ಅದೃಶ್ಯವಾದ ಅಸ್ಪೃಶ್ಯತೆ ಬಹಳಷ್ಟು ಅಪಾಯಕಾರಿ: ದಿನೇಶ್ ಅಮೀನ್ ಮಟ್ಟು
ಉಡುಪಿ, ಡಿ.23: ಸಂವಿಧಾನಗದತ್ತವಾದ ಕಾನೂನಿನ ಬಲದಿಂದ ಇಂದು ಅಸ್ಪಶ್ಯತೆ ಕಡಿಮೆ ಆಗಿದೆಯೇ ಹೊರತು ಜನರ ಪರಿವರ್ತನೆಯಿಂದ ಅಲ್ಲ. ಕಣ್ಣಿಗೆ ಕಾಣುವ ಅಸ್ಪಶ್ಯತೆಗಳು ಕಡಿಮೆಯಾಗಿ ಬಣ್ಣ ವಿನ್ಯಾಸಗಳನ್ನು ಬದಲಾಯಿಸಿಕೊಂಡಿವೆ. ಆದರೆ ಒಳಗಡೆ ಇರುವ ಜಾತಿ ಕೊಳಕು ಈಗಲೂ ಜೀವಂತವಾಗಿದೆ. ಅದೃಶ್ಯವಾದ ಅಸ್ಪೃಶ್ಯತೆ ಬಹಳಷ್ಟು ಅಪಾಯಕಾರಿಯಾಗಿದೆ. ಇಂದು ಮೀಸಲಾತಿ ಫಲಾನುಭವಿಗಳಲ್ಲಿ ಕೀಳರಿಮೆ ಹುಟ್ಟಿಸುವ ಮೂಲಕ ಹೊಸ ರೀತಿಯ ಅಸ್ಪೃಶ್ಯತೆಯನ್ನು ಆಚರಿಸಲಾಗುತ್ತಿದೆ ಎಂದು ಚಿಂತಕ ದಿನೇಶ್ ಅಮೀನ್ ಮಟ್ಟು ಹೇಳಿದರು.
ಉಡುಪಿ ಅಂಬೇಡ್ಕರ್ ಯುವಸೇನೆಯ ವತಿಯಿಂದ ರವಿವಾರ ಬನ್ನಂಜೆ ನಾರಾಯಣಗುರು ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಅಂಬೇಡ್ಕರ್ ಯುವಜನೋತ್ಸವವನ್ನು ಸೇನೆಯ ಲಾಂಛನ ಬಿಡುಗಡೆಗೊಳಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಖಾಸಗೀಕರಣದಿಂದ ಇಂದು ಮೀಸಲಾತಿಗೆ ಬಹಳ ದೊಡ್ಡ ಅಪಾಯ ಎದುರಾಗಿದೆ. ನಮ್ಮ ದೇಶದಲ್ಲಿ ಮೀಸಲಾತಿ ನೀಡುವ ಸರಕಾರಿ ಉದ್ಯೋಗ ಇರುವುದೇ ಕೇವಲ ಶೇ.2ರಷ್ಟು ಮಾತ್ರ. ಇಂದು ಖಾಸಗೀಕರಣದ ಮೂಲಕ ಮೀಸಲಾತಿ ಉದ್ಯೋಗವನ್ನೇ ಕಸಿದುಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಆದುದರಿಂದ ಸರಕಾರಿ ಉದ್ಯೋಗದ ಮೀಸಲಾತಿ ಜೊತೆ ಖಾಸಗಿ ರಂಗದಲ್ಲೂ ಮೀಸಲಾತಿ ನೀಡುವ ಕುರಿತು ದೊಡ್ಡ ಮಟ್ಟದಲ್ಲಿ ಹೋರಾಟವನ್ನು ಕಟ್ಟ ಬೇಕಾಗಿದೆ ಎಂದು ಅವರು ಕರೆ ನೀಡಿದರು.
ಬಹುಸಂಸ್ಕೃತಿಯ ತೊಟ್ಟಿಲು ಕರಾವಳಿಯಲ್ಲಿ ಜಾತಿ, ಧರ್ಮಗಳನ್ನು ಮೀರಿದ ಅವೈದಿಕ ಪರಪಂರೆ ಇದೆ. ಇಂದು ಈ ಅವೈದಿಕ ಪರಂಪರೆಯ ಒಳಗಡೆ ಕೋಮುವಾದಿಗಳು ನಿಧಾನವಾಗಿ ನುಸುಳುತ್ತಿದ್ದಾರೆ. ನಮ್ಮಲ್ಲಿ ಜನಗಳನ್ನು ಮೀರಿದ ದೈವಗಳಿಲ್ಲ. ನಮ್ಮ ಜೊತೆ ಜಗಳ, ಮಾತನಾಡುವ ಹಾಗೂ ಮುಟ್ಟಿಸಿ ಕೊಳ್ಳುವ ಭೂತಗಳ ಮೇಲೆ ವೈದಿಕ ಪರಪಂರೆ ದಾಳಿ ಮಾಡುತ್ತಿದೆ. ಹೀಗೆ ಕಣ್ಣಿಗೆ ಕಾಣದ ಸಾಂಸ್ಕೃತಿಕ ರಾಜಕಾರಣವು ಬಹಳ ಅಪಾಯಕಾರಿಯಾಗಿದೆ ಎಂದು ಅವರು ಹೇಳಿದರು.
