×
Ad

‘ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ ಪ್ರಾಮಾಣಿಕ ಪ್ರಯತ್ನ’

Update: 2018-12-23 18:39 IST

ಮಣಿಪಾಲ, ಡಿ.23: ನಷ್ಟದಿಂದ ಮುಚ್ಚಿರುವ ಬ್ರಹ್ಮಾವರದ ಸಹಕಾರಿ ಸಕ್ಕೆರೆ ಕಾರ್ಖಾನೆಯನ್ನು ಪುನರಾರಂಭಿಸುವ ಬಗ್ಗೆ ಮುಖ್ಯಮಂತ್ರಿಗಳು ಈಗಾಗಲೇ ಭರವಸೆ ನೀಡಿದ್ದಾರೆ. ರೈತರು ಸಹ ಆಸಕ್ತಿಯಿಂದ ಕಬ್ಬು ಬೆಳೆಯಲು ಮುಂದೆ ಬಂದಿದ್ದಾರೆ. ಆದುದರಿಂದ ರೈತರ ಆಶಾಕಿರಣವಾದ ಈ ಸಕ್ಕರೆ ಕಾರ್ಖಾನೆಯನ್ನು ಮತ್ತೆ ಆರಂಭಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ ಹೇಳಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಕೃಷಿ ಮತ್ತು ತೋಟಗಾರಿಕಾ ಇಲಾಖೆ ಹಾಗೂ ಉಡುಪಿ ಕೃಷಿಕ ಸಮಾಜದ ಸಂಯುಕ್ತ ಆಶ್ರಯದಲ್ಲಿ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ರವಿವಾರ ಆಯೋಜಿಸಲಾದ ರೈತರ ದಿನಾಚರಣೆ ಹಾಗೂ ರೈತ ಜನ ಸಂಪರ್ಕ ಸಭೆ ಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಜಾಗತೀಕರಣದ ಬಳಿಕ ದೇಶದಲ್ಲಿ ರೈತರ ಸಮಸ್ಯೆಗಳು ಬೃಹದಾಕಾರವಾಗಿ ಬೆಳೆದು ನಿಂತಿದೆ. ದೇಶಕ್ಕೆ ಅನ್ನವನ್ನು ನೀಡುವ ರೈತರು ಪ್ರಕೃತಿಯನ್ನು ಅಪಾರ ವಾಗಿ ಪ್ರೀತಿಸಿ, ಅದನ್ನು ಸಂರಕ್ಷಿಸುವಲ್ಲಿ ಪ್ರಧಾನ ಪಾತ್ರ ವಹಿಸುತಿದ್ದಾರೆ. ಇಂಥ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸ ಬೇಕಾಗಿದೆ ಎಂದು ಅವರು ನುಡಿದರು.

ಡಾ.ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರದ ಹಿಂದಿನ ಯುಪಿಎ ಸರಕಾರ ರೈತರ ಸುಮಾರು 70,000 ಕೋಟಿ ರೂ.ಸಾಲವನ್ನು ಮನ್ನಾ ಮಾಡಿತ್ತು. ಕರ್ನಾಟಕದಲ್ಲಿ ಸಿದ್ಧರಾಮಯ್ಯ ಸರಕಾರ ಸಹ ರೈತರ ಸಾಲಮನ್ನಾ ಮಾಡಿತ್ತು. ಇದೀಗ ಸಮ್ಮಿಶ್ರ ಸರಕಾರವೂ ಹಂತಹಂತವಾಗಿ ರೈತರ ಸಾಲವನ್ನು ಮನ್ನಾ ಮಾಡುತ್ತಿದೆ.ಇದಕ್ಕೆ ಹಲವು ತೊಡಕುಗಳಿವೆ ಎಂದು ಜಯಮಾಲಾ ಹೇಳಿದರು.

ರೈತರ ಮೇಲಿನ ನಿಜವಾದ ಕಾಳಜಿಯಿಂದ ರಾಜ್ಯ ಸರಕಾರ ರೈತರಿಗೆ ಅನುಕೂಲಕರವಾಗ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಆದರೆ ಅದು ನಿಜವಾದ ರೈತನಿಗೆ ತಲುಪುವಲ್ಲಿ ಹಲವು ಲೋಪದೋಷಗಳಾಗುತ್ತಿವೆ. ಇವುಗಳನ್ನು ಸರಿಪಡಿಸಿಕೊಂಡು ರೈತರಿಗೆ ಅವು ತಲುಪುವಂತಾಗಬೇಕು. ಜಿಲ್ಲೆ ಗಳಲ್ಲಿರುವ ರೈತ ಸಂಘಟನೆಗಳ ಮುಖಂಡರು ಇಂಥ ಯೋಜನೆ ಅರ್ಹ ರೈತರಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಜಿಲ್ಲೆಯ ರೈತರು ಹಲವು ಸಮಸ್ಯೆಗಳಿಂದ ಬಳಲುತಿದ್ದಾರೆ. ಸರಕಾರ ಮಾಡುವ ರೈತರ ಸಾಲ ಮನ್ನಾದ ನಿಜವಾದ ಪ್ರಯೋಜನ ಉಡುಪಿ ಜಿಲ್ಲೆಯ ಪ್ರಾಮಾಣಿಕ ರೈತರಿಗೆ ಸಿಗುತ್ತಿಲ್ಲ. ಸಾಲ ಮರುಪಾವತಿಸಿದ ರೈತರಿಗೂ ಅದರ ಲಾಭ ಸಿಗುವಂತಾ ಗಬೇಕು ಎಂದರು.

