ಕುತ್ಲೂರು: ಡಿ.23ರಂದು ಪತ್ರಕರ್ತರ ಗ್ರಾಮವಾಸ್ತವ್ಯ

Update: 2018-12-22 16:52 GMT

ವೇಣೂರು, ಡಿ. 22: ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ತಾ. ಪತ್ರಕರ್ತರ ಸಂಘ, ದ.ಕ. ಜಿಲ್ಲಾಡಳಿತ, ದ.ಕ.ಜಿ.ಪಂ., ದ.ಕ. ಪೊಲೀಸ್ ಇಲಾಖೆ ಹಾಗೂ ನಾರಾವಿ ಗ್ರಾ.ಪಂ. ಸಹಭಾಗಿತ್ವದಲ್ಲಿ ಕುತ್ಲೂರಿನಲ್ಲಿ ಡಿ.23ರಂದು ನಡೆಯಲಿರುವ ಪತ್ರಕರ್ತರ ಗ್ರಾಮವಾಸ್ತವ್ಯ ಹಾಗೂ ಎ.ಜೆ. ಆಸ್ಪತ್ರೆಯ ಸಹಯೋಗದಲ್ಲಿ ನಡೆಯುವ ಉಚಿತ ವೈದ್ಯಕೀಯ ಶಿಬಿರಕ್ಕೆ ಕುತ್ಲೂರು ಶಾಲೆಯಲ್ಲಿ ಸರ್ವ ವ್ಯವಸ್ಥೆ ಏರ್ಪಡಿಸಲಾಗಿದೆ. ಶನಿವಾರ ಬೆಳ್ತಂಗಡಿ ಪ್ರಭಾರ ತಹಶೀಲ್ದಾರ್ ಅನಂತ ಶಂಕರ ಅವರು ಭೇಟಿ ನೀಡಿದರು.

ಕಳೆದ ಡಿ.19ರಂದು ಪುತ್ತೂರು ಸಹಾಯಕ ಆಯುಕ್ತರ ಸಮ್ಮುಖದಲ್ಲಿ ತಾಲೂಕು ಮಟ್ಟದ ಅಧಿಕಾರಗಳು, ಜಿಲ್ಲಾ ಹಾಗೂ ತಾಲೂಕು ಪತ್ರಕರ್ತರ ಸಂಘದ ಸದಸ್ಯರು ಕುತ್ಲೂರಿನಲ್ಲಿ ಪೂರ್ವಭಾವಿ ಸಭೆ ಕರೆದು ಕುತ್ಲೂರು ಗ್ರಾಮವನ್ನು ಗ್ರಾಮವಾಸ್ತವ್ಯಕ್ಕೆ ಅಂತಿಮಗೊಳಿಸಿದ್ದರು.

ಅರ್ಜಿ ಸ್ವೀಕಾರ
ತಾ. ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿರುತ್ತಾರೆ. ಗ್ರಾಮಸ್ಥರ ವಿವಿಧ ಇಲಾಖೆಗಳಿಗೆ ಸಂಬಂಧಿತ ಸಮಸ್ಯೆಗಳ ಅಹವಾಲು ಅರ್ಜಿಯನ್ನು ದ್ವಿಪ್ರತಿಯಲ್ಲಿ ಪಡೆಯಲಾಗುತ್ತದೆ. ಸ್ಥಳದಲ್ಲೇ ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸಲು ಶ್ರಮವಹಿಸಲಿದ್ದಾರೆ. ಒಂದು ಪ್ರತಿಯನ್ನು ತಾ. ಪತ್ರಕರ್ತರ ಸಂಘ ಪಡೆದು ಜಿಲ್ಲಾ ಸಂಘಕ್ಕೆ ರವಾಣಿಸಿ ಜಿಲ್ಲಾ ಮತ್ತು ರಾಜ್ಯ ಮಟ್ಟದ ಇಲಾಖೆಯಲ್ಲಿ ಗ್ರಾಮಸ್ಥರ ಸಮಸ್ಯೆಯನ್ನು ಪರಿಹರಿಸಲು ಶ್ರಮಿಸಲಾಗುತ್ತದೆ. 

