ಗೆಲುವಿನ ಸಂಭ್ರಮದಲ್ಲಿದ್ದಾಗ ಹೃದಯಾಘಾತ: ಕಂಬಳ ಪ್ರೇಮಿ ಕಾಪು ವಿನು ವಿಶ್ವನಾಥ ನಿಧನ
ಬಂಟ್ವಾಳ, ಡಿ. 23: ಕಂಬಳ ಪ್ರೇಮಿ, ಪ್ರೋತ್ಸಾಹಕ, ಕಂಬಳ ಓಟದ ಕೋಣದ ಮಾಲಕ ಕಾಪು ನಿವಾಸಿ ವಿನು ವಿಶ್ವನಾಥ ಶೆಟ್ಟಿ (53) ಹೃದಯಾಘಾತದಿಂದ ರವಿವಾರ ಬಂಟ್ವಾಳದಲ್ಲಿ ನಿಧನರಾಗಿದ್ದಾರೆ.
ಬಂಟ್ವಾಳ ತಾಲೂಕಿನ ಸಿದ್ಧಕಟ್ಡೆ ಸಮೀಪದ ಹೊಕ್ಕಾಡಿಗೋಳಿಯಲ್ಲಿ ಶನಿವಾರ ನಡೆದ “ವೀರ – ವಿಕ್ರಮ” ಜೋಡುಕರೆ ಕಂಬಳದಲ್ಲಿ ತಮ್ಮ ಓಟದ ಕೋಣಗಳ ಜೊತೆ ಅಗಮಿಸಿದ್ದರು. ಹಗ್ಗ ಹಿರಿಯ ವಿಭಾಗದಲ್ಲಿ ವಿನು ವಿಶ್ವನಾಥ ಶೆಟ್ಟಿ ಅವರ ಓಟದ ಕೋಣ ಪ್ರಥಮ ಸ್ಥಾನ ಬಂದಿತ್ತು. ಶನಿವಾರ ರಾತ್ರಿಯೇ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ತಮ್ಮ ಓಟದ ಕೋಣ ಫೈನಲ್ ಹಂತಕ್ಕೆ ಬಂದಿದ್ದ ಹಿನ್ನೆಲೆಯಲ್ಲಿ ವಿಶ್ವನಾಥ ಶೆಟ್ಟಿ ಸಹಿತ ಅವರ ಸಹಾಯಕರು ಸಂತಸದಲ್ಲಿದ್ದರು.
ರವಿವಾರ ಬೆಳಗ್ಗೆ ಅವರ ಓಟದ ಕೋಣ ಹಗ್ಗ ಹಿರಿಯ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದಿತ್ತು. ಅದೇ ಹೊತ್ತಿಗೆ ಮತ್ತೆ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಅವರು ತನ್ನ ಕಾರಿನಲ್ಲಿ ಚಾಲಕನ ಜೊತೆ ತೆರಳಿದ್ದರೆ. ಇತ್ತ ಅವರ ಸಹಾಯಕರು ಬಹುಮಾನ ಸ್ವೀಕರಿಸಿದರು.
ಸಿದ್ಧಕಟ್ಟೆಯ ವೈದ್ಯರೊಬ್ಬರಲ್ಲಿ ಕಾರು ಚಾಲಕ ಅವರನ್ನು ಪರೀಕ್ಷಿಸಿದ್ದು, ವೈದ್ಯರ ಸಲಹೆಯಂತೆ ಮಂಗಳೂರಿಗೆ ಕರೆ ತರುತ್ತಿದ್ದಂತೆ ದಾರಿ ಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ತುಂಬೆ ಆಸ್ಪತ್ರೆಯಲ್ಲಿ ದಾಖಲಿಸಿದಾಗ ಅವರು ನಿಧನರಾಗಿರುವುದನ್ನು ಪರೀಕ್ಷಿಸಿದ ವೈದ್ಯರು ದೃಢಪಡಿಸಿದ್ದಾರೆ. ಪ್ರಸ್ತುತ ಸಾಲಿನ ಐದು ಕಂಬಳಗಳ ಪೈಕಿ 4 ಕಂಬಳಕೂಟದಲ್ಲಿ ಅವರ ಓಟದ ಕೋಣಗಳು ಭಾಗವಹಿಸಿ ಈ ನಾಲ್ಕ ಕಂಬಳ ಕೋಟದಲ್ಲಿ ವಿನು ವಿಶ್ವನಾಥ ಶೆಟ್ಟಿ ಅವರ ಕೋಣಗಳು ಪ್ರಥಮ ಸ್ಥಾನ ಪಡೆದಿತ್ತು ಎಂದು ತಿಳಿದು ಬಂದಿದೆ.
ಮುಂಬೈ ಮತ್ತು ದುಬೈಯಲ್ಲಿ ಹೊಟೇಲ್ ಉದ್ಯಮಿಯಾಗಿದ್ದ ವಿನು ವಿಶ್ವನಾಥ್ ಶೆಟ್ಟಿ ಕಂಬಳ ಪ್ರೇಮಿಯಾಗಿದ್ದರು. ಅನೇಕ ಕಂಬಳಗಳಲ್ಲಿ ಅವರ ಕೋಣಗಳು ಪ್ರಥಮ ಸ್ಥಾನ ಪಡೆದಿತ್ತು. ಪಡುಬಿದ್ರಿಯ ತನ್ನ ಮನೆಯಲ್ಲಿ ಕೋಣಗಳಿಗೆ ಲಕ್ಷಾಂತರ ರೂ. ವೆಚ್ಚದಲ್ಲಿ ಈಜು ಕೊಳ ತಯಾರಿಸಿ ಹೆಸರುವಾಸಿಯಾಗಿದ್ದರು. ಪ್ರಾಣಿ ಪ್ರಿಯರಾದ ವಿಶ್ವನಾಥ್ ಶೆಟ್ಟಿ ಓಟದ ಕೋಣಗಳಿಗೆ ಹವಾನಿಯಂತ್ರಿಕ ಕೊಠಡಿ ಕೂಡ ತಯಾರಿಸಿ ಅತ್ಯಂತ ಪ್ರೀತಿಯಿಂದ ಸಾಕಿ ಸಲಹುತ್ತಿದ್ದರು.
ಸಮಾಜ ಸೇವಕರಾಗಿದ್ದ ವಿಶ್ವನಾಥ್ ಶೆಟ್ಟಿ ಪತ್ನಿ, ಪುತ್ರ - ಪುತ್ರಿ ಸೇರಿದಂತೆ ಕುಟುಂಬಸ್ಥರು, ಸ್ನೇಹಿತರು ಹಾಗೂ ಕಂಬಳ ಅಭಿಮಾನಿಗಳನ್ನು ಅಗಲಿದ್ದಾರೆ.