×
Ad

ಮಂಗಳೂರು: ಶಕ್ತಿ ರೆಸಿಡೆನ್ಸಿಯಲ್ ಸ್ಕೂಲ್-ಪಿಯು ಕಾಲೇಜು ವಾರ್ಷಿಕೋತ್ಸವ

Update: 2018-12-22 21:39 IST

ಮಂಗಳೂರು, ಡಿ. 22: ಗೋಪಾಲಕೃಷ್ಣ ಪ್ರಿ-ಸ್ಕೂಲ್, ಶಕ್ತಿ ರೆಸಿಡೆನ್ಸಿಯಲ್ ಸ್ಕೂಲ್ ಹಾಗೂ ಶಕ್ತಿ ಪಿಯು ಕಾಲೇಜುಗಳ ವಾರ್ಷಿಕೋತ್ಸವ ಕಾರ್ಯಕ್ರಮವು ನಗರದ ಶಕ್ತಿನಗರದ ಗೋಪಾಲಕೃಷ್ಣ ದೇವಸ್ಥಾನದ ಬಳಿಯ ಕಾಲೇಜು ಆವರಣದಲ್ಲಿ ಶನಿವಾರ ಸಂಜೆ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಡುಪಿಯ ಡಾ.ಟಿಎಂಎ ಪೈ ಕಾಲೇಜಿನ ಸಂಯೋಜಕ ಡಾ.ಮಹಾಬಲೇಶ್ವರ ರಾವ್, ಶಕ್ತಿ ರೆಸಿಡೆನ್ಸಿಯಲ್ ಶಾಲೆ ಮತ್ತು ಪಿಯು ಕಾಲೇಜುಗಳಲ್ಲಿ ಶಿಕ್ಷಣ ಪಡೆಯಲು ರಾಜ್ಯದ ವಿವಿಧೆಡೆಯಿಂದ ವಿದ್ಯಾರ್ಥಿಗಳು ಬರುತ್ತಿದ್ದು, ಅವರಿಗೆ ಮಾನವೀಯ ಮೌಲ್ಯ, ವಿವೇಕಗಳನ್ನು ಬೆಳೆಸುವಂತಹ ಕೆಲಸವಾಗಬೇಕು ಎಂದು ತಿಳಿಸಿದರು.

ಸಾಮಾಜಿಕ ಪದ್ಧತಿ, ಆಚಾರ-ವಿಚಾರಗಳು, ಆಲೋಚನಾ ರೀತಿಗಳೇ ಆಧುನಿಕೋತ್ತರ ಜಗತ್ತಿನಲ್ಲಿ ಸಾಕಷ್ಟು ಬದಲಾಗಿದೆ. ಹಿರಿಯರು ಹಿಂದಿನ ಕಾಲಕ್ಕೆ ಹೋಗಿ ಆಲೋಚಿಸಿದರೆ ಆಗಿನ ಕಾಲದಲ್ಲಿ ವಿದ್ಯಾಭ್ಯಾಸ ಮಾಡುವ ಕ್ರಮಕ್ಕೂ ಇಂದಿನ ಮಕ್ಕಳು ವಿದ್ಯಾಭ್ಯಾಸ ಮಾಡುವ ಕ್ರಮಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಕರಾವಳಿ ಪ್ರದೇಶದಲ್ಲಿ ಶಿಕ್ಷಣ ಪಡೆಯುವುದೇ ಕಷ್ಟಕರ ಎನ್ನುವ ದಿನಗಳಿದ್ದವು. ದ.ಕ. ಜಿಲ್ಲೆಯಲ್ಲಿ ವ್ಯಾಪಕ ಬಡತನವಿತ್ತು. ವಿದ್ಯುಚ್ಛಕ್ತಿಯ ಸೌಲಭ್ಯ ಮೊದಲೇ ಇರಲಿಲ್ಲ. ಸದ್ಯ ಅಂತಹ ಯಾವುದೇ ತೊಂದರೆಯಿಲ್ಲ. ವಿದ್ಯಾರ್ಥಿಗಳು ಒಳ್ಳೆಯ ರೀತಿಯಲ್ಲಿ ವಿದ್ಯಾಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು.

ಸ್ಪರ್ಧಾತ್ಮಕವಾಗಿ ಹೊಸ ಹೊಸ ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಳ್ಳುತ್ತಿವೆ. ಹಿಂದಿನ ಕಾಲದಲ್ಲಿ ಶಿಕ್ಷಣ ಸಂಸ್ಥೆಗಳೇ ಕಡಿಮೆ. ಉನ್ನತ ಶಿಕ್ಷಣ ಪಡೆಯಲು ಬೆಂಗಳೂರು, ಹೈದರಾಬಾದ್, ಚೆನ್ನೈ ಮತ್ತಿತರ ಬೃಹತ್ ನಗರಗಳಿಗೆ ತೆರಳಬೇಕಾಗಿತ್ತು. ವಿದ್ಯಾಭ್ಯಾಸ ಮಾಡಲು ಬೇಕಾದ ಆರ್ಥಿಕ ಬಲವೂ ಕಡಿಮೆ ಇತ್ತು. ಇಂತಹ ಕಷ್ಟಗಳನ್ನು ಅನುಭವಿಸಿದ್ದರಿಂದಲೇ ಬದುಕನ್ನು ಎದುರಿಸಲು ಸವಾಲು, ಧೈರ್ಯ, ಎದೆಗುಂದದ ಮನೋಭಾವದಿಂದ ಶಿಕ್ಷಣ ಪಡೆದುಕೊಳ್ಳುವಲ್ಲಿ ಯಶಸ್ವಿಯಾದ ಬಗ್ಗೆ ತಮ್ಮ ಕಾಲೇಜು ಶಿಕ್ಷಣದ ದಿನಗಳನ್ನು ನೆನಪಿಸಿಕೊಂಡರು.

