾನಭಾಗ, ಮುಸ್ಲಿಂ ಯುತ್ ಫೆಡರೇಶನ್ ಅಧ್ಯಕ್ಷ ಇಮ್ತಿಯಾಜ್ ಉದ್ಯಾವರ್ ಮುಂತಾದವರು ಉಪಸ್ಥಿತರಿದ್ದರು. 

ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‍ಶಿಪ್-2018ರಲ್ಲಿ ರಾಷ್ಟ್ರದ 7 ರಾಜ್ಯಗಳಿಂದ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಂಜುನಾಥ ನಾಯ್ಕ ಪ್ರಾರ್ಥಿಸಿದರು. ಶಿಕ್ಷಕ ನಾರಾಯಣ ನಾಯ್ಕ ನಿರೂಪಿಸಿ, ವಂದಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News