ಇಂದು ಸಂವಿಧಾನದಿಂದ ನಮಗೆ ರಕ್ಷಣೆ ದೊರೆಯುತ್ತಿದೆ. ಸಂವಿಧಾನ ಎಲ್ಲಿಯವರೆಗೆ ಈ ದೇಶದಲ್ಲಿ ಸುರಕ್ಷಿತವಾಗಿರುತ್ತದೆಯೋ ಅಲ್ಲಿಯವರೆಗೆ ನಾವು ಸುರಕ್ಷಿತವಾಗಿರುತ್ತೇವೆ. ಸಂವಿಧಾನವನ್ನು ಬದಲಾವಣೆ ಮಾಡಲು 100 ನರೇಂದ್ರ ಮೋದಿ ಬಂದರೂ ಸಾಧ್ಯವಾಗುವುದಿಲ್ಲ. ಅದನ್ನು ಮುಟ್ಟಲು ಬಂದರೆ ಮಹಾ ಕ್ರಾಂತಿಯೇ ಆಗಬಹುದು. ಆದರೆ ಇಂದು ಸಂವಿಧಾನವನ್ನು ತಿದ್ದುಪಡಿ ಮಾಡುವ ಮೂಲಕ ದುರ್ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ದೂರಿದರು.
ಅಂಬೇಡ್ಕರ್ ಎನಿಸಿದ ಪ್ರಕಾರ ಸಂವಿಧಾನವನ್ನು ರಚಿಸಲು ಅವರಿಗೆ ಆಗಿಲ್ಲ. ಪ್ರಜಾಪ್ರಭುತ್ವ ಎಂಬ ಸೌಧದೊಳಗೆ ದೇವರ ಬದಲು ದೆವ್ವಗಳು ಸೇರಿಕೊಂಡರೆ ಆ ಸಂವಿಧಾನವನ್ನು ಸುಡಬೇಕಾಗುತ್ತದೆ ಎಂದು ಅಂಬೇಡ್ಕರ್ ಹೇಳಿದ್ದರು. ಸಂವಿಧಾನ ವಿರೋಧಿಗಳು ಪ್ರಜಾಪ್ರಭುತ್ವದ ದೇಗುಲದ ಒಳಗೆ ನುಸುಳಿದರೆ ಆ ಸಂವಿಧಾನಕ್ಕೆ ಅರ್ಥವೇ ಇರುವುದಿಲ್ಲ. ಅಗತ್ಯ ಬಿದ್ದರೆ ಆ ಸಂವಿಧಾನವನ್ನು ಸುಡುವ ಅಧಿಕಾರ ನಮಗೆ ಇದೆಯೇ ಹೊರತು ದಲಿತ, ಅಂಬೇಡ್ಕರ್ ವಿರೋಧಿಗಳಿಗೆ ಅಲ್ಲ ಎಂದರು.
ಅಂಬೇಡ್ಕರ್ ವಿರೋಧಿಗಳು ಅವರನ್ನು ನಿರ್ಲಕ್ಷ, ತುಚ್ಛೀಕರಣ ಹಾಗೂ ಆರಾಧನೆಯ ಮೂಲಕ ಮುಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅಂಬೇಡ್ಕರ್ ಮೀಸಲಾತಿಯನ್ನು ಜಾರಿಗೆ ತಂದಿರುವುದು ಜಾತಿಯನ್ನು ನಾಶಪಡಿಸಲೇ ಹೊರತು ಬಲಪಡಿಸಲು ಅಲ್ಲ. ಮೀಸಲಾತಿಯು ಆರ್ಥಿಕ ತಾರತಮ್ಯವನ್ನು ನಿವಾರಣೆ ಮಾಡಬಹುದೇ ವಿನಃ ಸಾಮಾಜಿಕ ತಾರತಮ್ಯವನ್ನು ನಿವಾರಿಸಲು ಆಗುವುದಿಲ್ಲ ಎಂದರು.
ಬಾರಕೋಲು ಪತ್ರಿಕೆಯ ಸಂಪಾದಕ ಬಿ.ಆರ್.ರಂಗಸ್ವಾಮಿ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆಗೈದು, ರಕ್ತನಿಧಿಯನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಅಂಬೇಡ್ಕರ್ ಯುವಸೇನೆಯ ಅಧ್ಯಕ್ಷ ಹರೀಶ್ ಸಾಲ್ಯಾನ್ ಮಲ್ಪೆ ವಹಿಸಿದ್ದರು.
