ಜಾತಿಧರ್ಮದ ಭೇದವಿಲ್ಲದ ಮಾನವೀಯ ಗುಣ ಮುಖ್ಯ: ವಿನಯ ಹೆಗ್ಡೆ

Update: 2018-12-23 13:26 GMT

ಶಿರ್ವ, ಡಿ.23: ಜಾತಿ ಮತ್ತು ಧರ್ಮದ ಹೆಸರಿನಲ್ಲಿ ದೇಶದಲ್ಲಿ ಇಂದು ಒಂದು ಅನಪೇಕ್ಷಿತ ವಾತಾವರಣ ಸೃಷ್ಟಿಯಾಗಿದೆ. ದೇಶದ ಪ್ರಗತಿಯ ದೃಷ್ಟಿಯಲ್ಲಿ ಇದು ಅಪೇಕ್ಷಣೀಯವಲ್ಲ. ಜಾತಿ ಧರ್ಮದ ಬಗೆಗಿನ ಬಿನ್ನಾಭಿಪ್ರಾಯ ವಿದ್ಯಾ ಸಂಸ್ಥೆಗಳಿಗೂ ಸೋಕದಂತೆ ವಿದ್ಯಾರ್ಥಿಗಳು, ಹೆತ್ತವರು, ಶಿಕ್ಷಕರು ಮತ್ತು ಆಡಳಿತ ಮಂಡಳಿ ಜಾಗ್ರತೆ ವಹಿಸಬೇಕು ಎಂದು ನಿಟ್ಟೆ ವಿಶ್ವ ವಿದ್ಯಾನಿಲಯದ ಕುಲಪತಿ ಎನ್.ವಿನಯ ಹೆಗ್ಡೆ ಹೇಳಿದ್ದಾರೆ.

ಶಿರ್ವ ವಿದ್ಯಾವರ್ಧಕ ಸೆಂಟ್ರಲ್ ಸ್ಕೂಲ್‌ನ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಶುಕ್ರವಾರ ಮಾತನಾಡುತಿದ್ದರು. ಧರ್ಮ ತೀರಾ ವೈಯಕ್ತಿಕ ವಿಷಯ. ಪ್ರತಿಯೊಬ್ಬರಿಗೂ ಅವರದೇ ಆದ ಧಾರ್ಮಿಕ ನಂಬಿಕೆಗಳಿ ರುತ್ತವೆ. ಒಬ್ಬರ ನಂಬಿಕೆಗೆ ಇನ್ನೊಬ್ಬರ ವಿರೋಧ ಸಲ್ಲದು. ಎಲ್ಲಿಯವರೆಗೆ ಸಮಾಜ ಎಚ್ಚೆತ್ತುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ನಾವು ಉದ್ದಾರವಾಗು ವುದಿಲ್ಲ. ಈ ನಿಟ್ಟಿನಲ್ಲಿ ವಿದ್ಯಾಸಂಸ್ಥೆಗಳು ವಿದ್ಯಾರ್ಥಿಗಳಲ್ಲಿ ಜಾತಿಧರ್ಮದ ಭೇದವಿಲ್ಲದ ಮಾನವೀಯ ಗುಣಗಳನ್ನು ಬೆಳೆಸಬೇಕು ಎಂದರು.

ಮುಖ್ಯ ಅತಿಥಿಗಳಾಗಿದ್ದ ಮಂಗಳೂರು ತೇಜಸ್ವಿನಿ ಆಸ್ಪತ್ರೆಯ ನಿರ್ದೇಶಕ ನಿಟ್ಟೆ ವಿವಿಯ ಸಹ ಕುಲಪತಿ ಪ್ರೊ.ಎಂ.ಶಾಂತಾರಾಮ ಶೆಟ್ಟಿ ಮಾತನಾಡಿ, ವಿದ್ಯಾಸಂಸ್ಥೆಗಳು ಅತ್ಯುತ್ತಮ ಇಂಜಿನಿಯರ್ಸ್‌, ಡಾಕ್ಟರ್ಸ್‌, ಲಾಯರ್ಸ್‌ಗಳನ್ನು ತಯಾರು ಮಾಡಿದರಷ್ಟೇ ಸಾಲದು. ಉತ್ತಮ ಮನುಷ್ಯರನ್ನು ತಯಾರು ಮಾಡ ಬೇಕು. ಕಲಿಕೆ, ಹೋರಾಟ, ದುಡಿಮೆ ವಿಷಯದಲ್ಲಿ ನೈತಿಕತೆಯನ್ನು ಪಾಲಿಸುವ ವ್ಯಕ್ತಿ ಮಾತ್ರ ಶ್ರೇಷ್ಟ್ರ ಮನುಷ್ಯ ಆಗುತ್ತಾನೆ ಎಂದು ತಿಳಿಸಿದರು. ಶಾಲಾಡಳಿತ ಮಂಡಳಿಯ ಅಧ್ಯಕ್ಷ ಗುರ್ಮೆ ಸುರೇಶ್ ಪಿ.ಶೆಟ್ಟಿ, ಶಾಲಾ ಸಂಚಾಲಕ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿದರು. ಶಿರ್ವ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ಬಯ್ಯ ಹೆಗ್ಡೆ, ಆಡಳಿತಾಧಿಕಾರಿ ಪ್ರೊ.ವೈ ಭಾಸ್ಕರ್ ಶೆಟ್ಟಿ, ಆಡಳಿತ ಮಂಡಳಿಯ ಕೋಶಾಧಿಕಾರಿ ಜಗದೀಶ್ ಅರಸ್ ಉಪಸ್ಥಿತರಿದ್ದರು.

ಪ್ರಾಂಶುಪಾಲ ಪ್ರಶಾಂತ್ ಕುಮಾರ್ ನಂಬಿಯಾರ್ ವರದಿ ವಾಚಿಸಿದರು. ಶಿಕ್ಷಕಿ ಅನಿತಾ ಉಪಾಧ್ಯಾಯ ಪ್ರತಿಭಾವಂತ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ವಿದ್ಯಾರ್ಥಿಗಳಾದ ಅಂಕಿತ ಸ್ವಾಗತಿಸಿದರು. ವಿಶ್ವಜಿತ್ ವಂದಿಸಿದರು. ರೆವೊನಾ ರೀಷಾ ಡಿಸೋಜ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News