ಸ್ಥಳದಲ್ಲೇ ಆಧಾರ್ ಯಂತ್ರ

ಶನಿವಾರ ಕುತ್ಲೂರಿಗೆ ಆಗಮಿಸಿದ ತಹಶೀಲ್ದಾರ್ ಅವರು ಸ್ಥಳದಲ್ಲೇ ಆಧಾರ್ ತಿದ್ದುಪಡಿ ಹಾಗೂ ನೂತನ ಅರ್ಜಿ ಸ್ವೀಕಾರಕ್ಕೆ ಅಧಿಕಾರಿಗಳಿಗೆ ಸೂಚಿಸಿದರು. ಈ ಹಿನ್ನೆಲೆಯಲ್ಲಿ 2 ಆಧಾರ್ ಯಂತ್ರಗಳು ಸ್ಥಳದಲ್ಲೇ ಕಾರ್ಯಾಚರಿಸಲಿದೆ. ವೃದ್ಯಾಪ್ಯ ವೇತನಕ್ಕೆ ಫಲಾನುಭವಿಗಳ ಬೆರಳಚ್ಚು ಸ್ವೀಕಾರವಾಗುವುದಿಲ್ಲ ಎಂಬ ಅಧಿಕಾರಿಗಳ ಮಾಹಿತಿಗೆ ತಹಶೀಲ್ದಾರ್ ಅವರು ಸ್ಥಳದಲ್ಲೇ ಪಂಚಾಯತ್‍ರಾಜ್ ಎಂಜಿನಿಯರ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನರೇಂದ್ರ ಅವರನ್ನು ಸಂಪರ್ಕಿಸಿದ್ದು, ಕೇವಲ ಐರಿಸ್ ಯಂತ್ರದ ಮೂಲಕ ನಮೂದಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. 

ನಾರಾವಿ ಗ್ರಾ.ಪಂ. ಆಡಳಿತ ಮಂಡಳಿ ಸ್ಥಳದಲ್ಲಿ ಅತಿಥಿಗಳಿಗೆ ಕೊಠಡಿ, ಸಭಾವೇದಿಕೆ, ನೀರಿನ ವ್ಯವಸ್ಥೆ, ಸ್ವಚ್ಚತೆಗೆ ಆದ್ಯತೆ, ಪಾರ್ಕಿಂಗ್, ಅರ್ಜಿ ಸ್ವೀಕಾರ ಕೌಂಟರ್, ಆರೋಗ್ಯ ತಪಾಸಣೆ ಕೇಂದ್ರಕ್ಕೆ ಕೌಂಟರ್ ವ್ಯವಸ್ಥೆ ನಿರ್ವಹಿಸಿದೆ. ಬೆಳಗ್ಗೆ ಉಪಹಾರ, ಮಧ್ಯಾಹ್ನ ಊಟ, ಸಂಜೆ ಕಾಫಿಗೆ ವ್ಯವಸ್ಥೆ ಮಾಡಲಾಗಿದೆ.

ಪತ್ರಕರ್ತರ ಗ್ರಾಮ ವಾಸ್ತವ್ಯ ಮತ್ತು ಗ್ರಾಮಸ್ಥ ಹಿರಿಯರೊಂದಿಗೆ ಸಂವಾದ ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡಲಾಗಿದೆ. ವೇಣೂರು ಕಂದಾಯ ನಿರೀಕ್ಷಕ ಪಾವಡಪ್ಪ ದೊಡ್ಡಮನಿ, ನಾರಾವಿ ಗ್ರಾ.ಪಂ. ಅಧ್ಯಕ್ಷ ರವೀಂದ್ರ ಪೂಜಾರಿ, ಉಪಾಧ್ಯಕ್ಷೆ ಯಶೋದ, ಅಭಿವೃದ್ಧಿ ಅಧಿಕಾರಿ ರವಿ ಎಸ್. ಎಂ., ಕಾರ್ಯದರ್ಶಿ ನಿರ್ಮಲ್ ಕುಮಾರ್, ಗ್ರಾಮ ಲೆಕ್ಕಿಗ ನಾರಾಯಣ ಕುಲಾಲ್, ಗ್ರಾಮ ಸಹಾಯಕ ನಾರಾವಿ ಗ್ರಾ.ಪಂ. ಸದಸ್ಯರಾದ ಕೃಷ್ಣಪ್ಪ ಪೂಜಾರಿ, ಸಂತೋಷ್, ಪ್ರಮೀಳಾ ಭಟ್, ಮಾಜಿ ತಾ.ಪಂ. ಸದಸ್ಯ ಜೀವಂಧರ ಕುಮಾರ್, ಕುತ್ಲೂರು ಶಾಲಾ ಮುಖ್ಯ ಶಿಕ್ಷಕ ಕೃಷ್ಣ ನಾಯ್ಕ, ಗ್ರಾಮ ಸಹಾಯಕ ದೇವಪ್ಪ ಹಾಗೂ ಮತ್ತಿತರು ಉಪಸ್ಥಿತರಿದ್ದು, ವ್ಯವಸ್ಥೆಗೆ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News