ಜಾರ್ಖಂಡ್ ಜಾನುವಾರು ವ್ಯಾಪಾರಿ ಹತ್ಯೆ ಪ್ರಕರಣ: ಎಂಟು ಮಂದಿಗೆ ಜೀವಾವಧಿ ಶಿಕ್ಷೆ

Update: 2018-12-22 17:44 GMT

ರಾಂಚಿ, ಡಿ.22: ಜಾನುವಾರು ವ್ಯಾಪಾರಿಗಳನ್ನು ಥಳಿಸಿ ಹತ್ಯೆಗೈದ ಪ್ರಕರಣದಲ್ಲಿ ಎಂಟು ಮಂದಿಗೆ ಜಾರ್ಖಂಡ್‌ನ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ತಲಾ 25 ಸಾವಿರ ರೂ. ದಂಡ ವಿಧಿಸಿದೆ.

 2016ರ ಮಾರ್ಚ್ 17ರಂದು ಜಾನುವಾರು ವ್ಯಾಪಾರಿ ಮಜ್ಲುಮ್ ಅನ್ಸಾರಿ (32 ವರ್ಷ) ಹಾಗೂ ಇಮ್ತಿಯಾಝ್ ಖಾನ್(12 ವರ್ಷ) ಅವರ ಮೃತದೇಹ ಬಲುಮತ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇವರು ತಮ್ಮ ಜಾನುವಾರುಗಳನ್ನು ಸಮೀಪದ ಗ್ರಾಮದಲ್ಲಿ ನಡೆಯುತ್ತಿದ್ದ ಜಾನುವಾರು ಜಾತ್ರೆಯಲ್ಲಿ ಮಾರಲು ಕೊಂಡೊಯ್ಯುತ್ತಿದ್ದರು. ಆಗ ಗುಂಪೊಂದು ಇವರ ಮೇಲೆ ದಾಳಿ ನಡೆಸಿ ಥಳಿಸಿ ಹತ್ಯೆಗೈದು ಬಳಿಕ ಮರಕ್ಕೆ ನೇತು ಹಾಕಿದ್ದಾರೆ ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದರು. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಐವರು ಆರೋಪಿಗಳಾದ ಮನೋಜ್ ಸಾಹು, ಪ್ರಮೋದ್ ಸಾಹೊ, ಅವಧೇಶ್ ಸಾಹೊ, ಮಿಥಿಲೇಶ್ ಸಾಹೊ ಮತ್ತು ಮನೋಜ್ ಕುಮಾರ್ ಸಾಹೊರನ್ನು ಬಂಧಿಸಲಾಗಿತ್ತು. ಕೆಲ ದಿನಗಳ ಬಳಿಕ ಉಳಿದ ಆರೋಪಿಗಳಾದ ಅರುಣ್ ಸಾಹೊ, ಸಹದೇವ್ ಸೋನಿ ಮತ್ತು ಬಿಶಾಲ್ ತಿವಾರಿ ಸ್ಥಳೀಯ ನ್ಯಾಯಾಲಯದಲ್ಲಿ ಶರಣಾಗಿದ್ದರು.

 ಪ್ರಕರಣದ ವಿಚಾರಣೆ ನಡೆಸಿದ ಪ್ರಥಮ ದರ್ಜೆ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News