ಸರಕಾರದಿಂದ ಶಾಲಾ ವಿದ್ಯಾರ್ಥಿಗಳಿಗಾಗಿ ಸಮವಸ್ತ್ರ, ಬಿಸಿಯೂಟ, ಕಬ್ಬಿಣದ ಮಾತ್ರೆ, ವೈದ್ಯಕೀಯ ಶುಶ್ರೂಷೆ, ಪಠ್ಯಪುಸ್ತಕ, ಸೈಕಲ್, ಶೂ-ಸಾಕ್ಸ್, ಶಿಷ್ಯ ವೇತನಗಳಂತಹ ಎಲ್ಲ ಸೌಲಭ್ಯಗಳನ್ನೂ ನೀಡಲಾಗಿದೆ. ಹೀಗಿದ್ದರೂ ವಿದ್ಯಾರ್ಥಿಗಳ ಕಲಿಕೆಯ ಬಗ್ಗೆ ನಿರಾಶಾಭಾವ ಮುಖಕ್ಕೆ ರಾಚುತ್ತಿದೆ. ಶಾಲಾ ಮಕ್ಕಳು ಮೂರು ಭಾಷೆಗಳನ್ನು ಕಲಿಯುತ್ತಾರೆ. ಆದರೆ ಅವರಲ್ಲಿ ಸಂವಹನದ ಕೊರತೆಯಿದೆ ಎಂದು ಹೇಳಿದರು.

ಜನದಟ್ಟಣೆಯಿಂದ ದೂರವಾಗಿ, ಪ್ರಶಾಂತ ವಾತಾವರಣದಿಂದ ಕೂಡಿದ ಪ್ರದೇಶದಲ್ಲಿ ವಿದ್ಯಾಸಂಸ್ಥೆಗಳನ್ನು ಕಟ್ಟಿದ ಸಂಸ್ಥೆಯ ಸಂಸ್ಥಾಪಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಮಂಗಳೂರು ಕ್ಯಾಂಪ್ಕೊದ ನಿರ್ದೇಶಕ ಕೃಷ್ಣಪ್ರಸಾದ್ ಮಾಡ್ತಿಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಕ್ತಿ ಕ್ರೀಡಾಕೂಟ ಹಾಗೂ ಶಕ್ತಿ ಫೆಸ್ಟ್‌ನಲ್ಲಿ ಭಾಗವಹಿಸಿ ವಿಜಯಶಾಲಿಯಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.

 ಕಾರ್ಯಕ್ರಮದಲ್ಲಿ ಎಂಆರ್‌ಪಿಎಲ್‌ನ ಮಾಜಿ ಉಪಾಧ್ಯಕ್ಷ ವಿ.ಕೆ.ತಾಳಿತ್ತಾಯ, ಶಕ್ತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಂಜಿತ್ ನಾಯ್ಕೆ, ಗೋಪಾಲಕೃಷ್ಣ ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ ಕೆ.ಸಿ.ನಾಯ್ಕಿ, ಗೋಪಾಲಕೃಷ್ಣ ದೇವಸ್ಥಾನದ ಟ್ರಸ್ಟಿ ಸಗುಣಾ ಸಿ. ನಾಯ್ಕಿ, ಡಾ.ಮುರಳಿ ನಾಯ್ಕಿ, ನಸೀಮಾಬಾನು, ಮುಖ್ಯ ಸಲಹೆಗಾರ ರಮೇಶ್ ಕೆ., ನಯನಾ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ವಾರ್ಷಿಕ ವರದಿಯನ್ನು ಗೋಪಾಲಕೃಷ್ಣ ಪ್ರಿ-ಸ್ಕೂಲ್‌ನ ಸಂಯೋಜಕಿ ನೀಮಾ ಸಕ್ಸೇನಾ, ಶಕ್ತಿ ರೆಸಿಡೆನ್ಸಿಯಲ್ ಸ್ಕೂಲ್‌ನ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ. ಹಾಗೂ ಶಕ್ತಿ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರಭಾಕರ್ ಜಿ.ಎಸ್. ವಾಚಿಸಿದರು. ಸಂಸ್ಥೆಯ ಅಡ್ಮಿನಿಸ್ಟ್ರೇಟರ್ ಬೈಕಾಡಿ ಜನಾರ್ದನ ಆಚಾರ್ ಸ್ವಾಗತಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News