×
Ad

ರಾಜ್ಯದ ಮೀನಿಗೆ ಗೋವಾ ಹೇರಿದ ನಿಷೇಧ ತೆರವಿಗೆ ಆಗ್ರಹ

Update: 2018-12-23 17:28 IST

ಮಂಗಳೂರು, ಡಿ.23: ಗೋವಾ ಸರಕಾರವು ರಾಜ್ಯದ ಮೀನು ಸರಬರಾಜಿಗೆ ಹೇರಿರುವ ನಿಷೇಧದ ತೆರವಿಗೆ ರಾಜ್ಯ ಸರಕಾರ ಸೂಕ್ತ ಕ್ರಮ ಜರುಗಿಸಬೇಕು ಎಂದು ದ.ಕ.ಜಿಲ್ಲಾ ಗಿಲ್‌ನೆಟ್ ಮೀನುಗಾರರ ಸಂಘದ ಸಭೆಯು ಆಗ್ರಹಿಸಿದೆ.

ನಗರದ ಬಂದರ್ ದಕ್ಕೆಯಲ್ಲಿರುವ ಟ್ರಾಲ್‌ಬೋಟ್ ಮೀನುಗಾರರ ಸಂಘದ ಕಚೇರಿಯಲ್ಲಿ ಶನಿವಾರ ನಡೆದ ಗಿಲ್‌ನೆಟ್ ಮೀನುಗಾರರ ಸಂಘದ ಸಭೆಯಲ್ಲಿ ಈ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಯಿತಲ್ಲದೆ, ಗೋವಾದ ನಿಷೇಧದಿಂದ ರಾಜ್ಯದ ಮೀನುಗಾರರಿಗೆ ತುಂಬಾ ಅನ್ಯಾಯವಾಗಿದೆ. ಮೊದಲೇ ಅನೇಕ ಸಮಸ್ಯೆಗಳಿಗೆ ತುತ್ತಾಗಿರುವ ಮೀನುಗಾರರಿಗೆ ಗೋವಾ ಸರಕಾರದ ಕ್ರಮವು ಸಾಕಷ್ಟು ನಷ್ಟವನ್ನು ಉಂಟು ಮಾಡಿವೆ. ಹಾಗಾಗಿ ರಾಜ್ಯ ಸರಕಾರವು ಮುತುವರ್ಜಿ ವಹಿಸಿಕೊಂಡು ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಆಲಿ ಹಸನ್ ವಹಿಸಿದ್ದರು. ಮೀನುಗಾರರಿಗೆ ಸಬ್ಸಿಡಿ ದರದಲ್ಲಿ ವಿತರಿಸಲಾಗುವ ಸೀಮೆಎಣ್ಣೆಯನ್ನು ವರ್ಷಪೂರ್ತಿ ನೀಡಲು ರಾಜ್ಯ ಸರಕಾರವನ್ನು ಆಗ್ರಹಿಸಿರುವ ಸಂಘದ ಪದಾಧಿಕಾರಿಗಳು, ಬಂದರು-ದಕ್ಕೆ ಪರಿಸರದಲ್ಲಿ ಸಬ್ಸಿಡಿ ದರದಲ್ಲಿ ಸೀಮೆಎಣ್ಣೆ ಪಡೆಯುವ ಬಂಕ್‌ಗಳಲ್ಲಿ ಆಗುತ್ತಿರುವ ಸಮಸ್ಯೆಯನ್ನು ನಿವಾರಿಸಲು ಮೀನುಗಾರಿಕಾ ಇಲಾಖೆಯು ಮುಂದಾಗಬೇಕು ಎಂದು ಒತ್ತಾಯಿಸಿದೆ.

ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಸುಭಾಷ್ ಕಾಂಚನ್, ಪ್ರಾಣೇಶ್, ಪ್ರಧಾನ ಕಾರ್ಯದರ್ಶಿ ಬಿ.ಎ.ಬಶೀರ್, ಕಾರ್ಯದರ್ಶಿಗಳಾದ ಹೈದರ್, ರಿಯಾಝ್, ಕೋಶಾಧಿಕಾರಿ ಸುನೀಲ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News