ಕಾರ್ಯಕ್ರಮದಲ್ಲಿ ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ಜಿಪಂ ಸದಸ್ಯರಾದ ಜನಾರ್ದನ ತೋನ್ಸೆ, ಮೈರ್ಮಾಡಿ ಪ್ರಭಾಕರ ಶೆಟ್ಟಿ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಸಿಇಓ ಸಿಂಧು ಬಿ.ರೂಪೇಶ್, ಎಡಿಸಿ ವಿದ್ಯಾಕುಮಾರಿ, ಕುಂದಾಪುರ ಉಪವಿಭಾಗಾಧಿಕಾರಿ ಭೂಬಾಲನ್, ಕುಂದಾಪುರದ ಪ್ರಾದೇಶಿಕ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಎಸ್. ಪ್ರಭಾಕರನ್, ವನ್ಯಜೀವಿ ವಿಭಾಗದ ಡಿಎಫ್‌ಓ ಗಣೇಶ್ ಭಟ್, ಭಾಕಿಸಂನ ಜಿಲ್ಲಾಧ್ಯಕ್ಷ ಬಿ.ವಿ.ಪೂಜಾರಿ ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಕೆಂಪೇಗೌಡ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಕೃಷಿ ನಿರ್ದೇಶಕ ಚಂದ್ರಶೇಖರ ನಾಯ್ಕಾ ವಂದಿಸಿದರೆ, ಸಹಾಯಕ ಕೃಷಿ ನಿರ್ದೇಶಕ ಮೋಹನ್‌ರಾಜ್ ಕಾರ್ಯಕ್ರಮ ನಿರೂಪಿಸಿದರು.

ಜಿಲ್ಲೆಯ 40 ಮಂದಿ ರೈತರಿಗೆ ಸನ್ಮಾನ

ಸಮಾರಂಭದಲ್ಲಿ ರಾಜ್ಯಮಟ್ಟದ, ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ವಿವಿಧ ಪ್ರಶಸ್ತಿಗಳನ್ನು ಜಯಿಸಿದ ಜಿಲ್ಲೆಯ ಸುಮಾರು 40 ಮಂದಿ ರೈತರನ್ನು 7.60 ಲಕ್ಷ ರೂ.ನಗದು ಬಹುಮಾನದೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ಹಾಗೂ ಶಾಸಕ ಕೆ.ರಘುಪತಿ ಭಟ್ ರೈತರನ್ನು ಸನ್ಮಾನಿಸಿದರು.

 ಸನ್ಮಾನಿತರಲ್ಲಿ 2016-17ನೇ ಸಾಲಿನ ರಾಜ್ಯ ಮಟ್ಟದ ಉದಯೋನ್ಮುಖ ಕೃಷಿ ಪಂಡಿತ ಪ್ರಶಸ್ತಿ ವಿಜೇತ ಹೆಗ್ಗುಂಜೆಯ ಶಂಭುಶಂಕರ್ ರಾವ್ (25,000ರೂ), 2017-18ನೇ ಸಾಲಿನ ಆತ್ಮ ಯೋಜನೆಯಡಿ ರಾಜ್ಯ ಮಟ್ಟದ ಉದಯೋನ್ಮುಖ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದ ಪೆರ್ಡೂರು ಜಕ್ಕಬೆಟ್ಟಿನ ಶಬರೀಶ್ ಸುವರ್ಣ, ಕಾರ್ಕಳ ಚಾರದ ರಾಜೇಶ್ ಪೂಜಾರಿ (ತಲಾ 25,000) ಸೇರಿದ್ದಾರೆ.

ಅಲ್ಲದೇ 2017-18ನೇ ಸಾಲಿನ ಉಡುಪಿ ಜಿಲ್ಲಾ ಮಟ್ಟದಲ್ಲಿ ಮೊದಲ ಮೂರು ಕೃಷಿ ಪ್ರಶಸ್ತಿ ಪಡೆದ ಕಾರ್ಕಳ ಪಳ್ಳಿಯ ಸುಬ್ಬಯ್ಯ ಶೆಟ್ಟಿ (85.86 ಕ್ವಿಂ-ಹೆ.ಗೆ-30ಸಾವಿರರೂ.), ಗಂಗೊಳ್ಳಿಯ ಗೋವಿಂದ (82.69ಕ್ವಿಂ.- 25,000ರೂ.), ಐರೋಡಿಯ ರಾಬರ್ಟ್ ರಾಡ್ರಿಗಸ್ (82.24ಕ್ವಿಂ.- 20,000ರೂ.) ಅವರನ್ನು ಸಹ ಸನ್ಮಾನಿಸಲಾಯಿತು.

2018-19ನೇ ಸಾಲಿನ ಆತ್ಮಯೋಜನೆಯಡಿ ಶ್ರೇಷ್ಠ ಆಸಕ್ತ ಗುಂಪು ಪ್ರಶಸ್ತಿ ಪಡೆದ (ತಲಾ 20,000ರೂ.) ಮೂರು ರೈತ ಗುಂಪುಗಳನ್ನು- ಕುಂದಾಪುರ ಹೊಸ್ಕೋಟೆ ಬಿಜೂರು ಕಲ್ಪವೃಕ್ಷ ತೆಂಗು ಉತ್ಪಾದಕರ ಸೌಹಾರ್ದ ಸೊಸೈಟಿ, ಕುಂದಾಪುರ ಹರ್ಕಾಡಿ ಗಾವಳಿ ಬ್ರಹ್ಮನಿಧಿ ರೈತ ಶಕ್ತಿ ಗುಂಪು ಹಳ್ಳಾಡಿ ಹಾಗೂ ಕಾರ್ಕಳ ಕುಕ್ಕಂದೂರು ಉಮಾಮಹೇಶ್ವರಿ ರೈತ ಶಕ್ತಿ ಸ್ವಸಹಾಯ ಸಂಘವನ್ನು ಗೌರವಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News