ವೇದಿಕೆಯಲ್ಲಿ ಮಲ್ಪೆ ಪರಿಶಿಷ್ಟ ಜಾತಿ ಮೀನುಗಾರರ ಸಂಘದ ಅಧ್ಯಕ್ಷೆ ರಾಧ ತೊಟ್ಟಂ, ಯುವ ಮುಖಂಡರಾದ ಶಶಿಕಲಾ ಪಾಲನ್ ತೊಟ್ಟಂ, ದಿನೇಶ್ ಮೂಡುಬೆಟ್ಟು, ಅನಿಲ್ ಅಂಬಲಪಾಡಿ, ಸಂಪತ್ ಗುಜ್ಜರಬೆಟ್ಟು, ರಮೇಶ್ ಮಾಬೆನ್ ಅಮ್ಮುಂಜೆ, ಮಂಜುನಾಥ ಕಪ್ಪೆಟ್ಟು ಉಪಸ್ಥಿತರಿದ್ದರು.
ದಲಿತ ಚಿಂತಕ ಜಯನ್ ಮಲ್ಪೆ ಮಾತನಾಡಿದರು. ಜಯ ಸಾಲ್ಯಾನ್ ಪಾಳೆಕಟ್ಟೆ ಸ್ವಾಗತಿಸಿದರು. ಭರತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮೊದಲು ಕಪ್ಪೆಟ್ಟುವಿನಿಂದ ಹೊರಟ ಅಂಬೇಡ್ಕರ್ ರ್ಯಾಲಿಯು ಬ್ರಹ್ಮಗಿರಿ, ಅಜ್ಜರಕಾಡು, ಜೋಡುರಸ್ತೆ, ಕೆ.ಎಂ.ಮಾರ್ಗ, ಸರ್ವಿಸ್, ಸಿಟಿ ಬಸ್ ನಿಲ್ದಾಣದಿಂದ ಬನ್ನಂಜೆಗೆ ಆಗಮಿಸಿತು.
ಪೇಜಾವರ ಸ್ವಾಮೀಜಿಗೆ ಅರಳುಮರಳು
ಪೇಜಾವರ ಸ್ವಾಮೀಜಿಗೆ ತುಂಬಾ ವಯಸ್ಸಾಗಿ ಅರಳುಮರಳಾಗಿದೆ. ಅವರು ಕ್ಷಣಕ್ಷಣಕ್ಕೆ ಏನೇನೋ ಮಾತನಾಡುತ್ತಿದ್ದಾರೆ. ರಾಮ ಮಂದಿರ ನಿರ್ಮಿಸುವ, ಸಂವಿಧಾನ ಬದಲಾಯಿಸುವ ಕುರಿತ ಅವರ ಮಾತುಗಳನ್ನು ಬಹಳ ಗಂಭೀರ ವಾಗಿ ತೆಗೆದುಕೊಳ್ಳಬೇಕಾಗಿಲ್ಲ. ಆದುದರಿಂದ ಅವರ ವಯಸ್ಸಿನ ಕಡೆ ನೋಡಿ ಅವರನ್ನು ಕ್ಷಮಿಸಬೇಕು. ಉಡುಪಿ ಚಲೋ ಮಾಡಿದಾಗ ಉಡುಪಿಯನ್ನು ಶುದ್ಧ ಮಾಡುವುದಾಗಿ ಹೇಳಿದ ಶಿಷ್ಯನನ್ನು ಹೊಂದಿರುವ ಗುರು ಪೇಜಾವರ ಸ್ವಾಮೀಜಿ ಹೇಗೆ ಅಂತ ನಾವು ತಿಳಿದುಕೊಳ್ಳಬೇಕಾಗಿದೆ ಎಂದು ದಿನೇಶ್ ಅಮೀನ್ ಮಟ್ಟು ಟೀಕಿಸಿದರು.
ದೇವಸ್ಥಾನಗಳಲ್ಲಿ ದಲಿತ ಅರ್ಚಕರನ್ನು ನೇಮಿಸಿ ಪೂಜೆ ಮಾಡಿಸುವುದರಿಂದ ದಲಿತರಿಗೆ ಏನು ಸಾಧಿಸಲು ಆಗುವುದಿಲ್ಲ. ಅದರ ಬದಲು ಅಸ್ಪೃಶ್ಯತೆ ಆಚರಿಸುವ ದೇವಸ್ಥಾನಗಳನ್ನು ಬಹಿಷ್ಕರಿಸುವ ಕೆಲಸ ಆಗಬೇಕು. ಸಹಪಂಕ್ತಿಗೆ ಅವಕಾಶ ನೀಡದ ಉಡುಪಿ ಮಠದ ಹತ್ತಿರ ಕೂಡ ಯಾರು ಸುಳಿಯಬಾರದು ಎಂದು ಅವರು ತಿಳಿಸಿದರು.